ಮಂಡ್ಯ: ಒಪ್ಪಂದದಂತೆ ರಾಜೀನಾಮೆ ನೀಡದೇ ಅಧಿಕಾರದಲ್ಲಿ ಮುಂದುವರಿಯುತ್ತಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್ ಡಿ.27ರಂದು ರಾಜೀನಾಮೆ ನೀಡುವುದು ಖಚಿತವಾಗಿದೆ. ಮದ್ದೂರು ಪ್ರವಾಸಿ ಮಂದಿರದಲ್ಲಿ ಶಾಸಕರಾದ ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಯಶಸ್ವಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿ.ಡಿ.ಹರೀಶ್‌ರ ಮನವೊಲಿಸಲಾಗಿದೆ. ಆನಂತರ ನಿರ್ದೇಶಕರು ಯಾರಿಗೆ ಒಲವು ತೋರುವರೋ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಅಂಬರೀಶ್ ಇಟ್ಟಿದ್ದ ಬೇಡಿಕೆ: ತಿಂಗಳ ಹಿಂದಷ್ಟೇ ಶಾಸಕ ಅಂಬರೀಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದ ರಾಜೀನಾಮೆ ಪಡೆಯುವಂತೆ ಬೇಡಿಕೆ ಇಟ್ಟಿದ್ದರು. ಒಪ್ಪಂದದಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ. ನೀವು ರಾಜೀನಾಮೆ ಪಡೆಯುವುದಕ್ಕೆ ಕ್ರಮ ವಹಿಸದಿದ್ದ ಪಕ್ಷದಲ್ಲಿ ಅವಿಶ್ವಾಸ ತಂದು ನಾನೇ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರು.
ಇಬ್ಬರಿಗೂ ಜವಾಬ್ದಾರಿ: ಅಂಬರೀಶ್ ಇಟ್ಟ ಬೇಡಿಕೆಗೆ ಸಮ್ಮತಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಕಾಲಾವಕಾಶ ನೀಡುವಂತೆ ಕೋರಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಂದ ರಾಜೀನಾಮೆ ಪಡೆಯುವ ಜವಾಬ್ದಾರಿಯನ್ನು ಶಾಸಕ ಚೆಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಯವರ ಹೆಗಲಿಗೆ ವಹಿಸಿದ್ದರು. ಅದರಂತೆ ಶುಕ್ರವಾರ ಮದ್ದೂರು ಪ್ರವಾಸಿಮಂದಿರದಲ್ಲಿ ಇಬ್ಬರು ಶಾಸಕರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್ ಸೇರಿದಂತೆ ನಿರ್ದೇಶಕರ ಸಭೆ ಕರೆದಿದ್ದರು.
ವಿವಾದಕ್ಕೆ ಅಧ್ಯಕ್ಷರೇ ಕಾರಣ: ಅಧ್ಯಕ್ಷ ಸ್ಥಾನದ ವಿಚಾರವನ್ನು ಸಮಾಧಾನದಿಂದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಇದನ್ನು ವಿವಾದ ಮಾಡಿಕೊಳ್ಳುವುದು ಬೇಡ ಎಂದು ಇಬ್ಬರೂ ನಾಯಕರು ತಿಳಿಸಿದರು. ಒಪ್ಪಂದದಂತೆ ಅಧ್ಯಕ್ಷರು ರಾಜೀನಾಮೆ ನೀಡಲಿಲ್ಲ. ನಾವೂ ಅವರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಅವರು ಅದಕ್ಕೆ ಕಿವಿಗೊಡದೆ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿದರು.
ನಮಗೆ ಅವಿಶ್ವಾಸ ಪತ್ರ ಸಲ್ಲಿಸದೆ ವಿಧಿಯೇ ಇರಲಿಲ್ಲ. ಇಷ್ಟೆಲ್ಲಾ ವಿವಾದಕ್ಕೆ ಅಧ್ಯಕ್ಷರೇ ಕಾರಣ ಎಂದು ಹಲವು ನಿರ್ದೇಶಕರು ದೂರಿದರು.
ರಾಜೀನಾಮೆಗೆ ಮನವೊಲಿಕೆ: ಈಗ ಹಳೆಯ ವಿಚಾರಗಳೆಲ್ಲಾ ಬೇಡ. ಮುಂದಿನ ಬುಧವಾರ (ಡಿ.27) ಅಧ್ಯಕ್ಷ ಸ್ಥಾನಕ್ಕೆ ವಿ.ಡಿ.ಹರೀಶ್ ರಾಜೀನಾಮೆ ನೀಡಲಿದ್ದಾರೆ. ಆನಂತರ ನಿರ್ದೇಶಕರು ಯಾರನ್ನು ಸರ್ವಾನುಮತದಿಂದ ಆಯ್ಕೆ ಮಾಡುವರೋ ಅವರನ್ನು ಅಧ್ಯಕ್ಷರನ್ನಾಗಿ ಮಾಡೋಣ. ಈ ವಿಚಾರದಲ್ಲಿ ಗೊಂದಲಗಳು ಬೇಡ ಎಂದು ನಿರ್ದೇಶಕರಿಗೆ ತಿಳಿಸಿದಾಗ ಅವರೂ ಅದಕ್ಕೆ ಸಮ್ಮತಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಇದರೊಂದಿಗೆ ಶಾಸಕ ಅಂಬರೀಶ್‌ರ ಎರಡು ಬೇಡಿಕೆಗಳಲ್ಲಿ ಒಂದು ಬೇಡಿಕೆ ಬಗೆಹರಿದಂತಾಗಿದೆ.
ಅಶ್ವತ್ಥ್ ಆಯ್ಕೆಗೆ ಅಂಬಿ ಆಸಕ್ತಿ: ವಿ.ಡಿ.ಹರೀಶ್ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ಅಮರಾವತಿ ಚಂದ್ರಶೇಖರ್ ಸಹೋದರ ಅಶ್ವತ್ಥ್ರನ್ನು ಆಯ್ಕೆ ಮಾಡಲು ಅಂಬರೀಶ್ ಆಸಕ್ತರಾಗಿದ್ದಾರೆ. ಆದರೆ, ಇವರ ಆಯ್ಕೆಗೆ ನಿರ್ದೇಶಕರು ಯಾವ ರೀತಿ ಬೆಂಬಲ
ನೀಡುವರು ಎನ್ನುವುದು ಕುತೂಹಲ ಕೆರಳಿಸಿದೆ. ಇನ್ನೊಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯಾಗಬೇಕಿದ್ದು ಅದಕ್ಕೂ ತೀವ್ರ ಪೈಪೋಟಿ ಶುರುವಾಗಿದೆ. ಶೀಘ್ರದಲ್ಲೇ ಅಧ್ಯಕ್ಷರ ಬದಲಾವಣೆಯಾಗುವುದು ನಿಶ್ಚಿತವಾಗಿದೆ.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್, ಮಾಜಿ ಶಾಸಕ ಎಚ್.ಬಿ.ರಾಮು, ಅಪೆಕ್ಸ್
ಬ್ಯಾಂಕ್ ನಿರ್ದೇಶಕ ಜೋಗಿಗೌಡ, ನಿರ್ದೇಶಕರಾದ ಪುಟ್ಟರಾಮು, ಮಲ್ಲಯ್ಯ, ಅಶ್ವತ್ಥ್, ಸಾತನೂರು ಸತೀಶ್, ರವಿ ಇತರರಿದ್ದರು.