Advertisement

‘ಡಿಸಿ ಮನ್ನಾ ಜಮೀನು ಹಂಚಿಕೆಗೆ ಕ್ರಮ’

11:51 AM Dec 25, 2018 | Team Udayavani |

ಮಹಾನಗರ : ಇತ್ತೀಚೆಗೆ ನಡೆಸಿರುವ ಸರ್ವೆಯ ಪ್ರಕಾರ ಮಂಗಳೂರು ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ವ್ಯಾಪ್ತಿಯಲ್ಲಿ 66 ಎಕ್ರೆ ಡಿಸಿ ಮನ್ನಾ ಜಾಗ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಜಮೀನಿನ ಹಂಚಿಕೆಗಾಗಿ 4,059 ಅರ್ಜಿಗಳು ಬಂದಿದ್ದು, ಶೀಘ್ರದಲ್ಲಿ ಜಮೀನು ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಮಂಗಳೂರು ತಹಶೀಲ್ದಾರ್‌ ಟಿ.ಜಿ.ಗುರುಪ್ರಸಾದ್‌ ತಿಳಿಸಿದ್ದಾರೆ.

Advertisement

ಮಂಗಳೂರು ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಂಗಳೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದುಕೊರತೆಗಳ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಸಿ ಮನ್ನಾ ಜಾಗ ಎಂಬ ಪರಿಕಲ್ಪನೆ ದ.ಕ. ಮತ್ತು ಉಡುಪಿ ಭಾಗದಲ್ಲಿ ಮಾತ್ರವಿದೆ. ಇಲ್ಲಿ ಮೀಸಲಿಟ್ಟ ಜಾಗವನ್ನು ಬೇರೆ ಹೋಬಳಿಯ ನಿವೇಶನರಹಿತರಿಗೆ ನೀಡುವುದಕ್ಕೆ ಪೂರಕವಾದ ಹೊಸ ನಿಯಮವನ್ನು ರೂಪಿಸುವ ನಿಟ್ಟಿನಲ್ಲಿ ಸದ್ಯವೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಕೊಣಾಜೆಯಲ್ಲಿ ನಾಲ್ಕು ಎಕ್ರೆ ಡಿಸಿ ಮನ್ನಾ ಜಾಗವಿದ್ದು ಅಲ್ಲಿ ಬಂದಿರುವ ಅರ್ಜಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅಲ್ಲಿ ಬೇರೆ ಹೋಬಳಿಯವರಿಗೆ ಅವಕಾಶ ನೀಡಬಹುದೇ ಎಂಬ ಬಗ್ಗೆ ಶೀಘ್ರ ಇತ್ಯರ್ಥ ಮಾಡಲಾಗುವುದು ಎಂದರು. ಆಯಾ ಗ್ರಾಮದವರಿಗೆ ಪ್ರಥಮ ಆದ್ಯತೆ ಹಾಗೂ ಹೋಬಳಿಯವರಿಗೆ ದ್ವಿತೀಯ ಹಾಗೂ ಇತರ ಹೋಬಳಿಯವರಿಗೆ ತೃತೀಯ ಆದ್ಯತೆ ಸದ್ಯಕ್ಕೆ ನೀಡಲಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲು ಜಮೀನು ಹಂಚಿಕೆ ಮಾಡಿ ಅನಂತರದಲ್ಲಿ ಒಂದು ಕುಟುಂಬದಿಂದ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಹಾಗೂ ಎರಡೆರಡು ಬಾರಿ ಸಲ್ಲಿಕೆಯಾದ ಅರ್ಜಿಗಳು ಎಷ್ಟು ಎಂಬುದನ್ನು ಪಟ್ಟಿ ಮಾಡಲಾಗುತ್ತದೆ ಎಂದರು.

