Advertisement

ಮೇದಿನಿಯಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ

04:13 PM Jan 06, 2020 | Suhan S |

ಕಾರವಾರ/ಕುಮಟಾ: ಗ್ರಾಮ ವಾಸ್ತವ್ಯಗಳು ವ್ಯಕ್ತಿ ಕೇಂದ್ರಿತವಾಗದೇ ವ್ಯವಸ್ಥೆ ಕೇಂದ್ರಿತವಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಕುಮಟಾ ತಾಲೂಕಿನ ಮೇದಿನಿ ಗ್ರಾಮದಲ್ಲಿ ವಾರ್ತಾ ಇಲಾಖೆಯಿಂದ ಏರ್ಪಡಿಸಿದ್ದ ವಾರ್ತಾ ವಾಸ್ತವ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಗಳ ಉದ್ಧಾರಕ್ಕೆ ಹತ್ತು ಹಲವು ಕ್ರಮಗಳಿವೆ. ಆಧುನಿಕ ಅಭಿವೃದ್ಧಿ ಎಂದರೆ ನಗರಗಳ ಸೌಲಭ್ಯಗಳು ಗ್ರಾಮಗಳಿಗೂ ಬೇಕಾ ಎಂಬ ಪ್ರಶ್ನೆ ನಮ್ಮೆದರು ಇದೆ. ಆದರೆ ಇವತ್ತು ಗ್ರಾಮಗಳೇ ಅತ್ಯಂತ ಉತ್ತಮ ಪರಿಸರ ಹೊಂದಿವೆ. ದೆಹಲಿಗಿಂತ ಮೇದಿನಿ ನೆಮ್ಮದಿಯಾಗಿದೆ. ಪರಿಸರ ಸ್ವತ್ಛವಾಗಿದೆ. ಕಸ ನಿರ್ವಹಣೆಯಂತಹ ಸಮಸ್ಯೆ ಮೇದಿನಿಯನ್ನು ಕಾಡದಿರಲಿ ಎಂದರು.

ಜಿಲ್ಲಾಧಿಕಾರಿಯಾಗಿ ನಾನು ಬೇರೆ ಬೇರೆ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಚಾಮರಾಜ ನಗರದಲ್ಲಿ ಹಲವು ಹಳ್ಳಿಗಳಲ್ಲಿ ಉಳಿದಿದ್ದೇನೆ. ಗ್ರಾಮದ ಜನರ ಉತ್ಸಾಹ, ಸಂಭ್ರಮ, ಸಡಗರ ದೊಡ್ಡದು. ಆದರೆ ಇಲ್ಲಿ ವ್ಯಕ್ತಿಪೂಜೆಗಿಂತ ಗ್ರಾಮದ ಬೇಕು ಬೇಡಗಳ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ವ್ಯವಸ್ಥೆ ವಹಿಸಿಕೊಳ್ಳಬೇಕು. ಸರ್ಕಾರ ಎಂಬುದು ಬಲಾಡ್ಯ ವ್ಯವಸ್ಥೆ. ಸರ್ಕಾರಕ್ಕೆ ಇದೇನು ದೊಡ್ಡ ಸಂಗತಿಯಲ್ಲ. ಆದರೆ 54 ಮನೆಗಳಿರುವ, 324 ಜನಸಂಖ್ಯೆ ಇರುವ ಗ್ರಾಮಕ್ಕೆ ರಸ್ತೆ ಮೊದಲ ಆದ್ಯತೆ ಎಂದು ಗ್ರಾಮಸ್ಥರ ಬೇಡಿಕೆ ಗಮನಿಸಿದಾಗ ಗೊತ್ತಾಗಿದೆ ಎಂದರು.

