Advertisement

ಆರೋಗ್ಯ ಕಾಳಜಿಗೆ ಪೊಲೀಸರಿಗೆ ಡಿಸಿ ಸಲಹೆ

06:01 PM Nov 30, 2021 | Team Udayavani |

ಗದಗ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುವ, ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ಪ್ರತಿನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಇಲ್ಲಿನ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತರೆ ಇಲಾಖೆಯ ಸಿಬ್ಬಂದಿ ಸರ್ಕಾರದ ಸೇವೆಯನ್ನು ಮಾಡುತ್ತಾರೆ. ಆದರೆ ಜನರಿಗೆ ಅತೀ ಹೆಚ್ಚು ಹತ್ತಿರದಿಂದ ಹಾಗೂ ಜನರಿಗೆ ನಿರಂತರವಾಗಿ ಸ್ಪಂದಿಸುವುದು ಪೊಲೀಸ್‌ ಇಲಾಖೆ ಮಾತ್ರ. ಅದರಲ್ಲೂ ಸತತ ಎರಡು ವರ್ಷದಿಂದ ಕಾಡುತ್ತಿರುವ ಮಹಾಮಾರಿ ಕೋವಿಡ್‌ ನಿರ್ವಹಣೆಯಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿ ಅತ್ಯಂತ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದಾರೆ.

ಕೋವಿಡ್‌ ಮೊದಲ ಮತ್ತು ಎರಡನೇ ಲಾಕ್‌ಡೌನ್‌ನಲ್ಲಿ ಗದಗ ಜಿಲ್ಲಾ ಪೊಲೀಸ್‌ ಇಲಾಖೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ಜಿಲ್ಲೆಯ ಆರೋಗ್ಯ ಇಲಾಖೆ ಸೋಂಕಿತರಿಗೆ ಉತ್ತಮ ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡಿದರೆ, ಪೊಲೀಸ್‌ ಇಲಾಖೆ ಸೋಂಕು ವ್ಯಾಪಕವಾಗಿ ಹರಡದಂತೆ ನಿಗಾ ವಹಿಸಿ ಜನದಟ್ಟಣೆ ಸೇರದಂತೆ ನೋಡಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೇರೆ ಇಲಾಖೆಯವರಿಗೆ ಕುಟುಂಬಕ್ಕೆ ಹಾಗೂ ಆರೋಗ್ಯ ಕಡೆಗೆ ಗಮನ ಕೊಡಲು ಸಮಯವಿರುತ್ತದೆ. ಆದರೆ, ಪೊಲೀಸರಿಗೆ ಸಮಯವಿರುವುದಿಲ್ಲ. ಹಬ್ಬಹರಿದಿನಗಳ ಸಂದರ್ಭದಲ್ಲೂ ಅವಿರತವಾಗಿ ಶ್ರಮಿಸುತ್ತೀರಿ. ತಮ್ಮ ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯ 30 ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬೇಕು. ಕುಟುಂಬದವರಿಗೂ ಸಮಯ ನೀಡಬೇಕು. ಮಕ್ಕಳು ಶಿಕ್ಷಣದ ಬಗ್ಗೆಯೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್ಪಿ ಶಿವಪ್ರಕಾಶ ದೇವರಾಜ ಸ್ವಾಗತಿಸಿದರು. ಡಿಸಿಆರ್‌ಬಿ ಡಿಎಸ್ಪಿ ವಿಜಯ ಬಿರಾದಾರ, ಗದಗ ಡಿಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐಗಳಾದ ಪಂಚಾಕ್ಷರಿ ಸಾಲಿಮಠ, ವಿಕಾಸ ಲಮಾಣಿ, ಸುನೀಲ ಸವದಿ, ರವಿ ಕಪ್ಪತ್ತನವರ, ವಿದ್ಯಾನಂದ ನಾಯಕ ಸೇರಿದಂತೆ ಜಿಲ್ಲೆಯ 2 ಉಪವಿಭಾಗದ 7 ಠಾಣೆಗಳ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next