Advertisement

ಜಿಲ್ಲೆಯಲ್ಲಿ ಕೋವಿಡ್ ಶೇ.6 ಕ್ಕಿಂತಲೂ ಕಡಿಮೆ

03:31 PM Aug 24, 2020 | Suhan S |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣದಲ್ಲಿದೆ. ಆರೋಗ್ಯ ಇಲಾಖೆ ಕಾಲಕಾಲಕ್ಕೆ ನೀಡುವ ಮಾರ್ಗ ಸೂಚಿಯನ್ನು ಚಾಚೂ ತಪ್ಪದೇ ಪಾಲಿಸಿ ಕೋವಿಡ್‌ ಮುಕ್ತ ಜಿಲ್ಲೆಯನ್ನಾಗಿಸುವ ಅಭಿಯಾನದಲ್ಲಿಸಹಕರಿಸುವಂತೆ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Advertisement

ಜಿಲ್ಲೆಯ ಒಟ್ಟೂ ಸೋಂಕಿತರಲ್ಲಿ ಶೇ. 75 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮರಣ ಪ್ರಮಾಣ ಶೇ.1 ಕ್ಕಿಂತಲೂ ಕಡಿಮೆಯಿದೆ. 6579 ಜನ ಕ್ವಾರೆಂಟೈನ್‌ ನಲ್ಲಿದ್ದು, ಪಾಸಿಟಿವ್‌ ರೇಟ್‌ ಶೇ.6ಕ್ಕಿಂತಲೂ ಕಡಿಮೆ ಇದೆ. ಪ್ರತಿಯೊಬ್ಬ ಸೋಂಕಿತರಿಗೂ 10 ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸುತ್ತಿದ್ದು. ಪ್ರತಿದಿನ 1600 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಶೇ.91 ರಷ್ಟು ಸೋಂಕಿತರಲ್ಲಿ ಮಾತ್ರ ರೋಗ ಲಕ್ಷಣಗಳು ಇಲ್ಲವಾಗಿದ್ದು, ಕೇವಲ ಶೇ.9 ಸೋಂಕಿತರಲ್ಲಿ ಮಾತ್ರ ರೋಗಲಕ್ಷಣಗಳು ಕಂಡು ಬರುತ್ತಿದೆ. ಸಕ್ರಿಯ ಸೋಂಕಿತರು 903 ಇದ್ದು. ಒಟ್ಟಾರೆ ಸೋಂಕಿತರಲ್ಲಿ 5 ವರ್ಷಕ್ಕಿಂತ ಕೆಳ ಹರೆಯದವರು 102, 6 ರಿಂದ 10 ವರ್ಷದವರು 146, 11 ರಿಂದ 20 ವರ್ಷದವರು 425, 21 ರಿಂದ 30 ವರ್ಷದವರು 858, 31 ರಿಂದ 40 ವರ್ಷದವರು 676, 41 ರಿಂದ 50 ವರ್ಷದವರು 579, 51 ರಿಂದ 60 ವರ್ಷದವರು 417 ಮತ್ತು 60 ವರ್ಷಕ್ಕಂತ ಮೇಲ್ಪಟ್ಟ ಸೋಂಕಿತರು 358 ಜನರಿರುತ್ತಾರೆ.ರೋಗ ಲಕ್ಷಣ ರಹಿತ ಸೋಂಕಿತರಲ್ಲಿ ಪಾಸಿಟಿವಿಟಿ ರೇಟ್‌ ಶೇ.7 ಇದ್ದು, ರೋಗ ಲಕ್ಷಣ ಇರುವ ಸೋಂಕಿತರಲ್ಲಿ ಪಾಸಿಟಿವ್‌ ಶೇ.16  ರಷ್ಟಿದೆ. ಒಂದು ಮಿಲಿಯನ್‌ ಜನರಲ್ಲಿ 9291 ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದು, ಈವರೆಗೂ 50 ಸಾವಿರಕ್ಕಿಂತಲೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿರುತ್ತದೆ ಎಂದಿದ್ದಾರೆ. ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದು, ಪ್ರತಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸುವುದು ಮತ್ತು ಉತ್ತಮ ಗುಣಮಟ್ಟದಚಿಕಿತ್ಸೆ ಕಲ್ಪಿಸುವುದರಿಂದ ಈ ಮಹಾ ಮಾರಿಯನ್ನು  ಆದಷ್ಟು ಬೇಗನೆ ನಿಯಂತ್ರಣಕ್ಕೆ ತರಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಆದುದರಿಂದ ಸರ್ಕಾರ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಲು ಇನ್ನೊಂದು ಹೊಸ ಯಂತ್ರವನ್ನು ಮುಂದಿನ 15 ದಿವಸಗಳಲ್ಲಿ ಒದಗಿಸಲಿದೆ. ಆದ್ದರಿಂದ ಪ್ರತಿದಿನ 2000 ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಸೋಂಕಿತರನ್ನು ಬಹು ಬೇಗನೆ ಪತ್ತೆ ಹಚ್ಚಿ ರೋಗದ ಹರಡುವಿಕೆಯನ್ನು ತಡೆಯಬಹುದಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಸಹನೆಯಿಂದ ಸಹಕರಿಸಲು ಜಿಲ್ಲಾಧಿಕಾರಿ ಕೋರಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ರೋಗ ಪೀಡಿತರಿಗೆ ಉತ್ತಮ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ತಿಂಗಳ ಅಂತ್ಯದೊಳಗೆ ಪ್ರತಿ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ 50 ಬೆಡ್‌ಗಳಿಗೆ ಆಕ್ಸಿಜನ್‌ ಪೂರೈಕೆ ಮಾಡಲಾಗುವುದು. ಈಗಾಗಲೇ ಕಾರವಾರ ವೈದ್ಯಕೀಯ ಕಾಲೇಜಿಗೆ 30 ಸ್ವಯಂ ಸೇವಕರನ್ನು ಒದಗಿಸಲಾಗಿರುತ್ತದೆ. 10 ಹೈಪ್ಲೋ ನ್ಯಾಜುಲ್‌ ಕ್ಯಾನಲ್‌ ಒದಗಿಸಲಾಗಿದ್ದು, ಎಲ್ಲಾ ರೀತಿಯ ಆಧುನಿಕ ಔಷ ಧಗಳೊಂದಿಗೆ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಿಮ್ಸ್‌ ಕಟಿಬದ್ಧವಾಗಿದೆ ಎಂದಿದ್ದಾರೆ. ಈ ಎಲ್ಲಾ ಸಾಧನೆಗೆ ಮುಖ್ಯ ಕಾರಣ ಉತ್ತರ ಕನ್ನಡ ಜಿಲ್ಲೆಯ ನಾಗರಿಕರ ಪ್ರಬುದ್ಧತೆ. ಆರೋಗ್ಯ ಇಲಾಖೆ ಇಲಾಖೆ ನೀಡಿದ ಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ರೋಗ ನಿಯಂತ್ರಣಕ್ಕೆ ಸಹಕರಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಮಾದರಿಯಾಗಿ ನಮ್ಮ ಸಾಮಾಜಿಕ ಬದ್ದತೆ ತೋರಲು ಒಳ್ಳೆಯ ಅವಕಾಶ ಒದಗಿ ಬಂದಿದೆ. ಆದುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಆರೋಗ್ಯ ಇಲಾಖೆ ನಡೆಸುವ ಈ ಅಭಿಯಾನದಲ್ಲಿ ಕೈ ಜೋಡಿಸಲು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next