ಜಾಗತೀಕರಣದ ಸಮಸ್ಯೆ ಮೇದಿನಿಯನ್ನು ಕಾಡದಿರಲಿ. ಇಂಟರ್‌ನೆಟ್‌ನಿಂದ ವಿಶ್ವವೇ ಒಂದು ಗ್ರಾಮವಾಗಿದೆ. ಇಂಟರ್‌ನೆಟ್‌ ಈ ಗ್ರಾಮಕ್ಕೆ ಕಾಲಿಟ್ಟರೆ ಇಲ್ಲಿಂದಲೇವಿಶ್ವವನ್ನು ಬೆಸೆಯಬಹುದು ಎಂದು ಜಿಲ್ಲಾಧಿಕಾರಿ ನುಡಿದರು. ಹಾರ್ವರ್ಡ್‌ ವಿವಿ ನಮಗೆ ನೀಡುವ ಜ್ಞಾನಕ್ಕಿಂತ ಗ್ರಾಮವೊಂದರಲ್ಲಿ ಕಲಿಯುವ ಪಾಠಗಳು ಹೆಚ್ಚಿವೆ. ಇಲ್ಲಿ ಉಳಿದು ಜನರ ಜೊತೆ ಬೆರೆತರೆ ಹೊಸ ಆಲೋಚನೆಗಳು ಅಧಿಕಾರಿಗಳಿಗೆ ಬರಲು ಸಾಧ್ಯ ಎಂದರು. ಗ್ರಾಮದಲ್ಲಿರುವ 324 ಜನರ ಪೈಕಿ 300 ಜನ ಆರೋಗ್ಯವಂತರು ಎಂಬ ಸಂಗತಿ ಆರೋಗ್ಯ ತಪಾಸಣಾ ಶಿಬಿರದಿಂದ ತಿಳಿದಿದೆ.  ಇದೇ ಸಂತೋಷದ ವಿಷಯ.  4 ಜನರಿಗೆ ಇರುವ ಬಿಪಿ, ಕೊಲೆಸ್ಟ್ರಾರಲ್‌ ಸಮಸ್ಯೆ ನಿವಾರಿಸುವಂತಹದ್ದು. ನಾಲ್ವರು ಅಂಗವಿಕಲ ಮಕ್ಕಳು ಇರುವುದು ಗೊತ್ತಾಗಿದೆ. ಅವರಿಗೆ ಅಂಗವಿಕಲರಿಗೆ ಸಿಗುವ ಸೌಲಭ್ಯ ನೀಡಲು ಮುಂದಿನ ಪ್ರಯತ್ನಗಳು ಅಧಿಕಾರಿಗಳು ಮಾಡಲಿದ್ದಾರೆ.

ಇಲ್ಲಿನ ಯುವಕರು ಸಂಘಟಿತರಾಗಿ, ರಾಜಕೀಯವನ್ನು ದೂರಯಿಟ್ಟು ಗ್ರಾಮದ ಬೇಡಿಕೆಗಳ ಬಗ್ಗೆ ಆಗಾಗ ಜಿಲ್ಲಾಡಳಿತದ, ತಾಲೂಕಾ ಆಡಳಿತದ ಮತ್ತು ಶಾಸಕರ ಗಮನ ಸೆಳೆಯಿರಿ. ಸರ್ವರುತು ರಸ್ತೆ ರೂಪಿಸಲು 12 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆಕಳುಹಿಸಲಾಗಿದೆ. ರಸ್ತೆ ನಿರ್ಮಾಣ ತಕ್ಷಣವೇ ಆಗುತ್ತದೆ ಎಂದು ಹೇಳಲಾರೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದರು. ವಿದ್ಯುತ್‌ ಬಂದಿದೆ. ಮಳೆಗಾಲದ ವಿದ್ಯುತ್‌ ಸಮಸ್ಯೆ ಬಗೆಹರಿಸಲು ಗಮನ ಹರಿಸಲಾಗುವುದು. ಅರಣ್ಯ ರಕ್ಷಣೆ ನಿಮ್ಮ ಹೊಣೆ. ಅರಣ್ಯ ಇಲಾಖೆ ನಿಮ್ಮೂರಿಗೆ ರಸ್ತೆ ರೂಪಿಸಲು ಸಹಕಾರ ನೀಡಿದೆ. ಶಿಕ್ಷಣದ ವಿಷಯವಾಗಿ ಇಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಈ ಊರಿನ ಯಾವುದೇ ಮಕ್ಕಳು ನಗರದ ಹಾಸ್ಟೆಲ್‌ಗ‌ಳಲ್ಲಿ ಇದ್ದು, ಶಿಕ್ಷಣ ಕಲಿಯಲು ಬೇಕಾದ ಎಲ್ಲ ನೆರವು ನೀಡಲಾಗುವುದು ಎಂದರು.

Advertisement

ಮೇದಿನಿ ಅಕ್ಕಿಗೆ ಪೇಟೆಂಟ್‌ ಪ್ರಯತ್ನ  : ಮೇದಿನಿಯ ಸಣ್ಣಕ್ಕಿ ಉತ್ತರ ಕನ್ನಡದಲ್ಲಿ ಪ್ರಸಿದ್ಧಿ ಪಡೆದಿದೆ. ಮೇದಿನಿ ಗ್ರಾಮದಲ್ಲಿ ಮಾತ್ರ ಬೆಳೆಯುವ ಮೇದಿನಿಯ ಪರಿಮಳದ ಅಕ್ಕಿ ತಳಿಗೆ ಪೇಟೆಂಟ್‌ ಪಡೆಯಲು ಯತ್ನಿಸಲಾಗುವುದು. ಈ ಹೊಣೆಯನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್‌ ಅವರಿಗೆ ವಹಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಮೇದಿನಿ ಅಕ್ಕಿಗೆ ಪೇಟೆಂಟ್‌ ಸಿಕ್ಕರೆ ಮಾರುಕಟ್ಟೆ ತಾನಾಗಿಯೇ ಒದಗಿ ಬರುತ್ತದೆ ಎಂದರು. ಮೇದಿನಿ ಅಕ್ಕಿ ಕೆ.ಜಿ.ಗೆ 150 ರೂ.ದಿಂದ 200 ವರೆಗೆ ಇದೆ. ಇದನ್ನು ಬಿರಿಯಾನಿ ಮಾಡುವಾಗ ಹೆಚ್ಚಾಗಿ ಬಳಸುತ್ತಾರೆ ಎಂಬುದು ವಿಶೇಷ.

