Advertisement

ಪಾರದರ್ಶಕ ಪೂರಕ ಪರೀಕ್ಷೆ ನಡೆಸಲು ಡಿಸಿ ತಾಕೀತು

04:18 PM Jun 26, 2018 | |

ವಿಜಯಪುರ: ಜೂನ್‌ 29ರಿಂದ ಜುಲೈ 10ರವರೆಗೆ ಪಿಯು ಪೂರಕ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ಇಲ್ಲದಂತೆ ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಸೂಚಿಸಿದರು.

Advertisement

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಯು ಪೂರಕ ಪರೀಕ್ಷೆ ಪೂರ್ವಸಿದ್ಧತೆ‌ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಪರೀಕ್ಷಾ ದಿನಗಳಂದು ಪ್ರಶ್ನೆ ಪತ್ರಿಕೆಗಳ ಸ್ವೀಕೃತಿ, ಭದ್ರತಾ ಕೊಠಡಿಯಲ್ಲಿ ಶೇಖರಣೆ, ಪರೀಕ್ಷಾ ದಿನಗಳಂದು ಹಾಗೂ ಪರೀಕ್ಷಾ ಕೇಂದ್ರ ತಲುಪುವವರೆಗೂ ಅವುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಶ್ನೆ ಪತ್ರಿಕೆಗಳ ಗೌಪ್ಯತೆ, ಪರೀಕ್ಷಾ ಕೇಂದ್ರ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ನಿಯಮಾನುಸಾರ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಪರೀಕ್ಷಾ ಕೇಂದ್ರಗಳ ಮುಖ್ಯ ಅಧಿಧೀಕ್ಷಕರುಗಳು, ತಮ್ಮ ಕೇಂದ್ರಕ್ಕೆ ನಿಗದಿಗೊಳಿಸಿದ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಆಸನದ ವ್ಯವಸ್ಥೆ, ಪರೀಕ್ಷಾ ಕೊಠಡಿಯಲ್ಲಿ ಸರಿಯಾದ ಗಾಳಿ, ಬೆಳಕು, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪಾರದರ್ಶಕ ಹಾಗೂ ಪರೀಕ್ಷಾ ಪಾವಿತ್ರ್ಯತೆ ಕಾಪಾಡಬೇಕು. ಪರೀಕ್ಷೆ ಕೇಂದ್ರದಲ್ಲಿ ಮೊಬೈಲ್‌ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಸಾಮಗ್ರಿ ಬಳಸುವಂತಿಲ್ಲ. ಪರೀಕ್ಷೆಯಲ್ಲಿ ನಕಲು ಸೇರಿದಂತೆ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ 2 ಪರೀಕ್ಷಾ ಕೇಂದ್ರಗಳಿಗೆ ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಆನ್‌ಲೈನ್‌ ಪ್ರಶ್ನೆ ಪತ್ರಿಕೆ ಒದಗಿಸಲಾಗುತ್ತಿದೆ. ಈ ಫಲಿತಾಂಶ ಆಧರಿಸಿ ಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪರೀಕ್ಷಾ ಅಕ್ರಮ ನಿಯಂತ್ರಿಸಲು ಪ್ರತಿ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ತಮಗೆ ಸಿಸಿ ಟಿವಿ ರೆಕಾರ್ಡಿಂಗ್‌ ಮಾಹಿತಿ ನೀಡಬೇಕು.

ಪರೀಕ್ಷಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಪರೀಕ್ಷಾ ಕೊಠಡಿಗಳ ಬ್ಲಾಕ್‌ ರಚಿಸಬೇಕು. ಕೊಠಡಿಗಳ ಕೊರತೆ ಕಂಡು ಬಂದಲ್ಲಿ ಉಪ ಕೇಂದ್ರದ ವ್ಯವಸ್ಥೆ ಮಾಡಿಕೊಳ್ಳಬೇಕು. ಆಸನದ ವ್ಯವಸ್ಥೆ ಬಗ್ಗೆ ಯಾವ ನಂಬರ್‌ ಯಾವ ಕೊಠಡಿಯಲ್ಲಿ ಯಾವ ಬ್ಲಾಕ್‌ದಲ್ಲಿದೆ ಎಂಬ ಕುರಿತು ಸ್ಪಷ್ಟ ಮಾಹಿತಿಯನ್ನು ಪರೀಕ್ಷಾರ್ಥಿಗಳಿಗೆ ಸುಲಭವಾಗಿ ತಿಳಿಯುವಂತೆ ನೋಟಿಸ್‌ ಬೋರ್ಡ್‌ಗೆ ಅಳವಡಿಸಬೇಕು ಎಂದು ಸೂಚನೆ ನೀಡಿದರು.

Advertisement

ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾರಕರು, ವಿದ್ಯಾರ್ಥಿಗಳು, ಪರೀಕ್ಷೆಗೆ ನಿಯೋಜಿತ ಅಧಿಕಾರಿ- ಸಿಬ್ಬಂದಿಗಳನ್ನು ಹೊರತುಪಡಿಸಿ ಮಾಧ್ಯಮದವರು ಸೇರಿದಂತೆ ಪರೀಕ್ಷೆಗೆ ಸಂಬಂಧ ಇಲ್ಲದ ಯಾವುದೇ ವ್ಯಕ್ತಿಯನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ-ತಾಲೂಕು ಮಟ್ಟದ ಅಧಿಕಾರಿಗಳನ್ನು ಪರಿವೀಕ್ಷಕರು ಹಾಗೂ ವಿಶೇಷ ಜಾಗೃತ ದಳದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ 15 ನಿಮಿಷ ಮೊದಲೇ ಹಾಜರಿದ್ದು, ನಕಲು ಮುಕ್ತ ಪರೀಕ್ಷೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಪ್ರಶ್ನೆ ಪತ್ರಿಕೆಗಳ ವಿತರಣಾ ಸಂದರ್ಭದಲ್ಲಿ ಪ್ರತಿ ವಾಹನಕ್ಕೆ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ, ಪ್ರತಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಕಲಂ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಿ, ಸುತ್ತಮುತ್ತಲಿನ ಝರಾಕ್ಸ್‌ ಅಂಗಡಿಗಳನ್ನು ಬಂದ್‌ ಮಾಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಸಭೆಯಲ್ಲಿ, ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಬಿ. ಅಂಕದ, ಜಿಲ್ಲಾ ಶಿಕ್ಷಣಾಧಿಕಾರಿ ಎ.ಎಂ. ಲೀಮಕರ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next