ಬಾಗಲಕೋಟೆ: ರಾಜ್ಯದ ರೈತರೇ, ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸಬೇಡಿ. ನಿಮಗೆ ಕೈಮುಗಿದು ಕೇಳಿಕೊಳ್ಳುವೆ. ತಿದ್ದುಪಡಿ ಕಾನೂನು ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಿ. ಈಗಿರುವ ಕಾನೂನು ರೈತಪರ ಇಲ್ಲದಿದ್ದರೆ ಎರಡು ವರ್ಷದ ಬಳಿಕ ಮತ್ತೆ ತಿದ್ದುಪಡಿ ಮಾಡೋಣ. ನಾವು ತಂದಿರುವ ತಿದ್ದುಪಡಿ ಕಾನೂನು ರೈತರ ಪರವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಗಣರಾಜ್ಯೋತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ದೇಶದ ಸಂವಿಧಾನವನ್ನು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ. ಭೂ ಸುಧಾರಣೆ, ಎಪಿಎಂಸಿ ಕಾಯಿದೆ ತಿದ್ದುಪಡಿಗಳು ರೈತರ ಪರವಾಗಿವೆ. ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶದಿಂದ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ. ಅವರ ಮಾತು ಕೇಳಿ ರೈತರೂ ಪ್ರತಿಭಟನೆ ನಡೆಸುವುದು ಬೇಡ ಎಂದರು.
ಇದನ್ನೂ ಓದಿ:ರೈತರ ಹೆಸರಿನಲ್ಲಿ ಕಾಂಗ್ರೆಸ್ ಡೋಂಗಿ ರಾಜಕಾರಣ ಮಾಡುತ್ತಿದೆ: ಶ್ರೀರಾಮುಲು
ಹೊಲದಲ್ಲಿ ಬಿತ್ತನೆ ಮಾಡುವ ರೈತರಿಂದ ವಿರೋಧವಿಲ್ಲ: ದೇಶದ ಸುಮಾರು ಶೇ.95ರಷ್ಟು ರೈತರು ಈ ಕಾನೂನು ವಿರೋಧ ಮಾಡಿಲ್ಲ. ಹೊಲದಲ್ಲಿ ಕೂರಿಗೆ ಹಿಡಿದು ಬಿತ್ತನೆ ಮಾಡುವ ರೈತರಂತೂ ಮೊದಲೇ ವಿರೋಧಿಸಿಲ್ಲ. ಹೊಲದಲ್ಲಿ ಬಿತ್ತನೆ ಮಾಡದ ಶೇ.5ರಷ್ಟು ರೈತರು ಮಾತ್ರ ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಕೂರಿಗೆ ಹಿಡಿದವರಿಂದ ಕಾನೂನು ತಿದ್ದುಪಡಿಗೆ ವಿರೋಧವೇ ಇಲ್ಲ ಎಂದು ಹೇಳಿದರು.
ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಮಾರಾಟಕ್ಕೆ ಮುಕ್ತ ಅವಕಾಶ ಇರಬೇಕು. ಹೀಗಾಗಿಯೇ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಪ್ರತಿಯೊಬ್ಬರೂ ಕೃಷಿ ಮಾಡಬೇಕೆಂಬ ಉದ್ದೇಶದಿಂದ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಇದಕ್ಕೆ ರಾಜ್ಯದ ಶೇ.95ರಷ್ಟು ರೈತರು ವಿರೋಧ ಮಾಡಿಲ್ಲ. ಸದ್ಯ ತಿದ್ದುಪಡಿ ಕಾನೂನು ಅನುಷ್ಠಾನಗೊಳ್ಳಬೇಕು. ಅದು ಸರಿಯಾಗಿಲ್ಲ ಎಂದರೆ, ಮತ್ತೆ ತಿದ್ದುಪಡಿ ತರಲು ಅವಕಾಶವಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್ Rally, ರೈತರ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ
ಕಾಂಗ್ರೆಸ್‌ನವರೂ ಸಹಿ ಮಾಡಿದ್ದಾರೆ: ನಾನು ಕೇಂದ್ರದ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದೇನೆ. ಯೋಜನಾ ಸಮಿತಿಯ ಸದಸ್ಯನೂ ಆಗಿರುವೆ. ಆ ಸಮಿತಿಯಲ್ಲಿ ಕಾಂಗ್ರೆಸ್‌ನವರು ಸೇರಿದಂತೆ ಎಲ್ಲ ಪಕ್ಷದ ಸಂಸದರೂ ಇದ್ದಾರೆ. ಭೂಸುಧಾರಣೆ ಕಾಯಿದೆ, ಎಪಿಸಿಎಂ ತಿದ್ದುಪಡಿ ಕಾಯಿದೆಗೆ ಕಾಂಗ್ರೆಸ್ ಸಂಸದರೂ ಸಹಿತ ಎಲ್ಲರೂ ಸಹಿ ಮಾಡಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ನವರೇ ಭೂಸುಧಾರಣೆ ಕಾಯಿದೆ ತಿದ್ದುಪಡಿ ಮಾಡುವುದಾಗಿ ಹೇಳಿಕೊಂಡಿದ್ದರು. ಈಗ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ನಡೆಸಿದ್ದಾರೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.