 ಅಧಿಕಾರಿಗಳಿಗೆ ಭವ್ಯ ಸ್ವಾಗತ :  ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾಧಿಕಾರಿ ಶನಿವಾರ ಸಂಜೆ ಆರಕ್ಕೆ ಮೇಧಿನಿಗೆ ಆಗಮಿಸಿದಾಗ ಗ್ರಾಮಸ್ಥರು ಡೊಳ್ಳು ಬಡಿದು, ಭಾಜ ಭಜಂತ್ರಿಗಳ ಮೂಲಕ ಸ್ವಾಗತಿಸಿದರು. ಗ್ರಾಮಕ್ಕೆ ಭೇಟಿ ನೀಡಿದ ನೆನಪಿಗಾಗಿ ಜಿಲ್ಲಾಧಿಕಾರಿ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಟ್ಟರು. ನಂತರ ಕೃಷ್ಣಾ ಗೌಡ, ಗಣಪ ಗೌಡ ಗ್ರಾಮದ ಸಮಸ್ಯೆಗಳನ್ನು ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಕಮಿಷನರ್‌, ತಹಶೀಲ್ದಾರ್‌ ಮುಂದಿಟ್ಟರು. ಗ್ರಾಮದ ಮೊದಲ ಪದವೀಧರೆ ಮೈತ್ರಿ ಸ್ವಾಗತಿಸಿದಗಳು. ವಾರ್ತಾಧಿಕಾರಿ ಹಿಮಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ವಾಸ್ತವ್ಯದ ಉದ್ದೇಶ ವಿವರಿಸಿದರು. ಕಾರ್ಯಕ್ರಮದ ನಂತರ ಹಳಿಯಾಳದ ಹೊಂಗಿರಣ ಸಂಸ್ಥೆಯಿಂದ ಬೊಂಬೆಯಾಟ ನಡೆಯಿತು. ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಸಿದ್ದಿ ಕಲಾವಿದರ ತಂಡ ಡುಮಾಮಿ ನೃತ್ಯ ಗ್ರಾಮಸ್ಥರ ಗಮನ ಸೆಳೆಯಿತು.

ಶಾಲೆಯಲ್ಲಿ ಅಧಿಕಾರಿಗಳ ವಾಸ್ತವ್ಯ :  ಮೇದಿನಿಯ ಹನುಮಂತ ಗೌಡ್ರ ಮನೆಯಲ್ಲಿ ಊಟ ಸವಿದ ಜಿಲ್ಲಾಧಿಕಾರಿ ಹರೀಶ್‌ ಕುಮಾರ್‌, ಸಿಇಒ ರೋಶನ್‌, ತಹಶೀಲ್ದಾರ್‌ ಮೇಘರಾಜ್‌, ಡಿಎಫ್‌ಒ ಗಣಪತಿ ನಂತರ ಮೇದಿನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಿದರು. ಬೆಳಗ್ಗೆ ಮೇದಿನಿಯ ಶಿಥಿಲ ಕೋಟೆಗೆ ಭೇಟಿ ನೀಡಿದರು.

ನಾನು ಹೊರಗಿದ್ದು ಪದವಿ ಪಡೆದಿದ್ದೇನೆ. ಆದರೆ ನನ್ನ ತಂಗಿ ಸೇರಿದಂತೆ ಇನ್ನುಳಿದ ಈ ಭಾಗದವರಿಗೆ ಶಿಕ್ಷಣ ಮರೀಚಿಕೆಯಾಗಿಯೇ ಉಳಿದಿದೆ. ಜಿಲ್ಲಾಡಳಿತ ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು.  –ಮೈತ್ರಿ ಗೌಡ, ಮೇದಿನಿ ಗ್ರಾಮದ ಮೊದಲ ಪದವೀಧರೆ

Advertisement

Udayavani is now on Telegram. Click here to join our channel and stay updated with the latest news.

Next