ಬೀದರ: ಡಿಸಿಸಿ ಬ್ಯಾಂಕ್‌ಗೆ 2016-17ನೇ ಸಾಲಿನಲ್ಲಿ 6.47 ಕೋಟಿ ರೂ. ಲಾಭವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್‌ನ ಡಾ| ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ನಡೆದ ಬ್ಯಾಂಕ್‌ನ 95ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ 2015-16ನೇ ಸಾಲಿನಲ್ಲಿ 5.98 ಕೋಟಿ ರೂ. ಲಾಭ ಗಳಿಸಿತ್ತು. ಈ ವರ್ಷ ಲಾಭದಲ್ಲಿ 50 ಲಕ್ಷ ರೂ. ಹೆಚ್ಚಳವಾಗಿದೆ ಎಂದು ಹೇಳಿದರು.
ಬ್ಯಾಂಕ್ 384 ಸದಸ್ಯರನ್ನು ಹೊಂದಿದೆ. ಒಟ್ಟು ಷೇರು ಬಂಡವಾಳ 101.45 ಕೋಟಿ ಇದೆ. 1,316.57 ಕೋಟಿ ಠೇವಣಿ ಹೊಂದಿದೆ. 2,634.33 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 1,938.93 ಕೋಟಿ ರೂ. ಸಾಲ ನೀಡಲಾಗಿದೆ. ಈ ವರ್ಷವೂ ಬ್ಯಾಂಕ್ ಅಡಿಟ್‌ನಲ್ಲಿ ಎ ಶ್ರೇಣಿ ಪಡೆದಿದೆ. ಸ್ವಸಹಾಯ ಗುಂಪುಗಳ ರಚನೆ ಮತ್ತು ಸಾಲ ಜೋಡಣೆ ಕಾರ್ಯಕ್ಕಾಗಿ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ ಜೇಟ್ಲಿ ಅವರಿಂದ ಪ್ರಶಸ್ತಿ ಪಡೆದಿದೆ. ರಾಜ್ಯಮಟ್ಟದ ಎರಡು ಪ್ರಶಸ್ತಿಗಳನ್ನು ಗಳಿಸಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ವರ್ಷ ಬೆಳೆ ವಿಮೆ ಮಾಡಿಸುವಲ್ಲಿ ಇಡೀ ದೇಶದಲ್ಲಿ ಮೊದಲ ಸ್ಥಾನ ಗಳಿಸಿತ್ತು. ಈ ವರ್ಷವೂ ಸಹ ಅದೇ ಸ್ಥಾನದಲ್ಲಿದೆ. ಕಳೆದ ವರ್ಷ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ನಷ್ಟದ ಕಾರಣ ಸುಮಾರು 140 ಕೋಟಿ ರೂ. ಪರಿಹಾರ ದೊರಕಿದೆ. ಬೆಳೆ ವಿಮೆ ಪರಿಹಾರ ಸಿಗದ ಇನ್ನೂ ಕೆಲ ರೈತರಿಗೆ ಪರಿಹಾರ ಒದಗಿಸಿಕೊಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.
ಬ್ಯಾಂಕ್‌ನಿಂದ ಒದಗಿಸುವ ಕೃಷಿ ಸಾಲದಲ್ಲಿ ಶೇ. 25ರಷ್ಟು ಹೆಚ್ಚಳ ಮಾಡಬೇಕು ಎಂಬ ಪಿಕೆಪಿಎಸ್ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಅವರು, ಮೊದಲು ಬ್ಯಾಂಕ್ ನೀಡುವ ಅಲ್ಪಾವಧಿ ಕೃಷಿ ಸಾಲದ ಶೇ. 100ರಷ್ಟನ್ನು ನಬಾರ್ಡ್ ಬ್ಯಾಂಕ್ ಡಿಸಿಸಿ ಬ್ಯಾಂಕ್‌ಗೆ ಸಾಲದ ರೂಪದಲ್ಲಿ ಕೊಡುತ್ತಿತ್ತು. ಇದೀಗ ಶೇ. 55ರಷ್ಟು ಮಾತ್ರ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಆಗಬಹುದು. ಆದ್ದರಿಂದ ಬ್ಯಾಂಕ್ ಸಶಕ್ತವಾಗಬೇಕಿದೆ. ಈ ಎಲ್ಲವನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ನಬಾರ್ಡ್ ಜೊತೆಗೆ ಚರ್ಚಿಸಿ ಸಾಲದ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
2016-17ನೇ ಸಾಲಿನಲ್ಲಿ ಸಾಲ ವಸೂಲಾತಿ, ಠೇವಣಿ ಸಂಗ್ರಹ ಹಾಗೂ ಸ್ವಸಹಾಯ ಗುಂಪುಗಳ ಜೋಡಣೆಯಲ್ಲಿ ಗುರಿ ಸಾಧನೆ ಮಾಡಿದ ಪಿಕೆಪಿಎಸ್ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಭೀಮರಾವ ಪಾಟೀಲ, ನಿರ್ದೇಶಕರಾದ ಅಮರಕುಮಾರ ಖಂಡ್ರೆ, ವಿಜಯಕುಮಾರ ಲಿಂಗೋಜಿ, ರಾಮರೆಡ್ಡಿ ಗಂಗವಾರ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ಅಬ್ದುಲ್ ಸಲೀಂ, ಬಸವರಾಜ ಹೆಬ್ಟಾಳೆ, ಕಾಶಿನಾಥ ಬೀರಗೆ, ಪೆಂಟಾರೆಡ್ಡಿ ಚಂಡಕಾಪುರೆ, ಜಗನ್ನಾಥರೆಡ್ಡಿ ಎಖೆಳ್ಳಿ, ಶರಣಪ್ಪ ಶಿವಪ್ಪ, ಧೂಳಪ್ಪ ಬಿರಾದಾರ, ಸಂಗಮೇಶ ಪಾಟೀಲ ಅಲಿಯಂಬರ್, ಸಿಇಒ ಮಲ್ಲಿಕಾರ್ಜುನ ಮಹಾಜನ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ, ಉಪ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ಸದಾಶಿವ ಪಾಟೀಲ, ಪಂಡರಿರೆಡ್ಡಿ, ರಾಜಕುಮಾರ ಆಣದೂರೆ, ಅನಿಲ ಪಾಟೀಲ ಇದ್ದರು. ಬಸವರಾಜ ಕಲ್ಯಾಣ ನಿರೂಪಿಸಿದರು.