Advertisement

ಮಕ್ಕಳ ಪಾಲನಾ ಕೇಂದ್ರಗಳ ಸಮಗ್ರ ವಿವರ ಸಂಗ್ರಹಿಸಲು ಡಿಸಿ ಸೂಚನೆ

01:48 AM Feb 21, 2020 | mahesh |

ಮಂಗಳೂರು: ಜಿಲ್ಲೆಯಲ್ಲಿರುವ ಅನಾಥಾಲಯ, ನಿರ್ಗತಿಕರ ಮಂದಿರ ಸೇರಿದಂತೆ ಮಕ್ಕಳಿಗೆ ಆಶ್ರಯ ನೀಡುತ್ತಿರುವ ಎಲ್ಲ ಕೇಂದ್ರಗಳ ಸಮಗ್ರ ವಿವರ ಸಂಗ್ರಹಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಸೂಚಿಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌ಹಾಲ್‌ನಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ, ಮಕ್ಕಳ ಪಾಲನಾ ಸಂಸ್ಥೆಗಳ ಜಿಲ್ಲಾ ತನಿಖಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಪಾಲನಾ ಕೇಂದ್ರಗಳನ್ನು ಬಾಲನ್ಯಾಯ ಕಾಯಿದೆ ಅನ್ವಯ ನೋಂದಾಯಿಸಿ ಆಗಿಂದಾಗ್ಗೆ ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಶಿಲನೆ ನಡೆಸುವಂತೆ ಆದೇಶಿಸಿದರು.

Advertisement

ಪೊಲೀಸ್‌ ಪರಿಶೀಲನೆ ಅಗತ್ಯ 
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೆಂಕಪ್ಪ ಎಂ. ಮಾತನಾಡಿ, ಮಕ್ಕಳ ಪಾಲನಾ ಸಂಸ್ಥೆಯಲ್ಲಿ ನಿಯೋಜಿಸಲ್ಪಡುವ ಸಿಬಂದಿಯನ್ನು ಪೊಲೀಸ್‌ ಪರಿಶೀಲನೆ ಮಾಡದೇ ನೇಮಿಸಬಾರದು ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಬಂದಿಯ ಹಿನ್ನೆಲೆಯನ್ನು ಪೊಲೀಸ್‌ ಪರಿಶೀಲನೆ ಮುಖಾಂತರ ಖಚಿತಪಡಿಸಿಕೊಳ್ಳಬೇಕು ಹಾಗೂ ಸಿಬಂದಿಯ ಪೊಲೀಸ್‌ ಪರಿಶೀಲನೆಯನ್ನು ಶುಲ್ಕ ರಹಿತವಾಗಿ ನಡೆಸಿಕೊಡುವಂತೆ ಇಲಾಖೆಗೆ ಸೂಚಿಸಿದೆ ಎಂದು ವಿವರಿಸಿದರು.

ಭಿಕ್ಷಾಟನೆ ನಿರತ ಮಕ್ಕಳು ಕಂಡು ಬಂದಾಗ ಸಮಾಜ ಕಲ್ಯಾಣ ಇಲಾಖೆಯ ಸಹಾಯ ಪಡೆದು ಮಕ್ಕಳನ್ನು ಪುರ್ನವಸತಿ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ ಎಂದು ಡಿಸಿಪಿಒ ಹೇಳಿದರು.
ಹೆಚ್ಚುವರಿ ಮಕ್ಕಳಿಗೆ ಸೌಲಭ್ಯ ಎಚ್‌ಐವಿ ಸೋಂಕಿತ, ಬಾಧಿತ ಮಕ್ಕಳು ಹಾಗೂ ಇಂತಹ ಕಾಯಿಲೆಯಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಾಲನೆ ನಿಮಿತ್ತ ವಿಶೇಷ ಪಾಲನಾ ಯೋಜನೆಯ ಅನುಷ್ಠಾನ
ಗೊಳಿಸುವ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿ, ಹೆಚ್ಚುವರಿ ಮಕ್ಕಳಿಗೆ ಸೌಲಭ್ಯ ಕೊಡುವ ಬಗ್ಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಯೋಜನೆಯ ಅನ್ವಯ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 537 ಫಲಾನುಭವಿಗಳಿಗೆ 21,48,000 ರೂ. ಪೋಷಣಾ ವೆಚ್ಚ ಜಮೆ ಮಾಡಲಾಗಿದೆ. ಈ ಫಲಾನುಭವಿಗಳಲ್ಲಿ 18 ವರ್ಷ ಪೂರ್ಣಗೊಂಡಿರುವುದರಿಂದ ಆ ಫಲಾನುಭವಿಗಳ ಬದಲಿಗೆ 28 ಹೊಸ ಫಲಾನುಭವಿಗಳ ಸೇರ್ಪಡೆಗೆ ಅನುಮೋದನೆ ಕೋರಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೆಂಕಪ್ಪ ಎಂ. ಮಾಹಿತಿ ನೀಡಿದರು.
ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಿಲ್ಪಾ ಎ.ಜೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್‌, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಶಾಂತಿ ಸಂದೇಶ ಟ್ರಸ್ಟ್‌ ನಿರ್ದೇಶಕ ಸಿ| ದುಲ್‌ಸಿನ್‌ ಕ್ರಾಸ್ತಾ, ವಕ್ಫ್ ಅಧಿಕಾರಿ ಎಂ. ಅಬೂಬಕ್ಕರ್‌, ಬಾಲನ್ಯಾಯ ಮಂಡಳಿ ಸದಸ್ಯೆ ಗೌರಿ ಕೆ.ಎಸ್‌.ವೆನಲಾಕ್ ಆಸ್ಪತ್ರೆ ಆಪ್ತ ಸಮಾಲೋಚಕ ಆನಂದ್‌ ಎನ್‌. ಮೊದಲಾದವರು ಉಪಸ್ಥಿತರಿದ್ದರು.

ಮಕ್ಕಳ ಹಕ್ಕು ಉಲ್ಲಂಘನೆ ದೂರು ಇಲ್ಲ
ವಕ್ಫ್ ಇಲಾಖೆಯ ಮದ್ರಸಗಳಲ್ಲಿ ಮುಖ್ಯೋಪಾಧ್ಯಾಯರು, ಆಡಳಿತ ಸಮಿತಿಯ ಸದಸ್ಯರು ಮತ್ತು ಮಕ್ಕಳ ರಕ್ಷಕರು ಸೇರಿ ಮಕ್ಕಳ ಸುರಕ್ಷತಾ ಸಮಿತಿಯನ್ನು ರಚಿಸಿರುತ್ತಾರೆ, ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಕುಂದುಕೊರತೆ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ಮದ್ರಸಗಳಲ್ಲಿ ಮಕ್ಕಳ ಹಕ್ಕು ಉಲ್ಲಂಘನೆಯಾದ ಬಗ್ಗೆ ದೂರು ಬಂದಿರುವುದಿಲ್ಲ ಎಂದು ಡಿಸಿಪಿಒ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next