Advertisement

ಹಗಲಲ್ಲಿ ದಿನಗೂಲಿ ಕಾರ್ಮಿಕ, ಇರುಳಲ್ಲಿ ಶ್ರೇಷ್ಠ ಅನುವಾದಕ!

10:04 AM Dec 02, 2019 | sudhir |

ಬೆಳಗಿನ ಹೊತ್ತು ದಿನಗೂಲಿ ನೌಕರನಾಗಿ ದುಡಿಯುವ ವ್ಯಕ್ತಿಯೊಬ್ಬ, ರಾತ್ರಿಯ ವೇಳೆ ಕೃತಿಗಳ ಅನುವಾದಕನಾಗಿ ಕೆಲಸ ಮಾಡುವ ಸೋಜಿ ಗದ ಕಥೆಯೊಂದನ್ನು ನೀವೀಗ ಓದಲಿದ್ದೀರಿ. ಅತ್ಯುತ್ತಮ ಅನುವಾದಕ ಅನ್ನಿಸಿಕೊಂಡಿರುವ ಈತನ ಕ್ವಾಲಿಫಿಕೇಶನ್‌- ಎಸ್ಸೆಸ್ಸೆಲ್ಸಿ ಫೇಲ್‌! ಹಾಗಿದ್ದರೂ, ಸತತ ಪರಿಶ್ರಮದಿಂದ ಮೂರ್‍ನಾಲ್ಕು ಭಾಷೆ ಕಲಿತಿರುವ
ಈತ , ಕೇರಳದ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಪಾತ್ರನಾಗಿದ್ದಾನೆ. ತಮಿಳಿನ ಘಟಾನುಘಟಿ ಲೇಖಕರೆಲ್ಲ, ತಮ್ಮ ಕೃತಿಗಳನ್ನು ಮಲಯಾಳಕ್ಕೆ ಅನುವಾದಿಸಲು, ಈತನಿಗೆ ಬೇಷರತ್‌ ಅನುಮತಿ ನೀಡಿದ್ದಾರೆ!

