Advertisement

ಗ್ರಾಮ ವಾಸ್ತವ್ಯ ಅರ್ಥಪೂರ್ಣ ಕಾರ್ಯಕ್ರಮ: ಡಿಸಿ ವೈಶಾಲಿ

04:37 PM Sep 18, 2022 | Team Udayavani |

ಶಿರಹಟ್ಟಿ: ಗ್ರಾಮೀಣ ಪ್ರದೇಶಗಳ ಕಟ್ಟಕಡೆಯ ವ್ಯಕ್ತಿಗೂ ಸಹ ಸರಕಾರದ ಸಹಾಯ, ಸೌಲಭ್ಯಗಳನ್ನು ಮುಟ್ಟಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ಪರಿಹಾರ ನೀಡಲು ಹಾಗೂ ಹಳ್ಳಿಯ ಜನರ ಪರಿಸ್ಥಿತಿ ಅರಿಯಲು ಗ್ರಾಮ ವಾಸ್ತವ್ಯ ಸರಕಾರದ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಹೇಳಿದರು.

Advertisement

ಅವರು ಶನಿವಾರ ಶಿರಹಟ್ಟಿ ತಾಲೂಕಿನ ಹೆಬ್ಟಾಳ ಗ್ರಾಮದಲ್ಲಿ ಜಿಲ್ಲಾಡಳಿತದ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತಹ ಮಾಸಾಶನಗಳನ್ನು, ರೈತರ ಆರ್‌ಟಿಸಿಯಲ್ಲಿನ ಸಮಸ್ಯೆಗಳು ಸೇರಿದಂತೆ ವಿವಿಧ ಸಮಸ್ಯೆಗಳು ನಮ್ಮ ಹಂತದಲ್ಲಿದ್ದರೆ, ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಲಾಗುವುದು. ಅನುದಾನದ ಕೊರತೆ ಇದ್ದಂತಹ ಸಮಸ್ಯೆಗಳಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ರೈತರು ಕಾಲಕಾಲಕ್ಕೆ ತಮ್ಮ ಆರ್‌ಟಿಸಿ ಉತಾರ ಹಾಗೂ ಪಹಣಿ ಪತ್ರಿಕೆಯನ್ನು ಪರಿಶೀಲಿಸುತ್ತಿರಬೇಕು ಎಂದು ಸಲಹೆ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ, ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಸರಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ಸಾರ್ವಜನಿಕರು ಪರಿಶೀಲಿಸಬೇಕು. ಅಧಿಕಾರಿಗಳು ಸಹ ಎಲ್ಲಿಯೋ ಕುಳಿತುಕೊಂಡು ಫಲಾನುಭವಿಗಳ ಆಯ್ಕೆ ಮಾಡುವುದನ್ನು ಕೈಬಿಡಬೇಕು. ಗ್ರಾಮಕ್ಕೆ ತೆರಳಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಹೇಳಿದರು.

ಯಾವ ಸಿಬ್ಬಂದಿಯೂ ಇಲ್ಲದೇ ಬೀಗ ಹಾಕಲಾಗಿದ್ದ ಗ್ರಾಮದ ಪಶು ಆಸ್ಪತ್ರೆಗೂ ಸಹ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಸಮಾಧಾನಗೊಂಡರು. ಅಲ್ಲದೇ, ಕಾರ್ಯಕ್ರಮಕ್ಕೆ ಪಶು ಇಲಾಖೆ ಜಿಲ್ಲಾ ಅಧಿಕಾರಿಗೆ ಬರುವಂತೆ ಸೂಚಿಸಿದರು.

Advertisement

ತದನಂತರ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ತಮ್ಮ ತಮ್ಮ ವಾರ್ಡ್‌ಗಳಲ್ಲಿನ ಮೂಲಸೌಲಭ್ಯಗಳ ಕುರಿತು ಸಮಸ್ಯೆಯನ್ನು ಅರಿಯುವುದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ತಮ್ಮ ತಮ್ಮ ವಾರ್ಡ್‌ಗಳಲ್ಲಿಯ ಸಮಸ್ಯೆಗಳನ್ನು ಹೇಳುತ್ತಿದ್ದರು. ಜಿಲ್ಲಾಧಿಕಾರಿಗಳು ಸಹ ಸಮಾಧಾನವಾಗಿ ಜನತೆಯ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಗ್ರಾಪಂಗೂ ಭೇಟಿ ನೀಡಿ ಅಗತ್ಯ ಮೂಲ ಸೌಲಭ್ಯಗಳ ಕುರಿತು ಕ್ರಿಯಾಯೋಜನೆಯನ್ನು ತಯಾರಿಸಿ ತಮಗೆ ಸಲ್ಲಿಸಬೇಕೆಂದು ಸೂಚಿಸಿದರು.

