ಮಂಗಳೂರು: ಮಂಗಳೂರು ತಾಲೂಕಿನ ಮಳಲಿಯ ಮಸೀದಿ ವಿವಾದ ಕುರಿತಂತೆ ವಿಶ್ವ ಹಿಂದೂ ಪರಿಷತ್ ತಾಂಬೂಲ ಪ್ರಶ್ನೆ ಇರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಂಗಳವಾರ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಮಸೀದಿಯ ನವೀಕರಣ ಕೆಲಸ ಮಾಡುತ್ತಿದ್ದಾಗ ದೇವಸ್ಥಾನವನ್ನು ಹೋಲುವ ರಚನೆ ಕಂಡು ಬಂದ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಅನಂತರ ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯ ತಡೆಯಾಜ್ಞೆ ನೀಡಿ ವಿವಾದ ಇತ್ಯರ್ಥವಾಗುವವರೆಗೆ ಕಾಮಗಾರಿ ನಡೆಸದಂತೆ ಆದೇಶ ನೀಡಿತ್ತು.
ಆ ಬಳಿಕವೂ ವಿವಿಧ ಸಂಘ ಸಂಸ್ಥೆಗಳು ಮನವಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ಮಸೀದಿಯವರು, ಪೊಲೀಸ್ ಮತ್ತು ಸಂಬಂಧಿಸಿದ ಇತರ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ನ್ಯಾಯಾಲಯದ ಆದೇಶ ಪಾಲಿಸುತ್ತೇವೆ, ನ್ಯಾಯಾಲಯ ದಲ್ಲಿಯೇ ಹೋರಾಟ ಮಾಡುತ್ತೇವೆ ಎಂದು ಮಸೀದಿಯವರು ಸಭೆಯಲ್ಲಿ ಹೇಳಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.
ತಾಂಬೂಲ ಪ್ರಶ್ನೆಗೆ ಸಿದ್ಧತೆ
ಮಸೀದಿಯಲ್ಲಿ ದೇವಸ್ಥಾನದ ರಚನೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೇ 25ರಂದು ಬೆಳಗ್ಗೆ 8ಕ್ಕೆ ಮಳಲಿಯ ರಾಮಾಂಜನೇಯ ಭಜನ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಪೂಜೆ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ತಿಳಿಸಿದೆ.
Related Articles
ಮಳಲಿಯಲ್ಲಿ ನಿಷೇಧಾಜ್ಞೆ
ಮಂಗಳೂರು: ಮಳಲಿಯ ಶ್ರೀ ರಾಮಾಂಜನೇಯ ಭಜನ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಇರಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಳಲಿ ಪೇಟೆಯ ಜುಮ್ಮಾ ಮಸೀದಿ ಸುತ್ತ ಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿಯಿಂದ 26ರ ಬೆಳಗ್ಗೆ 8ರ ವರೆಗೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಹೊರಡಿಸಿ ಆದೇಶಿಸಲಾಗಿದೆ.
ಕಾಜಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡುತಡಮೆ ರಸ್ತೆ ವರೆಗಿನ ವ್ಯಾಪ್ತಿಯನ್ನು ಸಂಪೂರ್ಣ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.