Advertisement

ಅಂದಹಾಗೆ, ಈತ ನ ಹೆಸರು ಶಫಿ ಮೊಹಮ್ಮದ್‌ ಅಲಿಯಾಸ್‌ ಶಫಿ ಚೆರುಮಾವಿಲಾಯಿ. ಕೇರಳದ ಕಣ್ಣೂರು ಜಿಲ್ಲೆಯ ಮುಳಪ್ಪಿಲಂಗಾಡ್‌ನ‌ಲ್ಲಿ, ಹಗಲಿನಲ್ಲಿ ದಿನಗೂಲಿ ನೌಕರ, ರಾತ್ರಿಯ ವೇಳೆ ಅನುವಾದಕನಾಗಿ- ಎರಡೂ ಪಾತ್ರಗಳಲ್ಲಿ ಬದುಕುತ್ತಿರುವ ಶಫಿಗೂ, ಬೆಂಗಳೂರಿಗೂ ಬಿಡಲಾರದ ನಂಟು. ನಿಜ ಹೇಳಬೇಕೆಂದರೆ- ಶಫಿಯ ಬದುಕಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೇ ಬೆಂಗಳೂರಿನಲ್ಲಿ. ಮಲಯಾಳ ಮಾತೃಭಾಷೆಯವನಾದ ಶಫಿ, ತಮಿಳು ಕಲಿತದ್ದು, ಅನುವಾದದ ಕೆಲಸ ಆರಂಭಿಸಿದ್ದು- ಬೆಂಗಳೂರಿನ ವಿವೇಕ ನಗರದಲ್ಲಿ! ಎಲ್ಲಿಂದಲೋ ಬಂದ , ಎಸ್ಸೆಸ್ಸೆಲ್ಸಿ ಫೇಲ್‌ ಆದ ವ್ಯಕ್ತಿಯೊಬ್ಬ, ನಮ್ಮೂರಲ್ಲಿ ಬೇರೊಂದು ಭಾಷೆ ಕಲಿತದ್ದು ಮಾತ್ರವಲ್ಲದೆ, ಶ್ರೇಷ್ಠ ಅನುವಾದಕ ಆಗುವ ಮಟ್ಟಕ್ಕೆ ಬೆಳದದ್ದು ಹೇಗೆ ಎಂಬ ಕುತೂಹಲವನ್ನು ಜೊತೆಗಿಟ್ಟುಕೊಂಡೇ ಅವರನ್ನು ಹುಡು ಕಲು ಹೊರಟರೆ-15 ದಿನಗಳ ಸತತ ಪ್ರಯತ್ನದ ನಂತರ ಶಫಿ, ಕಡೆಗೂ ಮಾತಿಗೆ ಸಿಕ್ಕಿದರು. ಸಂಕೋಚವಿಲ್ಲದೆ ತಮ್ಮ ಬದುಕಿನ ಕಥೆ ಹೇಳಿ ಕೊಂಡರು. ಅದನ್ನೆಲ್ಲ ಅವರ ಮಾತುಗಳಲ್ಲೇ ಹೇಳುವುದಾದರೆ…
***
“ಕಣ್ಣೂರು ಜಿಲ್ಲೆಯ ಚೆರುಮಾವಿಲಾಯಿ, ನನ್ನ ಹುಟ್ಟೂರು. ನಮ್ಮದು ಮಿಡ್ಲ್ ಕ್ಲಾಸ್‌ ಫ್ಯಾಮಿ ಲಿ. ಅಪ್ಪನ ಹೆಸರು ಮೊಹಿತೇನ್‌ ಕುಟ್ಟಿ. ಅವರು ಮೀನು ಮಾರಾಟದ ಕೆಲಸ ಮಾಡುತ್ತಿದ್ದರು. ಐವರು ಮಕ್ಕಳು ಮತ್ತು ಅಪ್ಪ, ಅಮ್ಮ -ಒಟ್ಟು 7 ಮಂದಿಯ ಹೊಟ್ಟೆಪಾಡಿಗೆ ಅಪ್ಪನ ದುಡಿಮೆಯೇ ಆಧಾರವಾಗಿತ್ತು. ಅದೇಕೋ ಏನೋ, ನಮ್ಮ ಕುಟುಂಬದಲ್ಲಿ ಯಾರಿಗೂ ಓದು ತಲೆಗೆ ಹತ್ತಲಿಲ್ಲ. ನಾವು ಐದು ಮಕ್ಕಳು ಅಂದೆನ ಲ್ಲವೇ? ಆ ಪೈಕಿ ಇಬ್ಬರು ಶಾಲೆಯ ಮೆಟ್ಟಿಲನ್ನೇ ಹತ್ತಲಿಲ್ಲ. ಇನ್ನಿಬ್ರು, ನಾಲ್ಕನೇ ತರಗತಿಗೇ ಸ್ಕೂಲು ಬಿಟ್ಟರು. ನಾನು, 10ನೇ ತರಗತಿಯವರೆಗೂ ಬಂದಾಗ, ಇವನಾದ್ರೂ ಕಾಲೇಜಿಗೆ ಹೋಗಬಹುದೇನೋ ಎಂದು ಮನೆಯವರೆಲ್ಲ ಮಾತನಾಡಿಕೊಂಡರು. ಆದರೆ, ಎಸ್ಸೆಸ್ಸೆಲ್ಸಿಯಲ್ಲಿ ನಾನೂ ಡುಮ್ಕಿ ಹೊಡೆದೆ. ಆನಂತರದಲ್ಲಿ, ಶಾಲೆಗೆ ಹೋಗಲು, ಓದು ಮುಂದುವರಿಸಲು ನನಗೆ ಉತ್ಸಾಹ ಬರಲಿಲ್ಲ.

