ರಾಯಚೂರು: ಕೋವಿಡ್-19 ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ನಿಗಧಿತ ವೆಚ್ಚಕ್ಕಿಂತ ಹೆಚ್ಚು ಹಣ ಪಡೆದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಕೋವಿಡ್ -19 ಚಿಕಿತ್ಸೆಗಾಗಿ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿದೆ. ಅದಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವ ಹಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತೆ, ಹಣ ಇರುವವರು ಖಾಸಗಿ ಆಸ್ಪತ್ರೆಗೆ ಹೋಗಬಹುದು ಎಂದರು.
ಕೊವಿಡ್ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ವಿರೋಧ ಪಕ್ಷದವರು ವಿರೋಧ ಮಾಡಲೆಂದೆ ಟೀಕೆ ಮಾಡುತ್ತಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ಆ ರೀತಿ ಮಾತನಾಡುವುದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಜವಾಬ್ದಾರಿ ಅರಿತು ಮಾತನಾಡಿದರೆ ಅದಕ್ಕೆ ಅರ್ಥವಿರುತ್ತದೆ ಎಂದು ಎಚ್ ಡಿಕೆ ಟೀಕೆಗೆ ಉತ್ತರಿಸಿದರು.
ಯಾವುದೇ ಕಾರಣಕ್ಕೂ ಪುನಃ ಲಾಕ್ ಡೌನ್ ಮಾಡುವುದು ಕಷ್ಟದ ಕೆಲಸ. ಲಾಕ್ ಡೌನ್ ಇದ್ದಾಗಲೂ ಕೋವಿಡ್-19 ಸೋಂಕು ಹರಡಿದೆ. ಇಲ್ಲದಾಗಲೂ ಹರಡಿದೆ. ಲಾಕ್ ಡೌನ್ ಮಾಡುವುದೊಂದೆ ಪರಿಹಾರ ಅಲ್ಲ, ಜನರ ಸಹಕಾರ ಕೂಡ ಮುಖ್ಯ ಎಂದರು.
ಅಂತಾರಾಜ್ಯ ಸಾರಿಗೆ ಆರಂಭಕ್ಕೆ ಚಿಂತನೆ ನಡೆಸುತ್ತಿದ್ದೇವೆ. ಮಹಾರಾಷ್ಟ್ರ ಹೊರತು ಪಡಿಸಿ ಕೊವಿಡ್ ಸೋಂಕಿತರ ಪ್ರಮಾಣ ಕಡಿಮೆಯಿರುವ ಅಕ್ಕಪಕ್ಕದ ರಾಜ್ಯಗಳಿಗೆ ಈ ಬಗ್ಗೆ ಪತ್ರ ಬರೆದಿದ್ದೇವೆ ಎಂದ ಅವರು ರಾಜ್ಯ ಸಾರಿಗೆ ಇಲಾಖೆಯಲ್ಲಿ ಎಲ್ಲೂ ಟಾರ್ಗೆಟ್ ನೀಡಿಲ್ಲ. ಅರಿಯದೇ ಓರ್ವ ಅಧಿಕಾರಿ ಟಾರ್ಗೆಟ್ ನೀಡಿದ್ದ. ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.