Advertisement

ಬೆಂಗಳೂರು ವನಿತೆಯರಿಗೆ ಐದನೇ ಸೋಲು

11:24 PM Mar 13, 2023 | Team Udayavani |

ನವಿಮುಂಬಯಿ: ಬ್ಯಾಟಿಂಗಿಗೆ ಯೋಗ್ಯವಾದ ಈ ಪಿಚ್‌ನಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸೋಮವಾರದ ವನಿತೆಯರ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಎಲಿಸೆ ಪೆರ್ರಿ ಮತ್ತು ರಿಚಾ ಘೋಷ್‌ ಅವರ ಉತ್ತಮ ಆಟದಿಂದಾಗಿ ಬೆಂಗಳೂರು ತಂಡವು 4 ವಿಕೆಟಿಗೆ 150 ರನ್‌ ಗಳಿಸಿದ್ದರೆ ಡೆಲ್ಲಿ ತಂಡವು 19.4 ಓವರ್‌ಗಳಲ್ಲಿ 4 ವಿಕೆಟಿಗೆ 154 ರನ್‌ ಗಳಿಸಿ ಜಯಭೇರಿ ಬಾರಿಸಿತು. ಇದು ಡೆಲ್ಲಿ ತಂಡಕ್ಕೆ ಒಲಿದ ನಾಲ್ಕನೇ ಗೆಲುವು ಆಗಿದ್ದರೆ ಬೆಂಗಳೂರಿಗೆ ಸತತ ಐದನೇ ಸೋಲು ಆಗಿದೆ. ಅಲಿಸ್‌ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್‌, ಮಾರಿಜಾನೆ ಕ್ಯಾಪ್‌ ಮತ್ತು ಜೆಸ್‌ ಜೋನಾಸೆನ್‌ ಅವರ ಉತ್ತಮ ಆಟದಿಂದಾಗಿ ಡೆಲ್ಲಿ ತಂಡವು ಸುಲಭ ಗೆಲುವು ದಾಖಲಿಸಿದೆ. ಡೆಲ್ಲಿ ಇಷ್ಟರವರೆಗೆ ಐದು ಪಂದ್ಯ ಆಡಿದ್ದು ಮುಂಬೈ ವಿರುದ್ಧ ಈ ಮೊದಲು ಸೋತಿದೆ.

ಬೆಂಗಳೂರು ಉತ್ತಮ ಮೊತ್ತ
ಸತತ ನಾಲ್ಕು ಸೋಲುಗಳ ಬಳಿಕ ಬೆಂಗಳೂರು ತಂಡವು ಈ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಗಿದೆ. ಎಲಿಸೆ ಪೆರ್ರಿ ಮತ್ತು ರಿಚಾ ಘೋಷ್‌ ಅವರ ಉತ್ತಮ ಆಟದಿಂದಾಗಿ ಬೆಂಗಳೂರು ಆರಂಭದ ಕುಸಿತದಿಂದ ಚೇತರಿಸಿಕೊಂಡಿತು.

29 ರನ್‌ ಗಳಿಸಿದ ವೇಳೆ ಜೀವದಾನ ಪಡೆದ ಪೆರ್ರಿ ಅವರು ಆಬಳಿಕ ಭರ್ಜರಿಯಾಗಿ ಆಡಿದರು. ಒಟ್ಟಾರೆ 52 ಎಸೆತ ಎದುರಿಸಿದ ಅವರು ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ ನೆರವಿನಿಂದ 67 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದು ಈ ಸರಣಿಯಲ್ಲಿ ಅವರು ಹೊಡೆದ ಎರಡನೇ ಅರ್ಧಶತಕವಾಇದೆ. ಅವರಿಗೆ ಉತ್ತಮ ಬೆಂಬಲ ನೀಡಿದ ರಿಚಾ ಘೋಷ್‌ ಕೇವಲ 16 ಎಸೆತಗಳಿಂದ 37 ರನ್‌ ಸಿಡಿಸಿದರು. ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ ಬಾರಿಸಿ ರಂಜಿಸಿದರು. ಇದು ಅವರ ಈ ಕೂಟದ ಗರಿಷ್ಠ ಮೊತ್ತ ಆಗಿದೆ. ಅವರಿಬ್ಬರು ನಾಲ್ಕನೇ ವಿಕೆಟಿಗೆ ಕೇವಲ 34 ಎಸೆತಗಳಿಂದ 74 ರನ್‌ ಸಿಡಿಸಿದ್ದರು. ಇದರಿಂದ ಬೆಂಗಳೂರಿನ ಮೊತ್ತ 150 ತಲಪುವಂತಾಯಿತು.

ಮಂಗಳವಾರ ನಡೆಯುವ ಪಂದ್ಯದಲ್ಲಿ ಅಜೇಯ ಮುಂಬೈ ಇಂಡಿಯನ್ಸ್‌ ತಂಡವು ಗುಜರಾತ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಮುಂಬೈ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ.

Advertisement

ಸಂಕ್ಷಿಪ್ತ ಸ್ಕೋರು: ರಾಯಲ್‌ ಚಾಲೆಂಜರ್ ಬೆಂಗಳೂರು 4 ವಿಕೆಟಿಗೆ 150 (ಎಲಿಸೆ ಪೆರ್ರಿ 67 ಔಟಾಗದೆ, ರಿಚಾ ಘೋಷ್‌ 37, ಶಿಖಾ ಪಾಂಡೆ 23ಕ್ಕೆ 3); ಡೆಲ್ಲಿ ಕ್ಯಾಪಿಟಲ್ಸ್‌ 19.4 ಓವರ್‌ಗಳಲ್ಲಿ 4 ವಿಕೆಟಿಗೆ 154 (ಅಲಿಸ್‌ ಕ್ಯಾಪ್ಸೆ 38, ಜೆಮಿಮಾ ರೋಡ್ರಿಗಸ್‌ 32, ಮಾರಿಜಾನೆ ಕ್ಯಾಪ್‌ 32 ಔಟಾಗದೆ, ಜೆಸ್‌ ಜೋನಾಸೆನ್‌ 29 ಔಟಾಗದೆ, ಸೋಭಾನಾ ಆಶಾ 27ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next