ಕಲಬುರಗಿ: 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ನ್ಯಾಯ ಮತ್ತು ಲಾಭದಾಯಕ ( ಎಫ್.ಆರ್.ಪಿ.) ದರದಂತೆ ಕಬ್ಬು ಬೆಳಗಾರರಿಗೆ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರೊಂದಿಗೆ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಆಳಂದ ತಾಲೂಕು ಭೂಸನೂರಿನಲ್ಲಿರುವ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯ ಎಫ್. ಆರ್.ಪಿ ದರ ಪ್ರತಿ ಮೆಟ್ರಿಕ್ ಟನ್‌ಗೆ 2756 ರೂ., ಅಫಜಲಪುರ ತಾಲೂಕಿನ ಹಾವಳಗಾದ ರೇಣುಕಾ ಸಕ್ಕರೆ ಕಾರ್ಖಾನೆಯ 2853ರೂ., ಜೇವರ್ಗಿ ತಾಲೂಕಿನ ಮಳ್ಳಿ ಗ್ರಾಮದಲ್ಲಿರುವ ಉಗಾರ ಸಕ್ಕರೆ ಕಾರ್ಖಾನೆ 2793ರೂ. ಹಾಗೂ ಯಾದಗಿರಿ ಜಿಲ್ಲೆಯ ತುಮಕೂರಿನ ಕೋರ್ ಗ್ರೀನ್ ಶುಗರ್ ಲಿಮಿಟೆಡ್‌ನ ಎಫ್.ಆರ್.ಪಿದರ ಪ್ರತಿ ಮೆಟ್ರಿಕ್ ಟನ್‌ಗೆ 2734ರೂ.ಗಳನ್ನು ಸರ್ಕಾರ ನಿಗದಿಪಡಿಸಿದೆ. ಈ ಎಫ್.ಆರ್.ಪಿ ದರದ ಪ್ರಕಾರವೇ ಕಬ್ಬು ಬೆಳಗಾರರಿಗೆ ಹಣ ಪಾವತಿಸಬೇಕು ಎಂದು ಹೇಳಿದರು.
ಎಫ್.ಆರ್.ಪಿ. ದರದಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಸೇರಿರುತ್ತದೆ. ಹೀಗಾಗಿ ಸಾಗಾಣಿಕೆ ಮತ್ತು ಕಟಾವಣೆ ಮೊತ್ತ ಕಡಿತಗೊಳಿಸಿ, ಕಬ್ಬು ಮಾರಿದ ನಿವ್ವಳ ಮೊತ್ತವನ್ನು 15 ದಿನದೊಳಗಾಗಿ ರೈತರಿಗೆ ಪಾವತಿಸಿ. 15 ದಿನಗಳಲ್ಲಿ ಪಾವತಿಸದಿದ್ದಲ್ಲಿ ನಂತರದ ಅವ ಧಿಗೆ ವಾರ್ಷಿಕವಾಗಿ ಶೇಕಡಾ 15 ಬಡ್ಡಿಯೊಂದಿಗೆ ಪಾವತಿಸಲು ಸರ್ಕಾರದ ಸೂಚನೆಯಿದೆ. ಈ ಆದೇಶ ವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.
ಎಫ್.ಆರ್.ಪಿ ದರದಂತೆ ರೈತರಿಗೆಹಣ ಪಾವತಿಸುವ ಕುರಿತು ಪ್ರತಿವಾರ ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು. ಕಬ್ಬು ಮಾರಲು, ಕೊಳ್ಳಲು ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಡಂಬಡಿಕೆಮಾಡಿಕೊಳ್ಳುವ ಮಾರ್ಗಸೂಚಿಗಳಂತೆ ದ್ವಿಪಕ್ಷೀಯ ಒಡಂಬಡಿಕೆಯನ್ನು 2018-19ನೇ ಹಂಗಾಮಿನಿಂದಲೇ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದರು.
ರೈತ ಮುಖಂಡರೊಬ್ಬರು ಮಾತನಾಡಿ, ಉತ್ತರ ಕರ್ನಾಟಕ ಭಾಗಕ್ಕೆ ಎಕ್ಸ್ ಫೀಲ್ಡ್ ದರದ ಮೇಲೆ ತಾವುಗಳು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 2,500ರೂ. ನಿಗದಿಪಡಿಸಬೇಕೆಂದು ಜಿಲ್ಲಾ ಧಿಕಾರಿಗಳಿಗೆ ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸರ್ಕಾರದ ಮಾರ್ಗಸೂಚಿ ಅನ್ವಯ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ ದತ್ತಪ್ಪ ಕಲ್ಲೂರ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪುರ, ರಾಜ್ಯ ಕಾರ್ಯದರ್ಶಿ ದತ್ತಾತ್ರೇಯಎಂ. ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ಧರ್ಮರಾಜ ಸಾಹು, ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ರಾಧಾಕೃಷ್ಣನ್, ರೇಣುಕಾ ಸಕ್ಕರೆ ಕಾರ್ಖಾನೆ ಅಧಿಕಾರಿ ಸಂಜೀವ ಕುಮಾರ ನಾಯಕ್, ಉಗಾರ ಸಕ್ಕರೆ ಕಾರ್ಖಾನೆ ಅಧಿಕಾರಿ ಅವಿನಾಶ ಶಿರಗಾಂವಕರ, ಕಬ್ಬು ಬೆಳೆಗಾರರ ಸಂಘದ ಎಲ್ಲ ತಾಲೂಕು ಘಟಕದ ಅಧ್ಯಕ್ಷರು ಹಾಜರಿದ್ದರು.