ಮನೆಯಲ್ಲಿದ್ದು ಮಾಡುವುದೇನು? ಎಲ್ಲಾದರೂ ಕೆಲಸಕ್ಕೆ ಸೇರಬೇಕು. ಮನೆಯ ಖರ್ಚು ನಿಭಾಯಿಸಲು ನೆರವಾಗಬೇಕು ಅನ್ನಿಸಿದಾಗ -ಪುಣೆಗೆ ಹೋದರೆ ಏನಾದರೂ ಕೆಲಸ ಗಿಟ್ಟಿಸಬಹುದು ಅನ್ನಿಸಿತು. ತಡಮಾಡದೆ ಪುಣೆಯ ರೈಲು ಹತ್ತಿದೆ. ಅಲ್ಲಿ ಒಂದು ಪ್ರಾವಿಷನ್‌ ಸ್ಟೋರ್‌ನಲ್ಲಿ ಕೆಲಸಕ್ಕೆ ಸೇರಿದಾಗ ನನಗೆ 16 ವರ್ಷ. ಎರಡು ವರ್ಷ ಕಳೆವುದರೊಳಗೆ ಪುಣೆ ಬೋರ್‌ ಹೊಡೆಸಿತು. ತಕ್ಷಣ ಊರಿಗೆ ವಾಪಸಾದೆ. ಮುಂದಿನ ಎರಡು ವರ್ಷ, ಪ್ರತಿ ಮೂರು ತಿಂಗಳಿಗೆ ಒಂದು ಕೆಲಸ ಬದಲಿಸಿದೆ. ಆಗಲೇ -ಬೆಂಗಳೂರಲ್ಲಿ ಚಿಕ್ಕ ಹೋಟೆಲ್‌ ಇಟ್ಟುಕೊಂಡಿದ್ದ ದೂರದ ಸಂಬಂಧಿಯೊಬ್ಬರು, “ನಿನಗೆ ಕೆಲಸ ಕೊಡ್ತೀನಿ, ಬಂದು ಬಿಡು’ ಅಂದರು. ಹಿಂದೆ ಮುಂದೆ ಯೋಚಿಸದೆ ಎದ್ದು ಬಂದೆ.

ನನ್ನ ಬಂಧುವಿಗೆ, ಬೆಂಗಳೂರಿನ ವಿವೇಕನಗರದಲ್ಲಿ ಒಂದು ಚಿಕ್ಕ ಹೋಟೆಲ್‌ ಇತ್ತು. ಕಾಫಿ, ಟೀ, ಬ್ರೆಡ್‌, ಬಿಸ್ಕತ್‌- ಅಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿತ್ತು. ಆ ಹೋಟೆಲಿಗೆ ಬರುತ್ತಿದ್ದವರಲ್ಲಿ ಹೆಚ್ಚಿನವರು ತಮಿಳರು. ಅವರ ಭಾಷಾಭಿಮಾನದ ಬಗ್ಗೆ ಬಿಡಿಸಿ ಹೇಳಬೇಕೆ? ಟೀ ಕುಡಿಯುವ ನೆಪದಲ್ಲಿ ಕಲೆ, ಸಾಹಿತ್ಯ,ರಾಜಕೀಯದ ವಿಷಯವನ್ನೆಲ್ಲ ಮಾತಾಡುತ್ತಿದ್ದರು. ಹೀಗೆ ಬರುತ್ತಿದ್ದ ವರಲ್ಲಿ ಹೆಚ್ಚಿನವರು ತಮಿಳು ಪತ್ರಿಕೆಗಳನ್ನು ತರುತ್ತಿದ್ದರು. ದಿನವೂ ಅವರೊಂದಿಗೆ ವ್ಯವಹರಿಸಬೇಕಿತ್ತಲ್ಲ; ಆ ಕಾರಣಕ್ಕಾಗಿ ನಿಧಾನಕ್ಕೆ ತಮಿಳು ಮಾತಾಡಲು ಕಲಿತೆ. ಭಾನುವಾರಗಳಲ್ಲಿ, ಟೀ ಕುಡಿಯಲೆಂದು ಬರುತ್ತಿದ್ದ ತಮಿಳು ಗೆಳೆಯರ ಉತ್ಸಾಹ ಹೆಚ್ಚಿರುತ್ತಿತ್ತು. ರವಿವಾರದ ಪುರವಣಿಯಲ್ಲಿ ಪ್ರಕಟವಾದ ಕತೆ, ಕವಿತೆಯ ಬಗ್ಗೆ ಅವರೆಲ್ಲ ಮಾತಾಡುತ್ತಿದ್ದರು. ಅದನ್ನು ಕೇಳಿದಾಗೆಲ್ಲ, ನನ್ನ ಭಾಷೆಯ ಜನರಿಗೂ ಈ ಕತೆಯನ್ನು ಹೇಳಬೇಕು ಅನ್ನಿಸುತ್ತಿತ್ತು. ದಿನಗಳೆದಂತೆ, ಗ್ರಾಹಕರೊಂದಿಗೆ ಮಾತಾಡುತ್ತಲೇ ತಮಿಳು ಮಾತಾಡಲು ಮಾತ್ರವಲ್ಲ; ಓದಲೂ ಕಲಿತೆ. ವಿವೇಕನಗರದಲ್ಲಿ, ತಮಿಳರೇ ಹೆಚ್ಚಾಗಿದ್ದುದರಿಂದ ವಾರಕ್ಕೆರಡು ತಮಿಳು ಸಿನಿಮಾಗಳು ಬಿಡುಗಡೆ ಯಾಗುತ್ತಿದ್ದವು. ಹೋಟೆಲ್‌ ಕೆಲಸ ಮುಗಿದ ಮೇಲೆ, ಗ್ರಾಹಕರು ಬಿಟ್ಟು ಹೋಗಿರುತ್ತಿದ್ದ ತಮಿಳು ಪತ್ರಿಕೆ ಓದುವ, ವಾರಕ್ಕೆರಡು ತಮಿಳು ಸಿನಿಮಾ ನೋಡುವ ಅಭ್ಯಾಸವಾಯಿತು. ನಂಬಿದರೆ ನಂಬಿ, ಬಿಟ್ರೆ ಬಿಡಿ: ತಮಿಳು ಸಿನಿಮಾ ನೋಡುತ್ತಲೇ, ಗೋಡೆಗಳ ಮೇಲೆ ಅಂಟಿಸಿದ್ದ ತಮಿಳು ಸಿನಿಮಾ ಪೋಸ್ಟರ್‌ಗಳನ್ನು ಓದುತ್ತಲೇ, ನನ್ನ ತಮಿಳು ಭಾಷಾಜ್ಞಾನ ಹೆಚ್ಚಿತು.