ಕೆಲವು ಕಡೆಗಳಲ್ಲಿ ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿ ಕೆಲವರಿಂದ ಅರ್ಜಿಗಳು ಬಂದಿಲ್ಲ. ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಹಾಗಾಗಿ ಅರ್ಹರಿದ್ದಲ್ಲಿ ಆಯಾ ಗ್ರಾಮ ಪಂಚಾಯತ್‌ ಅಥವಾ ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ತನಿಖೆಯ ಸಂದರ್ಭ ಕೆಲವರು ಎಂಟು- ಒಂಭತ್ತು ಕಡೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದೇ ಕುಟುಂಬದವರು ಬೇರೆ ಬೇರೆ ಕಡೆ ಅರ್ಜಿಗಳನ್ನು ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಅದೆಲ್ಲವನ್ನೂ ತಿರಸ್ಕರಿಸಲಾಗುತ್ತದೆ. ಸರಕಾರದ ನೂತನ ಕಾಯ್ದೆ ಪ್ರಕಾರ ಈ ಹಿಂದೆ ಫಾರಂ ಸಂಖ್ಯೆ 50/53ರಲ್ಲಿ ಅರ್ಜಿ ಕೊಡದವರು, ಅವರ ಸ್ವಾಧೀನದಲ್ಲಿ ಸರಕಾರಿ ಜಮೀನು ಇದ್ದಲ್ಲಿ, ಫಾರಂ ಸಂಖ್ಯೆ 57ರಲ್ಲಿ ಅರ್ಜಿ ನೀಡಲು ಮುಂದಿನ ಮಾರ್ಚ್‌ವರೆಗೆ ಅವಕಾಶ ಕಲ್ಪಿಸಲಾಗಿದೆ. ಕೊಂಪದವು, ತೋಕೂರು ಮುಂತಾದ ಕಡೆ ದಲಿತರು ಸರಕಾರಿ ಜಮೀನಿನಲ್ಲಿ ವಾಸವಿದ್ದರೂ ಅರ್ಜಿ ನೀಡಿಲ್ಲ. ಮಾಹಿತಿ ಇಲ್ಲದೆ ಈ ಸಮಸ್ಯೆ ಆಗಿತ್ತು. ಇದಕ್ಕೊಂದು ಅವಕಾಶವಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದರು.

Advertisement

ಪದೇ ಪದೇ ಜಾತಿ ಪ್ರಮಾಣಪತ್ರ ಕೇಳುವಂತಿಲ್ಲ!
ಶಾಲೆಗಳಲ್ಲಿ ಪದೇ ಪದೇ ಜಾತಿ ಪ್ರಮಾಣಪತ್ರ ಕೇಳಲಾಗುತ್ತಿದೆ ಎಂದು ಪಿ. ಕೇಶವ ಅವರು ದೂರಿದರು. ತಹಶೀಲ್ದಾರ್‌ ಮಾತನಾಡಿ, ಒಂದು ಬಾರಿ ನೀಡಿದ ಜಾತಿ ಪ್ರಮಾಣ ಪತ್ರ ಜೀವನ ಪರ್ಯಂತ ಮಾನ್ಯವಾಗಿರುತ್ತದೆ. ಆದ್ದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪದೇ ಪದೇ ಹೊಸ ಜಾತಿ ಪ್ರಮಾಣ ಪತ್ರವನ್ನು ಕೇಳುವಂತಿಲ್ಲ. ಈ ಬಗ್ಗೆ ಈಗಾಗಲೇ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಒತ್ತಾಯ ಮಾಡುತ್ತಿದ್ದರೆ ಆ ಬಗ್ಗೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು. ಕಿನ್ನಿಗೋಳಿ ಗ್ರಾ.ಪಂ.ನ ಎಳತ್ತೂರು ಎಂಬಲ್ಲಿ 7 ದಲಿತ ಕುಟುಂಬಗಳು ವಿದ್ಯುತ್‌, ನೀರು, ಹಕ್ಕುಪತ್ರ ಸೌಲಭ್ಯ ಇಲ್ಲದೆ ವಾಸಿಸುತ್ತಿವೆ. ಒಳಚರಂಡಿ, ಶೌಚಾಲಯದ ವ್ಯವಸ್ಥೆಯೂ ಇಲ್ಲ ಎಂದು ದಲಿತ ನಾಯಕ ಜಗದೀಶ್‌ ಸಭೆಯ ಗಮನ ಸೆಳೆದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರ್‌ ಹೇಳಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಘು ಆಲನಹಳ್ಳಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಡಿಸಿ ಮನ್ನಾ ಜಮೀನು ಒತ್ತುವರಿ ತೆರವು
ಡಿಸಿ ಮನ್ನಾ ಜಮೀನನ್ನು ಈಗಾಗಲೇ ಒತ್ತುವರಿ ಮಾಡಿರುವವರನ್ನು ತೆರವು ಮಾಡಬೇಕಿದೆ. ಅದಕ್ಕೊಂದು ಸಮಿತಿ ರಚಿಸಲಾಗಿದ್ದು, 8-9 ಕಡೆಗಳಲ್ಲಿ ಒತ್ತುವರಿ ಗುರುತಿಸಲಾಗಿದೆ. ಪರಿಣಾಮಕಾರಿಯಾದ ಕೃಷಿ ಇಲ್ಲದೇ ಇರುವ ಜಾಗ, ಬೇಲಿ ಹಾಕಿ ಶೆಡ್‌ ನಿರ್ಮಿಸಿರುವುದನ್ನು ಕೂಡಲೇ ತೆರವು ಗೊಳಿಸಲಾಗುತ್ತದೆ. ಇದರಿಂದ ಮಂಗಳೂರು ಮತ್ತು ಮೂಡುಬಿದಿರೆ ತಾಲೂಕು ಸೇರಿ 112 ಎಕ್ರೆ ಜಾಗ ಲಭ್ಯವಾಗಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಡಿಸಿ ಮನ್ನಾ ಜಾಗ ಲಭ್ಯವಿರದ ಕಾರಣ ಕಣ್ಣೂರು ಗ್ರಾಮದಲ್ಲಿ 11.5 ಎಕ್ರೆ ಸರಕಾರಿ ಜಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಕಾಯ್ದಿರಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಜತೆ ಚರ್ಚಿಸಿ 5 ಎಕರೆ ಜಾಗವನ್ನು ಕಾಯ್ದಿರಿಸಿ, ಅದನ್ನು ಮನಪಾಕ್ಕೆ ಹಸ್ತಾಂತರಿಸಿ, ಅಲ್ಲಿ ಫ್ಲ್ಯಾಟ್‌ ಮಾದರಿಯಲ್ಲಿ ಮನೆ ಹಂಚಿಕೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮಂಗಳೂರು ತಹಶೀಲ್ದಾರ್‌ ಟಿ.ಜಿ. ಗುರುಪ್ರಸಾದ್‌ ತಿಳಿಸಿದ್ದಾರೆ.

