Advertisement

ಬೆಳೆ ಹಾನಿ ಸಮೀಕ್ಷೆಗೆ ಡಿಸಿ ಸೂಚನೆ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ

05:40 PM Sep 14, 2022 | Team Udayavani |

ಗುರುಮಠಕಲ್‌: ತಾಲೂಕಿನ ಹಳ್ಳಿಗಳಲ್ಲಿ ಅತಿಯಾದ ಮಳೆಯಿಂದ ಉಂಟಾದ ಬೆಳೆ ಹಾನಿ ಸಮೀಕ್ಷೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡು ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರ ಕಾರ್ಯವೈಖರಿ ಮತ್ತು ಸಲ್ಲಿಕೆಯಾದ ಅರ್ಜಿಗಳನ್ನು ಖುದ್ದು ಪರಿಶೀಲಿಸಿ ಮಾತನಾಡಿದರು. ತಾಲೂಕಿನಲ್ಲಿ ಸುಮಾರು 3,029 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಶೀಘ್ರದಲ್ಲಿಯೇ ಸಮೀಕ್ಷೆ ಕಾರ್ಯ ಮುಗಿಸುತ್ತೇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ, ಸ್ವತ್ಛತೆ ಕಾಪಾಡಿ, ನೈರ್ಮಲ್ಯ ಕಾಪಾಡುವಲ್ಲಿ ವಿಫಲವಾಗಬಾರದು. ಚರಂಡಿಗಳ ಸ್ವತ್ಛತೆ, ಸೊಳ್ಳೆ ನಿಯಂತ್ರಣ ಮಾಡಬೇಕು. ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು ಸ್ಪಂದಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮಯಕ್ಕೆ ಸರಿಯಾಗಿ ಬಸ್‌ ಗಳ ವ್ಯವಸ್ಥೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸೌದಿ ಅರೇಬಿಯಾದಲ್ಲಿ ಕಟ್ಟಡ ಕೆಲಸ ಮಾಡುತ್ತಿರುವಾಗ ತಾಲೂಕಿನ ಪುಟಪಾಕ್‌ ತಾಂಡದ ಕಾರ್ಮಿಕ ನಾನ್ಯಾ ಎಂಬಾತ ಮರಣ ಹೊಂದಿದ್ದರಿಂದ ಆತನ ಕುಟುಂಬಕ್ಕೆ ಸೌದಿ ಅರೇಬಿಯಾ ಸರ್ಕಾರದ ಧನ ಸಹಾಯ ಮಾಡಿತ್ತು. ಆ ಹಣದ ಚೆಕ್‌ನ್ನು ಜಿಲ್ಲಾಧಿಕಾರಿಯವರು ಮೃತನ ಪತ್ನಿ ವಿಜ್ಜಿಬಾಯಿಗೆ ವಿತರಿಸಿದರು.

Advertisement

ಕಂದಾಯ ಗ್ರಾಮ, ಮಾಸಾಶನ, ಪೈಕಿ ಪಹಣಿ, ಮೋಜಣಿ ಕಡತಗಳು, ಆರ್‌ಟಿಸಿ, ಎಜೆಎಸ್ಕೆ ತಂತ್ರಾಂಶದಡಿ ಸ್ವೀಕೃತವಾದ ಅರ್ಜಿಗಳು, ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು. ಸಕಾಲ ಅಡಿ ನೋಂದಾಯಿತ ಸೇವೆಗಳನ್ನು ಆದ್ಯತೆಯಲ್ಲಿ ಒದಗಿಸಿ, ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ನಂತರ ಪಟ್ಟಣದ ಇಂದಿರಾ ನಗರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಇಂದಿರಾ ನಗರದಲ್ಲಿ ವಾಸಿಸುವ ಅಲೆಮಾರಿ ಜನಾಂಗದವರ ಕಾಲೋನಿಯಲ್ಲಿ ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಎಲ್ಲ ಕುಟುಂಬದ ಮಕ್ಕಳ ಆರೋಗ್ಯವನ್ನು ಪರೀಕ್ಷಿಸಲು ಸಂಬಂಧಿಸಿದವರಿಗೆ ಸೂಚಿಸಿದರು.

ಅಂಗನವಾಡಿಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಸಿಗುವ ಉತ್ತಮ ಗುಣಮಟ್ಟದ ಆಹಾರವನ್ನು ವಿತರಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ತಹಶೀಲ್ದಾರ್‌ ಶರಣಬಸವ, ಗ್ರೇಡ್‌-2 ತಹಶೀಲ್ದಾರ್‌ ನರಸಿಂಹಸ್ವಾಮಿ, ಪುರಸಭೆ ಅಧಿಕಾರಿ ಭಾರತಿ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್‌, ಸಿಡಿಪಿಒ ಅಧಿಕಾರಿ ವನಜಾಕ್ಷಿ, ತಾ.ಪಂ ಎಡಿ ರಾಮಚಂದ್ರ ಬಸೂದೆ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next