ಬೀದರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳ ಹೆಚ್ಚಳದಿಂದ ಬ್ರಿಮ್ಸ್ ಆಸ್ಪತ್ರೆ (ಕೋವಿಡ್)ಯಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಪರಿಸ್ಥಿತಿಯನ್ನು ಸರಿ ದಾರಿಗೆ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆರೋಗ್ಯ ಅಧಿಕಾರಿಗಳ ಸಮಾಲೋಚನೆ ಜತೆಗೆ ಆಸ್ಪತ್ರೆಗೆ ಸತತ ಭೇಟಿ ಮೂಲಕ ವ್ಯವಸ್ಥೆ ಸರಿಪಡಿಸುತ್ತಿದ್ದಾರೆ.
ಗಡಿ ಜಿಲ್ಲೆಯಲ್ಲಿ ಪ್ರತಿನಿತ್ಯ 200ರಿಂದ 300 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ರಣಕೇಕೆ ಹೆಚ್ಚುತ್ತಿದೆ. ಮಂಗಳವಾರ ಒಂದೇ ದಿನ 7 ಜನರು ಸೋಂಕಿಗೆ ಬಲಿಯಾಗಿದ್ದು, ಕೇವಲ 20 ದಿನದಲ್ಲಿ 32 ಜನ ಪ್ರಾಣ ಕಳೆದುಕೊಂಡಿದ್ದಾರೆ. 5 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲೆಗೆ ಬರುವವರ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲ, ರೆಮಿಡಿಸಿವಿರ್ ಚುಚ್ಚುಮದ್ದು ಮತ್ತು ಆಮ್ಲಜನಕದ ಕೊರತೆ ಕುರಿತು ಆರೋಪಗಳು ಹೆಚ್ಚುತ್ತಿದ್ದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.
ಇನ್ನೂ ಬ್ರಿಮ್ಸ್‌ನಲ್ಲಿ ಹಾಸಿಗೆ ಸಿಗದ ಹಿನ್ನೆಲೆ ಮೂರ್‍ನಾಲ್ಕು ಸೋಂಕಿತರು ಆವರಣದ ಫುಟ್‌ಪಾತ್‌ನಲ್ಲಿ ಮಲಗಿದ್ದ ಮತ್ತು ಉಸಿರಾಟದಿಂದ ನರಳಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆಸ್ಪತ್ರೆಯಲ್ಲಿ ಬೆಡ್‌ಗಳು ಭರ್ತಿಯಾಗಿದ್ದು, ಕಾಯಬೇಕಾಗುತ್ತದೆ ಎಂದು ಬ್ರಿಮ್ಸ್ ಮುಖ್ಯ ವೈದ್ಯಾಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಿರುವ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಇಲ್ಲ. ಇದು ಸುಳ್ಳು ಸುದ್ದಿ. ಇದಕ್ಕೆ ಯಾರು ಕಿವಿಕೊಡಬಾರದು. ಇಂಥ ಕೃತ್ಯ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಬ್ರಿಮ್ಸ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರಲ್ಲದೇ ರೋಗಿಗಳಿಗೆ ಮಾತುಕತೆ ನಡೆಸಿ ಆತ್ಮಸ್ಥೆçರ್ಯ ತುಂಬಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಸ್ಪಂದಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಬ್ರಿಮ್ಸ್ ಹಳೆ ಆಸ್ಪತ್ರೆ ಜೊತೆಗೆ ಹೊಸ ಆಸ್ಪತ್ರೆಯಲ್ಲಿಯೂ ಹಾಸಿಗೆ ಕಾಯ್ದಿರಿಸಲಾಗಿದೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿಯೂ ಕೋವಿಡ್‌ಗಾಗಿ ಬೆಡ್‌ಗಳ ವ್ಯವಸ್ಥೆಗಳನ್ನು ಮಾಡಿದ್ದು, ರೋಗಿಗಳು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಡಿಸಿ, ಕೋವಿಡ್‌ಗೆ ಹೆದರಬಾರದು. ಕೋವಿಡ್ ಪಾಸಿಟಿವ್ ವರದಿಯಾದ ಕೂಡಲೇ ನೇರವಾಗಿ ಬ್ರಿಮ್ಸ್‌ಗೆ ಬರದೇ ತಮ್ಮ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ತಪಾಸಣೆ ಪಡೆದು, ಬಳಿಕ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ತಾಲೂಕು ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೀದರನ ಬ್ರಿಮ್ಸ್‌ಗೆ ಸೂಚಿಸಿದ್ದಲ್ಲಿ ಮಾತ್ರ ಇಲ್ಲಿ ಬಂದು ದಾಖಲಾತಿ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.