ರವಿವಾರ‌ದ ಸಂಚಿಕೆಯಲ್ಲಿ ಪ್ರಕಟವಾದ ತಮಿಳು ಕತೆಯನ್ನು ಮಲ ಯಾಳಕ್ಕೆ ಅನುವಾದಿಸಬಾರದೇಕೆ ಎಂಬ ಯೋಚನೆ ಬಂದಿದ್ದೇ ಆಗ.

Advertisement

ನಾನು ತಡ ಮಾಡಲಿಲ್ಲ. ನನ್ನ ಆಸೆಯನ್ನು, ಟೀ ಕುಡಿಯಲು ಬಂದ ತಮಿಳು ಗೆಳೆಯರಿಗೆ ಹೇಳಿಕೊಂಡೆ. ಅನುವಾದ ಮಾಡಬೇಕಾದರೆ, ಏನೆಲ್ಲಾ ನಿಯಮ ಪಾಲಿಸಬೇಕೆಂದು ಅವರು ಹೇಳಿಕೊಟ್ಟರು. ಅವರ ಸಲಹೆ ಪಾಲಿಸಿದೆ.

1985ರಲ್ಲಿ ,ಮಲಯಾಳ ದೈನಿಕ “ಜನಯುಗಂ’ನಲ್ಲಿ ನನ್ನ ಮೊದಲ ಅನುವಾದಿತ ಕತೆ ಪ್ರಕಟವಾಯಿತು. ಕಾಲೇಜು ಕಲಿಯದಿದ್ದರೇನಂತೆ? ನಾನೂ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಜತೆಯಾದದ್ದೇ ಆಗ.

ಹೊಸದನ್ನು ಓದಿ, ಅನುವಾದ ಮಾಡುವುದರಿಂದ ಮನಸ್ಸಿಗೇನೋ ಸಂತೃಪ್ತಿಯಿತ್ತು. ಆದರೆ, ಹೋಟೆಲ್‌ ಕೆಲಸದಿಂದ ಸಂಪಾದನೆ ಹೆಚ್ಚಿರಲಿಲ್ಲ. ಈ ಸಂದರ್ಭದಲ್ಲಿಯೇ -“ಮನೆ ನಿರ್ಮಾಣದ ಕೆಲಸಗಾರರಿಗೆ ಗಲ್ಫ್ ರಾಷ್ಟ್ರಗಳಲ್ಲಿ ಕೈ ತುಂಬಾ ಸಂಬಳ ಕೊಡ್ತಾರೆ’ ಎಂದು ಪರಿಚಿತರು ಹೇಳಿದರು. ಸಿಮೆಂಟ್‌ ಕಲಸುವ, ಇಟ್ಟಿಗೆ ಜೋಡಿಸುವ ಕೆಲಸ ನನಗೆ ಚೆನ್ನಾಗಿ ಗೊತ್ತಿತ್ತು. ಕೈ ತುಂಬಾ ಸಂಬಳ ಅಂದಮೇಲೆ ಹೋಗಬಾರದೇಕೆ ಅಂದುಕೊಂಡವನು, ಕಡೆಗೊಮ್ಮೆ ವಿಮಾನ ಹತ್ತಿಯೇಬಿಟ್ಟೆ. ಗಲ್ಫ್ ರಾಷ್ಟ್ರಗಳಲ್ಲಿ ಮೂರು ವರ್ಷವಿದ್ದೆ. ಯಾಕೋ ಕಾಣೆ; ಆ ಊರೂ ಹೊಂದಾಣಿಕೆ ಆಗಲಿಲ್ಲ. ಮತ್ತೆ ಬೆಂಗಳೂರಿಗೆ ವಾಪಸಾದೆ.

ಈ ಬಾರಿ, ಬೆಂಗಳೂರಿನ ವಿವೇಕನಗರ, ಶಿವಾಜಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸ ಮಾಡಿದೆ. ವಿಶೇಷವೆಂದರೆ ಊರಿಗೆ ಹೋದಾಗ ಸಿಮೆಂಟ್‌ ಕಲಸುವ, ಇಟ್ಟಿಗೆ ಜೋಡಿಸುವ ಕೆಲಸ ಮಾಡುತ್ತಿದ್ದವನು, ಬೆಂಗಳೂರಿನಲ್ಲಿ ಮಾತ್ರ ಹೋಟೆಲ್‌, ಬಟ್ಟೆ ಅಂಗಡಿ, ಬೇಕರಿಗಳಲ್ಲಿ ಕೆಲಸ ಮಾಡುತ್ತಿದ್ದೆ.

ಇಸವಿ 2000ದ ವೇಳೆಗೆ, ತಮಿಳು ಓದುವುದು, ಅರ್ಥ ಮಾಡಿಕೊಳ್ಳುವುದು, ಸರಾಗ ಅನ್ನಿಸಿತ್ತು. ಸಾಕಷ್ಟು ಕತೆಗಳನ್ನು ಅನುವಾದಿಸಿದ್ದೆ. ಅವೆಲ್ಲಾ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ನನ್ನ ಅದೃಷ್ಟವೆಂದರೆ- ಅನುವಾದಕ್ಕಾಗಿ ಅನುಮತಿ ಕೇಳಿದಾಗ- ಯಾವ ಲೇಖಕರೂ ನೀವು ಏನು ಓದಿದ್ದೀರಿ? ಈವರೆಗೆ ಯಾವ ಯಾವ ಪುಸ್ತಕ ಅನುವಾದಿಸಿದ್ದೀರಿ? ನಮಗೆ ಎಷ್ಟು ರಾಯಲ್ಟಿ ಕೊಡುವಿರಿ ಎಂಬಂಥ ಪ್ರಶ್ನೆ ಕೇಳಲಿಲ್ಲ. ಉದಾರ ಮನದಿಂದ ಒಪ್ಪಿಗೆ ಕೊಟ್ಟರು. ಯಾವುದೋ ಸಂದರ್ಭ, ಮತ್ಯಾವುದೋ ವಾಕ್ಯ ಅರ್ಥವಾಗದೆ ಫೋನ್‌ ಮಾಡಿದರೆ- ಕಿಂಚಿತ್ತೂ ಬೇಸರಿಸದೆ ಅರ್ಥ ವಿವರಿಸಿದರು. ಶಫಿ ಅವರ ಅನುವಾದ ಸರಳ ಮತ್ತು ಸುಲಲಿತ ಎಂದು ಸಂಪಾದಕರಿಗೆ ಪತ್ರ ಬರೆಯುವ ಮೂಲಕ, ಓದುಗರು ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು.

