ಕಲಬುರಗಿ: ರಾಜ್ಯದಲ್ಲಿ ಪ್ರಸಕ್ತವಾಗಿ ಎದುರಾಗಿರುವ ಪ್ರವಾಹದಿಂದ ಹಾನಿಯಾಗಿರುವ ರಸ್ತೆ, ಸೇತುವೆ ಹಾಗೂ ಇಲಾಖಾ ಕಟ್ಟಡಗಳ ಸಮೀಕ್ಷೆ ಮುಂದುವರೆದಿದೆ ಎಂದು ಲೋಕೋಪಯೋಗಿ, ಸಮಾಜ ಕಲ್ಯಾಣ ಸಚಿವ, ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಸೇಡಂ ಪಟ್ಟಣದಲ್ಲಿಂದು 150 ಕೋ ರೂ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು ಮಳೆಯಿಂದ ಲೋಕೋಪಯೋಗಿ ಇಲಾಖೆಯ 2700 ಕೋ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಪ್ರವಾಹದಿಂದ 8000 ಕೋ ರೂ ಹಾನಿಯಾಗಿತ್ತು. ಆದರೆ ಕೊರೊನಾ ಆರ್ಥಿಕ ಸಂಕಷ್ಟ ನಡುವೆ ಮುಖ್ಯ ಮಂತ್ರಿ ಗಳು ಸಮಾಜ ಹಾಗೂ ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದರು.
ಕೋವಿಡ್ ಮಧ್ಯೆಯೂ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆ ನಿರ್ಮಾಣ: ಕೋವಿಡ್ ಹಾವಳಿ ಮಧ್ಯೆಯೂ ರಾಜ್ಯದಾದ್ಯಂತ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆಗಳ ನಿರ್ಮಾಣ ಹಾಗೂ ವಸತಿನಿಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ರಾಜ್ಯದಾದ್ಯಂತ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 47 ವಸತಿ ಶಾಲೆಗಳ ಕಟ್ಟಡ ಪೂರ್ಣಗೊಂಡಿದೆ. 181 ವಸತಿಶಾಲೆಗಳ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಇದರಿಂದಾಗಿ ಬಡವರ ಮಕ್ಕಳಿಗೂ ಶಿಕ್ಷಣ ಸಿಗುತ್ತಿದ್ದು, ಇಲಾಖೆಯ ವಸತಿ ಶಾಲೆಗಳಲ್ಲಿ ಓದಿದ ಮಕ್ಕಳ ಫಲಿತಾಂಶ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ರಾಜ್ಯದ ಸರಾಸರಿಗಿಂತಲೂ ಉತ್ತಮವಾಗಿದೆ ಎಂದರು.
ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಸಂಸದ ಡಾ. ಉಮೇಶ ಜಾಧವ್, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ಮುಂತಾದವರಿದ್ದರು.