ಪಿಎಚ್‌ಸಿಗೆ ಮುಗಿಬಿದ್ದ ಜನತೆ: ಜಿಲ್ಲಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಂತೆಯೇ ಗ್ರಾಮದ ನೂರಾರು ಜನತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ಸಿಬ್ಬಂದಿಯಿಂದ ಅನುಭವಿಸುತ್ತಿರುವ ನರಕಯಾತನೆಯನ್ನು ಮನವರಿಕೆ ಮಾಡಿಕೊಡಲು ಮುಗಿಬಿದ್ದರು. ನಂತರ ಜಿಲ್ಲಾಧಿಕಾರಿಗಳು ಜನತೆಯ ಅಹವಾಲು ಆಲಿಸಿ ಹಾಜರಿದ್ದ ಜಿಲ್ಲಾ ಆರೋಗ್ಯಾಧಿಕಾರಿ ನುಚ್ಚಿನ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ| ಸುಭಾಸ್‌ ದೈಗೊಂಡ ಅವರನ್ನು ಕರೆದು ಇಷ್ಟು ಸಮಸ್ಯೆಗಳಿದ್ದರೂ ಯಾಕೆ ಸುಮ್ಮನಿದ್ದೀರಿ? ಸಮರ್ಪಕ ಸಿಬ್ಬಂದಿ ಏಕೆ ನೀಡಿಲ್ಲ? ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಕೂಡಲೇ ಇಲ್ಲಿಯ ಅವ್ಯವಸ್ಥೆ ಸರಿಪಡಿಸಬೇಕೆಂದು ಸೂಚಿಸಿದರು.

ಅದ್ಧೂರಿ ಸ್ವಾಗತ: ಕನಕವಾಡ ಗ್ರಾಮದ ಬಳಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಹಾಗೂ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಸೇರಿದಂತ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪೂರ್ಣಕುಂಭ ಸ್ವಾಗತ, ನಂದಿಧ್ವಜ ಕುಣಿತ, ಸಮ್ಮಾಳಗಳು, ಡೊಳ್ಳಿನ ಮಜಲುಗಳ ಮೂಲಕ ಸಂಭ್ರಮದ ಸ್ವಾಗತದ ಜೊತೆಗೆ ಜಿಲ್ಲಾಧಿಕಾರಿಗೆ ಮುತ್ತೈದೆಯರು ಕುಂಭ ಹೊರಿಸಿ, ಕುಂಕುಮ ಹಚ್ಚಿ ಸಂಭ್ರಮಿಸಿದರು.

ತದನಂತರ ಚಕ್ಕಡಿಯಲ್ಲಿ ಹೆಬ್ಟಾಳ ಗ್ರಾಮದವರೆಗೂ ಭವ್ಯ ಮೆರವಣಿಗೆ ನಡೆಸಲಾಯಿತು. ಕೃಷಿ-ತೋಟಗಾರಿಕೆ, ಸಿಡಿಪಿಒ, ಆರೋಗ್ಯ ಇಲಾಖೆಯ ಸ್ಟಾಲ್‌ಗ‌ಳನ್ನು ವೀಕ್ಷಿಸಿದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್‌ ಕೆ.ಆರ್‌ .ಪಾಟೀಲ, ಗ್ರಾಪಂ ಅಧ್ಯಕ್ಷೆ ಪುಷ್ಪಾ ಕಾಮರೆಡ್ಡಿ, ಉಪಾಧ್ಯಕ್ಷೆ ಗೌರಮ್ಮ ಬಂಡಿವಡ್ಡರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಶಾಂತ ವರಗಪ್ಪನವರ, ಎಡಿಎಚ್‌ ಸುರೇಶ ಕುಂಬಾರ, ಸಮಾಜ ಕಲ್ಯಾಣಾಕಾರಿ ಎಸ್‌.ಬಿ.ಹರ್ತಿ, ವೀರೇಶರೆಡ್ಡಿ ಕಾಮರೆಡ್ಡಿ, ಶಿವನಗೌಡ್ರ ಕಂಠೀಗೌಡ್ರ, ಮಹೇಂದ್ರ ಉಡಚಣ್ಣವರ, ಬಸಣ್ಣ ಮುಂಡವಾಡ, ಶಾಂತಣ್ಣ ಬಳ್ಳಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next