ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಇದೀಗ ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರತೀ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಆ ಗ್ರಾಮದ ಜನತೆಯ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದೆ. ಅದರಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಶನಿವಾರ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ನಿಗದಿಯಾಗಿರುವ ಗ್ರಾಮಗಳ ಜನರು ತಮ್ಮೂರಿನ ಸಮಸ್ಯೆಗಳು ಮತ್ತು ಬೇಡಿಕೆಗಳ ಪಟ್ಟಿಯೊಂದಿಗೆ ಜಿಲ್ಲಾ ಧಿಕಾರಿಗಳ ಸ್ವಾಗತಕ್ಕೆ ಸಜ್ಜಾಗಿದ್ದಾರೆ.
ಗ್ರಾಮ ವಾಸ್ತವ್ಯದ ಪರಿಕಲ್ಪನೆ ಹೊಸದೇನಲ್ಲ. ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿ ಸಿಎಂ ಆಗಿದ್ದ ವೇಳೆ ಗ್ರಾಮ ವಾಸ್ತವ್ಯವನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದರು. ಆದರೆ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಯ ರಸ್ತೆಗಳು ಡಾಮರು ಕಂಡರೆ, ಸರಕಾರಿ ಶಾಲೆ, ಕಚೇರಿ, ಕಟ್ಟಡಗಳು ಸುಣ್ಣಬಣ್ಣ ಬಳಿದುಕೊಂಡು ಹೊಸ ರೂಪ ಪಡೆ ದದ್ದನ್ನು ಬಿಟ್ಟರೆ ಈ ಗ್ರಾಮಗಳ ಸ್ಥಿತಿ ಇಂದಿಗೂ ಹಾಗೆಯೇ ಇದೆ. ಆ ಬಳಿ ಕವೂ ಸಚಿವರು, ರಾಜಕಾರಣಿಗಳ ಗ್ರಾಮ ವಾಸ್ತವ್ಯ ಕಾರ್ಯ ಕ್ರಮಗಳು ನಡೆದುಕೊಂಡು ಬಂದಿವೆಯಾದರೂ ಫಲಿತಾಂಶ ಹೇಳಿಕೊಳ್ಳುವಂಥದ್ದಿಲ್ಲ.
ಇದೀಗ ಗ್ರಾಮ ವಾಸ್ತವ್ಯದ ಸರದಿ ಅಧಿಕಾರಿಗಳದು. ಒಂದರ್ಥದಲ್ಲಿ ಜಿಲ್ಲಾ ಡಳಿ ತ ಮತ್ತು ತಾಲೂಕು ಆಡಳಿತದ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿ ಗಳು ಮತ್ತು ತಹಶೀಲ್ದಾರರ ಗ್ರಾಮ ವಾಸ್ತವ್ಯ ಹೆಚ್ಚು ಮಹತ್ವಪೂರ್ಣ. ಕಾರ್ಯಾಂಗದಲ್ಲಿ ತಮ್ಮದೇ ಆದ ಹೊಣೆಗಾರಿಕೆಗಳನ್ನು ಹೊಂದಿರುವ ಜಿಲ್ಲಾಧಿಕಾರಿಗಳು ಅಭಿವೃದ್ಧಿಯಲ್ಲಿ ಇನ್ನೂ ಹಿಂದುಳಿದಿರುವ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರಗಳನ್ನು ಒದಗಿಸುವ ದಿಸೆಯಲ್ಲಿ ಈ ಕಾರ್ಯಕ್ರಮ ಸ್ವಾಗತಾರ್ಹ ನಡೆಯೇ.
ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡಿದಾಕ್ಷಣ ಆ ಗ್ರಾಮದ ಸಮಸ್ಯೆಗಳೆ ಲ್ಲವೂ ಪರಿಹಾರಗೊಳ್ಳುತ್ತವೆ ಎಂದು ಈಗಲೇ ಷರಾ ಬರೆದುಬಿಡುವುದು ಅವಸರದ ಕ್ರಮವಾದೀತೇನೋ? ಬಹುತೇಕ ಗ್ರಾಮಗಳಲ್ಲಿ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಹೆಚ್ಚಿನವು ಕಂದಾಯ ಇಲಾಖೆಗೆ ಸಂಬಂಧಿಸಿದವುಗಳೇ. ಕಂದಾಯ ಇಲಾ ಖೆಗೆ ಸಂಬಂಧಿಸಿದ ವಿಚಾರಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಹೊಣೆಗಾರಿಕೆ ಇರುವುದರಿಂದ ಗ್ರಾಮಸ್ಥರ ಇಂತಹ ಕೆಲವೊಂದು ಸಮಸ್ಯೆಗಳಿಗೆ ಅವರು ಸ್ಪಂದಿಸಿದಾಕ್ಷಣ ಗ್ರಾಮ ವಾಸ್ತವ್ಯ ಸಾರ್ಥಕವಾಯಿತು ಎನ್ನಲಾಗದು. ಜಿಲ್ಲೆಯ ಸಮಗ್ರ ಆಡಳಿತದ ಹಿಡಿತ ಜಿಲ್ಲಾಧಿಕಾರಿಗಳ ಬಳಿ ಇರುವುದರಿಂದ ಅವರು ಉತ್ತರದಾಯಿತ್ವವನ್ನು ಹೊಂದಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅವರು ಜನರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸಿದರೆ ಅದರಲ್ಲಿ ವಿಶೇಷತೆ ಯಾದರೂ ಏನು?. ತಾತ್ಕಾಲಿಕ ಪರಿಹಾರ, ಭರವಸೆಗಳಿಗಿಂತ ಶಾಶ್ವತ ಪರಿಹಾರ ಮಾರ್ಗೋ ಪಾಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಾರ್ಯೋನ್ಮುಖ ರಾಗಬೇಕು. ಗ್ರಾಮ ವಾಸ್ತವ್ಯದ ವೇಳೆ ತಮ್ಮ ಕೆಳಹಂತದ ಅಧಿಕಾರಿಗಳಿಗೆ ನೀಡಿದ ಆದೇಶ, ಸೂಚನೆಗಳು ಪಾಲನೆಯಾಗಿ ವೆಯೇ ಎಂಬುದನ್ನು ಖಾತರಿಪಡಿಸಿ ಕೊಳ್ಳುವ ಗುರುತರ ಜವಾಬ್ದಾರಿಯೂ ಜಿಲ್ಲಾಧಿಕಾರಿಗಳ ಮೇಲಿದೆ. ನಿಗದಿತ ಕಾಲಮಿತಿಗೊಮ್ಮೆ ತಾವು ವಾಸ್ತವ್ಯ ಹೂಡಿದ ಗ್ರಾಮದ ಸ್ಥಿತಿಗತಿಗಳ ಕುರಿತಂತೆ ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಹಾಗಾದಲ್ಲಿ ಮಾತ್ರ ಗ್ರಾಮ ವಾಸ್ತವ್ಯದ ನೈಜ ಉದ್ದೇಶ ಈಡೇರೀತು.