ಇಸವಿ 2008, ನಾನು ಮರೆಯಲಾಗದ ವರ್ಷ. ನಾನಾಗ ಖ್ಯಾತ ತಮಿಳು ಲೇಖಕ, ತೊಪ್ಪಿಲ್‌ ಮೊಹಮ್ಮದ್‌ ಮೀರನ್‌ ಅವರ ಕಥೆಗಳನ್ನು ಓದಿದೆ. ಅವನ್ನು ಮಲಯಾಳಕ್ಕೆ ಅನುವಾದಿಸಬೇಕು ಅನ್ನಿಸಿತು. ತಕ್ಷಣವೇ ಮೀರನ್‌ ಅವರಿಗೆ ಪತ್ರ ಬರೆದೆ. ಮರು ಟಪಾಲಿನಲ್ಲಿಯೇ ಅವರು ಒಪ್ಪಿಗೆ ಪತ್ರ ಕಳಿಸಿದರು.
ಹಾಗೆ ಪ್ರಕಟವಾದ ಕೃತಿಯೇ-“ಅನಂತ ಶಯನ ಕಾಲನಿ’. ಸಣ್ಣ ಕತೆಗಳ ಈ ಸಂಕಲನಕ್ಕೆ ಶ್ರೇಷ್ಠ ಅನುವಾದಿತ ಕೃತಿಯೆಂದು ಕೇರಳದ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂತು. ಈ ವೇಳೆಗೆ, ಕೆಲಸದ ನಿಮಿತ್ತ ಮುಂಬಯಿ, ವಿಜಯವಾಡ, ಪೂನಾ, ಬೆಂಗಳೂರು, ಗಲ್ಫ್ ಎಂದೆಲ್ಲ ಅಲೆದಾಡಿದ್ದೆ. ವರ್ಷಕ್ಕೊಂದು ಊರಲ್ಲಿ ಇರುವ ಬದಲು ಹೆಂಡತಿ-ಮಕ್ಕಳೊಂದಿಗೆ ಹುಟ್ಟೂರಿನಲ್ಲೇ ಉಳಿಯುವುದು ಸೂಕ್ತ ಅನ್ನಿಸಿತು. ಸೀದಾ ಚೆರುಮಾವಿಲೈಗೆ ಬಂದೆ.