ಜ್ಯೋತಿಯಲ್ಲ-ಅಂಬೇಡ್ಕರ್‌ ಸರ್ಕಲ್‌
ಅಂಬೇಡ್ಕರ್‌ ವೃತ್ತ ಆಗಿ ನಿರ್ಣಯ ಆಗಿದ್ದರೂ ಇನ್ನೂ ಅದನ್ನು ಜ್ಯೋತಿ ವೃತ್ತವೆಂದೇ ಕರೆಯಲಾಗುತ್ತಿದೆ. ಬಸ್‌ ಗಳ ನಾಮ ಫ‌ಲಕಗಳಲ್ಲಿಯೂ ಜ್ಯೋತಿ ಎಂದೇ ನಮೂದಾಗಿರುವುದು ನಿಯಮ ಉಲ್ಲಂಘನೆ ಎಂದು ದಲಿತ ಮುಖಂಡರಾದ ರಘು ಎಕ್ಕಾರು, ಜಗದೀಶ್‌ ಪಾಂಡೇಶ್ವರ ಆರೋಪಿಸಿದರು. ಉತ್ತರಿಸಿದ ತಹಶೀಲ್ದಾರ್‌, ನಗರದ ಅಂಬೇಡ್ಕರ್‌ ವೃತ್ತದ ಬಗ್ಗೆ ಕಳೆದ ವರ್ಷವೇ ಮನಪಾ ಹಾಗೂ ಜಿಲ್ಲಾಡಳಿತದಿಂದ ನಿರ್ಣಯ ಆಗಿದೆ. ಈ ಬಗ್ಗೆ ಬಸ್ಸುಗಳಲ್ಲಿಯೂ ನಾಮಫ‌ಲಕದಲ್ಲಿ ಅಳವಡಿಕೆಗೆ ಆರ್‌ಟಿಒಗೆ ಪತ್ರ ಬರೆಯಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next