ಮಂಗಳೂರು: ಐದು ವರ್ಷಗಳ ಹಿಂದೆ ಮಲೇಷ್ಯಾದಿಂದ ಆಮದು ಮಾಡಿ ನವಮಂಗಳೂರು ಬಂದರಿನಲ್ಲಿ ಶೇಖರಿಸಿಟ್ಟಿರುವ 75,400 ಮೆಟ್ರಿಕ್ ಟನ್ ಮರಳನ್ನು ಜಿಲ್ಲೆಯಲ್ಲಿ ವಿತರಿಸುವುದಕ್ಕೆ ವಾರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಗುರುವಾರ ಈ ಮಾಹಿತಿ ನೀಡಿದ ಅವರು, ನಾಲ್ಕು ದಿನಗಳ ಹಿಂದೆ ಎನ್‌ಎಂಪಿಎಯಲ್ಲಿ ಅಷ್ಟು ಪ್ರಮಾಣದ ಮರಳು ಸಂಗ್ರಹ ಇರುವ ವಿಚಾರ ತಿಳಿದು ಅಚ್ಚರಿಯಾಗಿತ್ತು. ಇದು ಎಂಸ್ಯಾಂಡ್ ಅಲ್ಲ, ಆದರೆ ಉತ್ತಮ ಗುಣಮಟ್ಟದ ಮರಳಾಗಿದೆ. ಅದನ್ನು 10 ಟನ್‌ಗೆ 10,000 ರೂ.ಗಳಂತೆ ಜಿಲ್ಲೆಯಲ್ಲಿ ಪೂರೈಕೆ ಮಾಡಲಾಗುವುದು. ಇದಲ್ಲದೆ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕಡೆಗಳಿಂದ ವಶಪಡಿಸಿಕೊಳ್ಳಲಾದ 1 ಸಾವಿರ ಮೆಟ್ರಿಕ್ ಟನ್ ಮರಳು ಲಭ್ಯವಿದೆ. ಅದನ್ನು ಕೂಡ ಲೋಡ್ ಒಂದಕ್ಕೆ 7 ಸಾವಿರ ರೂ.ಗಳಂತೆ ವಿತರಿಸಲಾಗುವುದು ಎಂದರು.
ಎನ್‌ಎಂಪಿಎಯಲ್ಲಿ ಮರಳು ಸಂಗ್ರಹದ ಜಾಗದಲ್ಲಿ ಸೂಕ್ತ ಸಿಸಿ ಕೆಮರಾಗಳ ಕಣ್ಗಾವಲಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಂಡು ಆರ್‌ಟಿಒದಿಂದ ಪರವಾನಿಗೆ ಹೊಂದಿರುವ ಲಾರಿಗಳ ಮೂಲಕ ಮರಳು ಅಗತ್ಯವಿದ್ದವರಿಗೆ ವಿತರಿಸಲಾಗುವುದು. ಪ್ರತೀ ದಿನ ವಿತರಣೆಯಾಗುವ ಪ್ರಮಾಣ, ಸಾಗಿಸುವ ಲಾರಿಗಳ ಕುರಿತಂತೆ ಸೂಕ್ತ ಮಾಹಿತಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜತೆಗೆ ಜಿಲ್ಲಾಡಳಿತ, ಪೊಲೀಸ್ ಆಯುಕ್ತರು, ಅಧೀಕ್ಷಕರು ಹಾಗೂ ಮಾಧ್ಯಮದ ಮೂಲಕ ಎಲ್ಲರಿಗೂ ಲಭಿಸುವಂತೆ ಮಾಡಲಾಗುವುದು ಎಂದರು.
ಇದಲ್ಲದೆ ಜಿಲ್ಲೆಯ ಸಿಆರ್‌ಝಡ್ ಹಾಗೂ ನಾನ್ ಸಿಆರ್‌ಝಡ್ ವಲಯದಲ್ಲಿÉ ಅರ್ಹ ಮರಳು ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಶೀಘ್ರವೇ ಅಂತಿಮ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.
Related Articles
ಮಲೇಷ್ಯಾ ಮರಳು ಹಿನ್ನೆಲೆ:
ನವಮಂಗಳೂರು ಬಂದರಿನಲ್ಲಿ ಖಾಸಗಿ ಸಂಸ್ಥೆಯೊಂದು ಒಂದು ಲಕ್ಷ ಟನ್ ಮರಳು ಆಮದು ಮಾಡಿಕೊಂಡಿದ್ದು, ಅದರ ವಿತರಣೆಗೆ ಸರಕಾರ ಅನುಮತಿ ನೀಡಿರಲಿಲ್ಲ. ಈ ಬಗ್ಗೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು 2019ರ ಫೆಬ್ರವರಿ 11ರಂದು ಹೊರರಾಜ್ಯಗಳಿಗೆ ಮರಳು ಸಾಗಾಣಿಕೆಗೆ ಪರವಾನಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ತಿಳಿಸಲಾಗಿತ್ತು. ಪ್ರಸ್ತುತ ಇರುವ 75,400 ಮೆ.ಟನ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ ಜಿಲ್ಲೆಯಲ್ಲಿನ ಸಾರ್ವಜನಿಕ ಕಟ್ಟಡ ಕಾಮಗಾರಿಗಳಿಗೆ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.