ಅನುವಾದದ ಕಾರಣಕ್ಕೆ ತಮಿಳಿನ ಶ್ರೇಷ್ಠ ಲೇಖಕರೆಲ್ಲರ ಗೆಳೆತನ ಸಿಕ್ಕಿದೆ. ಹಲವು ಸೆಮಿನಾರ್‌ಗಳಲ್ಲಿ ಕೇರಳವನ್ನು, ಮಲಯಾಳಂ ಭಾಷೆಯನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ ನಿಜ. ಆದರೆ, ಅನುವಾದವನ್ನೇ ಫ‌ುಲ್‌ಟೈಂ ವೃತ್ತಿಯನ್ನಾಗಿ ಮಾಡಿಕೊಳ್ಳಲು ನಾನು ಸಿದ್ಧನಿಲ್ಲ. ಏಕೆಂದರೆ, ಒಂದು ಪುಟ ಅನುವಾದಿಸಿದರೆ, ಕೇವಲ 20 ರೂಪಾಯಿ ಸಿಗುತ್ತದೆ. (ಒಂದು ಕಥೆಯ ಅನುವಾದಕ್ಕೆ 400ರೂ.) ಮನೆಯಲ್ಲಿ ಹೆಂಡತಿ, ನಾದಿನಿ ಮತ್ತು ಮೂವರು ಮಕ್ಕಳಿದ್ದಾರೆ. ಹಾಗಾಗಿ, ಬರಹವನ್ನೇ ನಂಬಿ ಬದುಕಲು ಆಗುವುದಿಲ್ಲ. ಈಗಲೂ ಸಿಮೆಂಟ್‌ ಕಲಸುವ, ಇಟ್ಟಿಗೆ ಜೋಡಿಸುವ ಕೆಲಸವನ್ನು ಸಂತೃಪ್ತಿಯಿಂದಲೇ ಮಾಡುತ್ತೇನೆ. ಈ ಕೆಲಸದಲ್ಲಿ, ಒಂದು ದಿನಕ್ಕೆ 800 ರುಪಾಯಿ ಸಿಗುತ್ತದೆ. ಹಾಗಾಗಿ, ನೆಮ್ಮದಿಯ ಬದುಕಿಗೆ ನನಗೆ ಈ ಕೆಲಸ ಬೇಕು. ಬರವಣಿಗೆ ಏನಿದ್ದರೂ ಆತ್ಮ ಸಂತೋಷಕ್ಕೆ…’

ಹೀಗೆ ಸಾಗುತ್ತದೆ ಶಫಿ ಚೆರುಮಾವಿಲೈ ಅವರ ಮಾತು. 57 ವರ್ಷದ ಅವರು, ಈವರೆಗೆ, 10 ಕಾದಂಬರಿ ಮತ್ತು 250ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ತಮಿಳಿನಿಂದ ಮಲಯಾಳಕ್ಕೆ ಅನುವಾದಿಸಿದ್ದಾರೆ. ಈ ಪಟ್ಟಿಯಲ್ಲಿ, ತಮಿಳಿನ ಘಟಾನುಘಟಿ ಲೇಖಕರಾದ-ಪೆರುಮಾಳ್‌ ಮುರುಗನ್‌, ಕಂದಸ್ವಾಮಿ, ಸಲ್ಮಾ, ತೋಪಿಲ್‌ ಮೊಹಮ್ಮದ್‌ ಮೀರನ್‌, ಜಿ. ತಿಲಕಾವತಿ, ಚೋ. ಧರ್ಮನ್‌, ಬಾಲ ಭಾರತಿ, ಆರ್‌. ಮಾಧವನ್‌ ಮುಂತಾದವರ ಬರಹಗಳಿವೆ. ಈ ಎಲ್ಲಾ ಲೇಖಕರೂ, ಶಫಿಯವರನ್ನು ಅತ್ಯುತ್ತಮ ಅನುವಾದಕ ಎಂದು ಒಪ್ಪಿ, ಹೊಗಳಿ ಸನ್ಮಾನಿಸಿದ್ದಾರೆ.

