ಹಾವೇರಿ: ಕುಡಿಯುವ ನೀರು ಪೂರೈಕೆ, ನಗರದ ನಿಯಮಿತ ಸ್ವಚ್ಛತೆ, ಹಾಳಾದ ಬೀದಿ ದೀಪಗಳನ್ನು ಸಕಾಲದಲ್ಲಿ ಅಳವಡಿಸಲು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಾಕೀತು ಮಾಡಿದ್ದಾರೆ.
ಕುಡಿಯುವ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ನಿಯಮಿತವಾಗಿ ಸ್ವತ್ಛತೆ ಹಾಗೂ ಕ್ಲೋರಿನ್ ಹಾಕಲು ಸೂಚಿಸಿ ನಿಯಮಿತವಾಗಿ ನೀರು ಸರಬರಾಜಿಗೆ ಸೂಚನೆ ನೀಡಿದರು.
ನಗರದ ಬೀದಿ ದೀಪಗಳು ಹಾಳಾದರೂ ಸಕಾಲದಲ್ಲಿ ಅಳವಡಿಸಿಲ್ಲ. ನಗರದ ಬಹು ಕಡೆಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮೂರು ದಿನಗದೊಳಗಾಗಿ ವಿದ್ಯುತ್ ದೀಪ ಅಳವಡಿಸಬೇಕೆಂದು ಸೂಚನೆ ನೀಡಿದರು.
ಬೀದಿ ಸ್ವಚ್ಛತೆ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು. ಕಾಲುವೆಗಳ ಸ್ವತ್ಛತೆ ನಿಯಮಿತವಾಗಿ ಕೈಗೊಳ್ಳುವುದು ಸೇರಿದಂತೆ ಸಮರ್ಪಕವಾಗಿ ಕಸ ವಿಲೇವಾರಿಗೊಳಿಸುವಂತೆ ಸೂಚಿಸಿದರು. ನಗರಸಭೆ ಕಚೇರಿಯಲ್ಲಿ ಅಧಿ ಕಾರಿ-ಸಿಬ್ಬಂದಿಗಳ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡತ ವಿಲೇವಾರಿ ಮಾಡಿ, ತೆರಿಗೆ ಸಂಗ್ರಹ ಕಾರ್ಯ ಚುರುಕುಗೊಳಿಸಬೇಕೆಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆಯಿಂದ ಕೈಗೊಳ್ಳಲಾದ ಕಾಮಗಾರಿಗಳ ವಿವಿಧ ಹಂತಗಳ ಕುರಿತಂತೆ ಪರಿಶೀಲನೆ ನಡೆಸಿ ಮಾಹಿತಿ ಪಡೆದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಪೌರಾಯುಕ್ತ ಬಸವರಾಜ ಜಿದ್ದಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.