ಬೆಂಗಳೂರು: ಮೃತ ವ್ಯಕ್ತಿಯ ವಿರುದ್ಧ ಜಿಲ್ಲಾಧಿಕಾರಿಗಳು ಸ್ವಯಂಪ್ರೇರಿತ ಕ್ರಮ ಜರುಗಿಸಬಹುದೇ? ಹೌದು, ಇಂತಹದ್ದೊಂದು ಪ್ರಶ್ನೆ ಎತ್ತಿರುವ ರಾಜ್ಯ ಹೈಕೋರ್ಟ್, ಭೂ ವ್ಯಾಜ್ಯ ಸಂಬಂಧ ಮೃತಪಟ್ಟಿದ್ದಾರೆ ಎನ್ನಲಾದ ವ್ಯಕ್ತಿಯ ಮೇಲೆ ಸ್ವಯಂ ಪ್ರೇರಿತ ಕ್ರಮ ಜರುಗಿಸುವ ಕುರಿತ ತೀರ್ಪು ಕಾಯ್ದಿರಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯ ಕ್ರಮವನ್ನು ರದ್ದುಪಡಿಸಿದ ಪ್ರಸಂಗ ನಡೆದಿದೆ.
ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ಗ್ರಾಮದ ವೆಂಕಟರಮಣಪ್ಪ ಎಂಬುವರ ವಿರುದ್ಧ ಭೂವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಕ್ರಮ ಜರುಗಿಸಲು ಮುಂದಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಅವರ ಪುತ್ರ ಕೃಷ್ಣಪ್ಪ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದೆ. ತಮ್ಮ ತಂದೆ ಮೃತಪಟ್ಟಿದ್ದು, ಈ ಮಾಹಿತಿ ಇದ್ದರೂ ಜಿಲ್ಲಾಧಿಕಾರಿಗಳು ಸ್ವಯಂ ಪ್ರೇರಿತ ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಆದರೆ, ಸತ್ತ ವ್ಯಕ್ತಿಯ ಮೇಲೆ ಸ್ವಯಂ ಪ್ರೇರಿತ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೃಷ್ಣಪ್ಪ ಹೇಳಿದ್ದರು. ಈ ಅಂಶ ಪರಿಗಣಿಸಿದ ಹೈಕೋರ್ಟ್, ಜಿಲ್ಲಾಧಿಕಾರಿಗಳು ವೆಂಕಟರಮಣಪ್ಪ ಅವರ ವಿರುದ್ಧ ಕಾನೂನು ಕ್ರಮ ಜರಿಗುಸುವುದರ ಕುರಿತು ಆದೇಶ ಕಾಯ್ದಿರಿಸಿದ್ದ ಕ್ರಮ ರದ್ದುಪಡಿಸಿತು. ಬಳಿಕ ಸತ್ತ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವುದರ ಪರಿಣಾಮದ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ನಿರ್ದೇಶಿಸಿತು.
ಪ್ರಕರಣವೇನು?: ಹಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಶಾಂತಪುರ ಗ್ರಾಮದ ಸರ್ವೇ ನಂ.9ರಲ್ಲಿನ ಮೂರು ಎಕರೆ 35 ಗುಂಟೆ ಜಮೀನನ್ನು ವೆಂಕಟರಮಣಪ್ಪ ಅವರಿಗೆ ಮಂಜೂರು ಮಾಡಿತ್ತು. ಈ ಜಮೀನು ಮಂಜೂರಾತಿ ಕುರಿತು ಸಮೀಕ್ಷೆ ನಡೆಸಿದ್ದ ಹೊಸಕೋಟೆ ತಾಲೂಕಿನ ತಹಶೀಲ್ದಾರರು, ಜಮೀನು ಮಂಜೂರಾತಿ ಪ್ರಕ್ರಿಯೆ ಕಾನೂನು ಬದ್ಧವಾಗಿಲ್ಲ. ಹೀಗಾಗಿ ವೆಂಕಟರಮಣಪ್ಪ ಅವರಿಗೆ ಜಮೀನು ಮಂಜೂರು ಮಾಡಿರುವ ಕ್ರಮ ಹಾಗೂ ಜಮೀನು ಕುರಿತ ಕಂದಾಯ ದಾಖಲೆಗಳಲ್ಲಿ ನಮೂದಾಗಿರುವುದನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಈ ವರದಿ ಆಧರಿಸಿದ ಗ್ರಾಮಾಂತರ ಜಿಲ್ಲಾಧಿಕಾರಿಗಳು, ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 136(3) ಅಡಿ, ವೆಂಕಟರಮಣಪ್ಪ ಅವರಿಗೆ 3 ಎಕರೆ 35 ಗುಂಟೆ ಜಮೀನು ಮಂಜೂರಾತಿ ಮಾಡಿದ್ದ ಕ್ರಮವನ್ನು ರದ್ದುಪಡಿಸಲು ಸ್ವಯಂಪ್ರೇರಿತ ಪ್ರಕ್ರಿಯೆ ಕೈಗೊಂಡಿದ್ದರು. ಈ ಕ್ರಮ ಪ್ರಶ್ನಿಸಿ ಅವರ ಪುತ್ರ ಬಿ.ವಿ.ಕೃಷ್ಣಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೃಷ್ಣಪ್ಪ ಪರ ವಕೀಲರು ವಾದಿಸಿ, 2016ರ ನ. 9ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಲು ಕೃಷ್ಣಪ್ಪ ಅವರಿಗೆ 10 ದಿನಗಳ ಕಾಲಾವಕಾಶ ನೀಡಿ ಆದೇಶ ಕಾಯ್ದಿರಿಸಿದ್ದಾರೆ.
ಅಲ್ಲದೆ, ಕೃಷ್ಣಪ್ಪ ಅವರ ತಂದೆ ನಿಧನರಾಗಿದ್ದು, ಈ ಎಲ್ಲಾ ಮಾಹಿತಿಗಳೊಂದಿಗೆ ವಾದ ಮಂಡಿಸಲು ಸೂಕ್ತ ಅವಕಾಶ ಕಲ್ಪಿಸಿಲ್ಲ. ಈ ಕ್ರಮ ಕಾನೂನು ಬಾಹಿರವಾಗಿದ್ದು, ಮೃತ ವ್ಯಕ್ತಿಯ ಮೇಲೆ ಸ್ವಯಂ ಪ್ರೇರಿತ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯು ಪ್ರಕರಣದ ಕುರಿತ ತೀರ್ಪು ಕಾಯ್ದಿರಿಸಿದ ಕ್ರಮ ರದ್ದುಪಡಿಸಬೇಕು ಎಂದು ಕೋರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಜಿಲ್ಲಾಧಿಕಾರಿಗಳು ಪ್ರಕರಣ ಕುರಿತು ವಾದ ಮಂಡಿಸಲು ಅರ್ಜಿದಾರರಿಗೆ ಸೂಕ್ತ ಕಾಲಾವಕಾಶ ನೀಡಿಲ್ಲ.
ಜತೆಗೆ, ಆರ್ಜಿದಾರ ಕೃಷ್ಣಪ್ಪ ತಮ್ಮ ತಂದೆಯ ಮರಣ ಪತ್ರ ಅಥವಾ ಮರಣ ಹೊಂದಿದ ದಿನಾಂಕದ ಮಾಹಿತಿ, ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿಲ್ಲ. ಆದ್ದರಿಂದ ಕೃಷ್ಣಪ್ಪ ತಮ್ಮ ತಂದೆಯ ಮರಣ ಪತ್ರ ಹಾಗೂ ತಂದೆ ಮರಣ ಹೊಂದಿದ ದಿನಾಂಕದ ಕುರಿತ ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಆ ದಾಖಲೆಗಳನ್ನು ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳು, ಕಾನೂನು ಪ್ರಕಾರ ಸತ್ತ ವ್ಯಕ್ತಿಯ ಮೇಲೆ ಕಾನೂನು ಪ್ರಕ್ರಿಯೆ ನಡೆಸುವುದರ ಪರಿಣಾಮದ ಕುರಿತು ಸೂಕ್ತ ಆದೇಶ ಹೊರಡಿಸಬೇಕು ಎಂದು ಆದೇಶಿಸಿ ಅರ್ಜಿ ಇತ್ಯರ್ಥ ಪಡಿಸಿತು.