ಸದ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಎಂ.ಡಿ. ವೆಂಕಟರಾಮ್‌ ಅವರ “ಕಾದುಗಳ್‌’ ಹೆಸರಿನ ಕಾದಂಬರಿಯನ್ನು ಮಲಯಾಳಕ್ಕೆ ಅನುವಾದಿಸುತ್ತಿದ್ದಾರಂತೆ ಶಫಿ. “ಬೆಳಗ್ಗೆ 8ರಿಂದ ಸಂಜೆ 4ರವರೆಗೆ, ವಾರದ ಆರು ದಿನವೂ ಮನೆ ನಿರ್ಮಾಣದ ಕೆಲಸಗಾರನಾಗಿ ಬ್ಯುಸಿ ಇತೇìನೆ. ಭಾನುವಾರ ಮನೆಯವರೊಂದಿಗೆ ಕಳೆಯುವೆ. ಸಂಜೆ 6ರಿಂದ ರಾತ್ರಿ 9ರವರೆಗೆ, ನನಗೆ ಮೂಡ್‌ ಬಂದಾಗ ಅನುವಾದದ ಕೆಲಸ. ಎಸ್ಸೆಸ್ಸೆಲ್ಸಿ ಫೇಲ್‌ ಆಗಿರುವ ನನ್ನನ್ನ, ಮಲಯಾಳ ಹಾಗೂ ತಮಿಳು ಸಾಹಿತ್ಯಲೋಕ ಪ್ರೀತಿಸಿದೆ. ಗೌರವಿಸಿ, ಅಭಿನಂದಿಸಿದೆ. ಈ ನಂಬಿಕೆಗೆ ಚ್ಯುತಿ ಬಾರದಂತೆ ಬರೆಯಬೇಕು. ಎಂಟನೇ ತರಗತಿಗೆ ಶಾಲೆ ಬಿಟ್ಟವನಿಗೂ ತಕ್ಷಣ ಅರ್ಥವಾಗುವಂತೆ ನನ್ನ ಅನುವಾದ ಇರಬೇಕು. ಇದು, ನನಗೆ ನಾನೇ ಹಾಕಿಕೊಂಡಿರುವ ನಿಯಮ’ ಅನ್ನುತ್ತಾರೆ ಶಫಿ.
***
“ನಾನೊಬ್ಬ ಮನೆ ನಿರ್ಮಾಣದ ದಿನಗೂಲಿ ನೌಕರ’ ಎಂದು ಈಗಲೂ ಹೆಮ್ಮೆ-ಅಭಿಮಾನದಿಂದ ಹೇಳಿಕೊಳ್ಳುವ ಶಫಿ, ಬೆಂಗಳೂರು ಅಂದ ತಕ್ಷಣ ವಿಪರೀತ ಸಂಭ್ರಮಿಸುತ್ತಾರೆ. “ಬೆಂಗಳೂರಿಗೆ ಬಂದಿದ್ದರಿಂದಲೇ ತಮಿಳು ಕಲಿಯಲು, ಬರಹಗಾರನಾಗಲು ಸಾಧ್ಯವಾಯ್ತು. ಬೆಂಗಳೂರಲ್ಲಿ ನಮ್ಮ ಬಂಧುಗಳಿದ್ದಾರೆ. ಆಗಾಗ ಬರ್ತಾ ಇತೇìನೆ. ಹಾಗೆ ಬಂದಾಗಲೆಲ್ಲ, ನನಗೆ ಬದುಕುಕೊಟ್ಟ ವಿವೇಕ ನಗರ, ಶಿವಾಜಿ ನಗರಗಳಲ್ಲಿ ಅಡ್ಡಾಡಿ ಬರುತ್ತೇನೆ. ಹಳೆಯ ದಿನಗಳು ನೆನಪಾದಾಗ ಖುಷಿ -ಕಣ್ಣೀರು ಒಟ್ಟಿಗೇ ಜತೆಯಾಗ್ತದೆ. ಬೆಂಗಳೂರು ಬಿಟ್ಟು ಆಗಲೇ 20 ವರ್ಷ ಆಗಿರೋದ್ರಿಂದ ಕನ್ನಡ ಮರೆತೇ ಹೋಗಿದೆ. ಆದರೆ ನಾನು ಬದುಕಿರುವವರೆಗೂ ಬೆಂಗಳೂರನ್ನು ಮರೆಯಲಾರೆ’ ಎನ್ನುತ್ತಾ ಭಾವುಕರಾಗುತ್ತಾರೆ ಶಫಿ.

ಕಲಿಯುವ ಶ್ರದ್ಧೆಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಸಾಕ್ಷಿಯಾಗುವ ಶಫಿಯನ್ನು ಅಭಿನಂದಿಸಬೇಕು ಅನಿಸಿದರೆ- 9747447327ಗೆ, ಸಂಜೆ 4 ಗಂಟೆಯ ನಂತರ ಕರೆ ಮಾಡಿ. ಅವರಿಗೆ ತಮಿಳು, ಹಿಂದಿ ಹಾಗೂ ಮಲಯಾಳ ಮಾತ್ರ ಅರ್ಥವಾಗುತ್ತದೆ, ಗಮನಿಸಿ…

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next