Advertisement

ಡ್ರಗ್ಸ್ ತನಿಖೆ ಹಾದಿ ತಪ್ಪಿಸುವ ಯತ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ: ಡಿಸಿಎಂ ‌ಕಾರಜೋಳ

01:42 PM Sep 13, 2020 | Suhan S |

ಚಿತ್ರದುರ್ಗ: ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ತನಿಖಾ ಹಾದಿ ತಪ್ಪಿಸುವ ಉದ್ದೇಶದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಶನಿವಾರ ರಾತ್ರಿ ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅತಿವೃಷ್ಠಿ ಪರಿಸ್ಥಿತಿ ಮುಚ್ಚಿ ಹಾಕಲು, ಕೋವಿಡ್ ವೈಫಲ್ಯ ಮರೆಮಾಚಲು ಡ್ರಗ್ಸ್ ತನಿಖೆ ವರದಿ ಸೋರಿಕೆ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಸರ್ಕಾರ ಕೋವಿಡ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದ ಕಾರಣಕ್ಕೆ ವೈರಸ್ ನಿಯಂತ್ರಣದಲ್ಲಿದೆ. ಈ ಬಗ್ಗೆ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಕಳೆದ ವರ್ಷದ ಅತಿವೃಷ್ಠಿಯಿಂದ 35 ಸಾವಿರ ಕೋಟಿಯಷ್ಟು ಹಾನಿಯಾಗಿದೆ. ಸಂಪುಟ ವಿಸ್ತರಣೆಗೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ನೊಂದವರಿಗೆ ಸಾಂತ್ವಾನ ಹೇಳಿದ್ದಾರೆ. ಬೆಳೆ ಹಾನಿಯಾದ ರೈತರಿಗೆ 10 ಸಾವಿರ ರೂ. ಹಾಗೂ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಿದಾರೆ. ಈ ಕೆಲಸಗಳು ಸಿದ್ದರಾಮಯ್ಯ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.

ಜಮೀರ್ ಅಹ್ಮದ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾವು ಯಾರನ್ನೋ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ತಯಾರಿಲ್ಲ. ತನಿಖೆ ನಡೆದು ಆರೋಪ ಸಾಬೀತಾದವರು ಶಿಕ್ಷೆ ಅನುಭವಿಸುತ್ತಾರೆ ಎಂದರು.

Advertisement

 ಒಳ ಮೀಸಲಾತಿ ಚರ್ಚೆಗೆ ಸಿದ್ಧ:  ಸಂವಿಧಾನದ ಆಶಯದಂತೆ 101 ಜಾತಿಗಳಿಗೂ ಮೀಸಲಾತಿ ಸಿಗಬೇಕು. ಯಾರೂ ಮೀಸಲಾತಿಯಿಂದ ವಂಚಿತರಾಗಬಾರದು. ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಕುರಿತು ಸಂಪುಟದಲ್ಲಿ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ ಜಾರಿಗೆ ಮುಂದಾದಗ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಪೀಠ ಒಪ್ಪಿರಲಿಲ್ಲ. ಆದರೆ, ಈಗ ಅದೇ ಕೋರ್ಟ್‌ನ ಐವರು ಸದಸ್ಯರ ಪೀಠ ಬುಟ್ಟಿಯಲ್ಲಿರುವ ಹಣ್ಣುಗಳು ಎಲ್ಲರಿಗೂ ಸಿಗಬೇಕು. ಬಲಾಢ್ಯರ ಪಾಲಾಗಬಾರದು ಎಂದಿದೆ.

ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿ ನೋವು ಅನುಭವಿಸಿದವರಿಗೆ ಮೀಸಲಾತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ಒದಗಿಸಿದ್ದಾರೆ ಎಂದು ತಿಳಿಸಿದರು.

 ನಾಯಕತ್ವ ಬದಲಾವಣೆ ಇಲ್ಲ:  ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಇದೆಲ್ಲಾ ಊಹಾಪೋಹ. ಇದು ಮಾಧ್ಯಮಗಳ ಸೃಷ್ಟಿ ಇದರಲ್ಲಿ ಸಂತ್ಯಾಂಶ ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next