ಧಾರವಾಡ: ಕರ್ನಾಟಕ ಸರಕಾರ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಸೋಮವಾರ ಬೆಳಗ್ಗೆ ಡಿಸಿ ದೀಪಾ ಚೋಳನ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಕಮಲಾಪುರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ.4ರಲ್ಲಿ ಆರಂಭವಾಗಿರುವ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ ಮತ್ತು ಪಾಲಕರಿಂದ ಶಾಲೆ ಕುರಿತು ಮಾಹಿತಿ ಪಡೆದರು. ಪ್ರಧಾನ ಗುರುಮಾತೆ ಎಸ್.ಡಿ. ಇಳಕಲ್ಲ ಹಾಗೂ ಸಹ ಶಿಕ್ಷಕಿ ಆರ್.ಎಸ್. ಸಕ್ಕರನಾಯ್ಕರ ವಿದ್ಯಾರ್ಥಿಗಳ ಪ್ರವೇಶ, ದಾಖಲಾತಿ ಕುರಿತು ವಿವರ ನೀಡಿದರು.
ಪರಿಶೀಲನೆ ನಂತರ ಡಿಸಿ ದೀಪಾ ಮಾತನಾಡಿ, ಆಂಗ್ಲ ಮಾಧ್ಯಮಕ್ಕೆ ಒಂದನೇ ವರ್ಗಕ್ಕೆ ಪ್ರವೇಶ ಪಡೆದ ಮಕ್ಕಳಿಗೆ ಪಠ್ಯಪುಸ್ತಕ ಬರುವವರೆಗೆ ಬೇರೆ ಪುಸ್ತಕಗಳನ್ನು ಬಳಸಿ ಸಾಮಾನ್ಯ ಮಾಹಿತಿ ನೀಡಬೇಕು. ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯುವ ಮಕ್ಕಳ ಪಠ್ಯಪುಸ್ತಕವು ಕನ್ನಡ ಮತ್ತು ಆಂಗ್ಲ ಭಾಷೆ ಸೇರಿ ದ್ವಿಭಾಷೆಯಲ್ಲಿ ಇರುತ್ತದೆ. ಮಕ್ಕಳಿಗೆ ಓದಿಸಲು, ಬರೆಸಲು ಇದು ಪಾಲಕರಿಗೆ ನೆರವಾಗುತ್ತದೆ. ಈ ಕುರಿತು ಪಾಲಕರಿಗೆ ತಿಳಿವಳಿಕೆ ನೀಡಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
1ನೇ ವರ್ಗಕ್ಕೆ ವಿದ್ಯಾರ್ಥಿಗಳ ಕಲಿಕೆಗಾಗಿ ಸರಳ ವಿಷಯವಿರುವ ಕನ್ನಡ ಅಥವಾ ಉರ್ದು(ಉರ್ದು ಶಾಲೆಗಳಲ್ಲಿ ಆರಂಭವಾಗಿರುವ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗಾಗಿ), ಪರಿಸರ ಅಧ್ಯಯನ, ಸರಳ ಗಣಿತ ಮತ್ತು ಇಂಗ್ಲಿಷ್ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ಒಟ್ಟು 4 ಪಠ್ಯಗಳಿದ್ದು, ಬೋಧಿಸಲು ಸಮರ್ಥ ಶಿಕ್ಷಕರನ್ನು ನೇಮಿಸಲಾಗಿದೆ. ನೂತನ ಆಂಗ್ಲ ಮಾಧ್ಯಮ ಶಾಲೆಗಳನ್ನು ಈಗಿರುವ ಪ್ರಾಥಮಿಕ ಶಾಲೆಗಳಲ್ಲಿಯೇ ಆರಂಭಿಸಲಾಗಿದೆ. ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ. ಆಂಗ್ಲ ಭಾಷೆ ಕಲಿಯಲು ಆಸಕ್ತಿಯಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ. ಎಲ್ಲ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೂಟು, ಸಾಕ್ಸ್ ನೀಡಲಾಗುತ್ತಿದೆ ಎಂದು ದೀಪಾ ತಿಳಿಸಿದರು.
Advertisement
ಆಲೂರು ವೆಂಕಟರಾವ್ ವೃತ್ತದ ಮಹಿಳಾ ಶಿಕ್ಷಕಿಯರ ತರಬೇತಿ ಶಾಲೆ ಆವರಣದಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಗಿರುವ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ, ಒಂದನೇ ವರ್ಗಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಪಾಠ, ಪಠ್ಯ ಹಾಗೂ ದಿನಚರಿ ಕುರಿತು ವಿಚಾರಿಸಿದರು. ಶಾಲಾ ಪ್ರಧಾನ ಗುರುಮಾತೆ ಎಸ್.ಎಂ. ಖಾನ್ ಹಾಗೂ ಸಹ ಶಿಕ್ಷಕಿಯರಾದ ಬಿ.ಎಸ್. ಯರಗಟ್ಟಿ ಮತ್ತು ಕ್ಯೂ.ಎ. ತರಗಾರ ಮಾಹಿತಿ ನೀಡಿದರು.
Related Articles
Advertisement
ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಉಪನಿರ್ದೇಶಕ ಕಚೇರಿ ಅಧಿಕಾರಿ ಶಿವಲೀಲಾ ಕಳಸನ್ನವರ ಇದ್ದರು.
ಜಿಲ್ಲೆಯಲ್ಲಿ 28 ಆಂಗ್ಲ ಮಾಧ್ಯಮ ಶಾಲೆ:
ಜಿಲ್ಲೆಯಲ್ಲಿ ಒಟ್ಟು 28 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ನಾಲ್ಕು ಶಾಲೆೆ ಮಂಜೂರಾತಿ ನೀಡಲಾಗಿದೆ. ಶಾಲಾ ಮೂಲ ಸೌಕರ್ಯ ಪರಿಗಣಿಸಿ 1ನೇ ವರ್ಗಕ್ಕೆ ಕನಿಷ್ಠ 15ರಿಂದ ಗರಿಷ್ಠ 52 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಇದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆಗುತ್ತಿದೆ. ಒಟ್ಟು 840 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪಡೆಯಲು ಪ್ರಸಕ್ತ ಸಾಲಿನಲ್ಲಿ ಅವಕಾಶವಿದೆ. ಒಟ್ಟು 48 ಜನ ಇಂಗ್ಲಿಷ್ ಸಹಶಿಕ್ಷಕ, ಶಿಕ್ಷಕಿಯರನ್ನು ಡಯಟ್ದಲ್ಲಿ ತರಬೇತಿ ಕೊಡುವ ಮೂಲಕ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಶಿಕ್ಷಕರನ್ನು ಸಿದ್ಧಗೊಳಿಸಲಾಗಿದೆ ಎಂದು ಡಿಸಿ ದೀಪಾ ಚೋಳನ್‌ತಿಳಿಸಿದರು.