Advertisement

ದಯವಿಟ್ಟು ಗಮನಿಸಿಯಲ್ಲಿ ಜಯಂತ್‌ ಕಾಯ್ಕಿಣಿ ಕಥೆ!

10:43 AM Oct 09, 2017 | Team Udayavani |

ಗಾಂಧಿನಗರದಲ್ಲಿ ಸದ್ಯಕ್ಕೆ ಕುತೂಹಲ ಕೆರಳಿಸಿರುವ “ದಯವಿಟ್ಟು ಗಮನಿಸಿ’ ಚಿತ್ರ ಅಕ್ಟೋಬರ್‌ 20 ರಂದು ರಾಜ್ಯ ಸೇರಿದಂತೆ ದೇಶದ ಹಲವೆಡೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಇಲ್ಲಿ, ಗೀತ ರಚನೆಕಾರ ಜಯಂತ್‌ ಕಾಯ್ಕಿಣಿ ಅವರ ಸಣ್ಣ ಕಥೆಯೊಂದನ್ನು ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಅಂದರೆ, ಜಯಂತ್‌ ಕಾಯ್ಕಿಣಿ ಅವರ “ತೂಫಾನ್‌ ಮೇಲ್‌’ ಪುಸ್ತಕದ ಸಣ್ಣ ಕಥೆಯೊಂದು ನಿರ್ದೇಶಕ ರೋಹಿತ್‌ ಪದಕಿ ಅವರಿಗೆ ಇಷ್ಟವಾಗಿದೆ.

Advertisement

ಅದು “ಕನ್ನಡಿ ಇಲ್ಲದ ಊರಲ್ಲಿ’ ಎಂಬ ಉಪಕಥೆ. ಅದರ ಒನ್‌ಲೈನ್‌ ಇಟ್ಟುಕೊಂಡು ಚಿತ್ರೀಕರಿಸಿದ್ದಾರಂತೆ ರೋಹಿತ್‌ ಪದಕಿ. ನಿರ್ದೇಶಕ ರೋಹಿತ್‌, ಸಾಹಿತಿ ಜಯಂತ್‌ ಕಾಯ್ಕಿಣಿ ಅವರ “ಕನ್ನಡಿ ಇಲ್ಲದ ಊರಲ್ಲಿ’ ಎಂಬ ಸಣ್ಣ ಕಥೆ ಬಳಸಿಕೊಳ್ಳಲು ಕಾರಣ, ಅದರೊಳಗಿರುವ ಸಾರ. ಅದು ಅವರಿಗೆ ಇಷ್ಟವಾಗಿದ್ದೇ ತಡ, ಅದರಿಂದ ಸ್ಫೂರ್ತಿ ಪಡೆದು ಮಾಡಿದ್ದಾರೆ. ಅಷ್ಟಕ್ಕೂ ಆ ಕಥೆ ಸ್ಫೂರ್ತಿಯಾಗಿದ್ದು ಯಾಕೆ ಎಂಬುದನ್ನ ಸಿನಿಮಾದಲ್ಲೇ ಕಾಣಬೇಕಂತೆ. ಇಲ್ಲಿ ನಾಲ್ಕು ಕಥೆಗಳು ನಡೆಯುತ್ತವೆ.

ಅಂದರೆ, ಕಥೆ ಒಂದೇ ಇದ್ದರೂ, ಅಲ್ಲಲ್ಲಿ ಉಪಕಥೆಗಳು ಬಂದು ಹೋಗುತ್ತವೆ. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ಎಲ್ಲಾ ಕಥೆಗಳು ಒಟ್ಟುಗೂಡುತ್ತವೆ ಆಮೇಲೆ ಏನಾಗುತ್ತೆ ಎಂಬುದು ಸಸ್ಪೆನ್ಸ್‌ ಎಂಬುದು ನಿರ್ದೇಶಕರ ಮಾತು. ಇನ್ನು, ಜಯಂತ್‌ಕಾಯ್ಕಿಣಿ ಅವರ “ಕನ್ನಡಿ ಇಲ್ಲದ ಊರಲ್ಲಿ’ ಕಥೆಯ ಭಾಗದ ಚಿತ್ರೀಕರಣವನ್ನು ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಿಸಿದ್ದಾರೆ. ಮುಂಬೈನಲ್ಲಿ ಆ ಕಥೆ ನಡೆದರೂ, ಇಲ್ಲಿನ ಚಾಮರಾಜಪೇಟೆ ಹಾಗು ಕಥೆಗೆ ಪೂರಕ ಎನಿಸುವ ಇತರೆ ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರಂತೆ.

ಈ ದೃಶ್ಯದಲ್ಲಿ ರಾಜೇಶ್‌ ನಟರಂಗ ಮತ್ತು ಪ್ರಕಾಶ್‌ ಬೆಳವಾಡಿ ಅವರು ಕಾಣಿಸಿಕೊಂಡಿದ್ದಾರಂತೆ. ಉಳಿದಂತೆ ಚಿತ್ರದಲ್ಲಿ ರಘುಮುಖರ್ಜಿ, ಸಂಯುಕ್ತಾ ಹೊರನಾಡು, ವಸಿಷ್ಠ, ಸಂಗೀತಾ ಭಟ್‌, ಸುಕೃತಾ ವಾಗ್ಲೆ, ಪೂರ್ಣಚಂದ್ರ ಮೈಸೂರು, ಅವಿನಾಶ್‌ ಸೇರಿದಂತೆ ಒಂದಷ್ಟು ಕಲಾವಿದರು ನಟಿಸಿದ್ದಾರೆ. ವಿಶೇಷವೆಂದರೆ, ಇಲ್ಲಿ ಯಾರೂ ಹೀರೋ ಅಲ್ಲ, ಯಾರೂ ಹೀರೋಯಿನ್‌ ಕೂಡ ಅಲ್ಲ. ಕಥೆಯೇ ಹೈಲೈಟ್‌.

ಎಲ್ಲಾ ಪಾತ್ರಗಳಿಗೂ ಇಲ್ಲಿ ಅದರದ್ಧೇ ಆದಂತಹ ಆದ್ಯತೆ ಇದೆ. ಹೀರೋ, ಹೀರೋಯಿನ್‌ ಎಂಬ ಕಾನ್ಸೆಪ್ಟ್ ಇಲ್ಲದ ಕಥೆಯೇ ಮುಖ್ಯ ಎನಿಸುವ ಚಿತ್ರವಿದು ಎಂದು ಹೇಳುತ್ತಾರೆ ರೋಹಿತ್‌ ಪದಕಿ. ಅಂದಹಾಗೆ, ಸುಮಾರು 80 ರಿಂದ 100 ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ತಯಾರಿ ನಡೆಯುತ್ತಿದೆ. ದೇಶಾದ್ಯಂತ ಕೆಲವು ರಾಜ್ಯಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಬಿಡುಗಡೆಯ ಸಂಖ್ಯೆ 150 ದಾಟಬಹುದು ಎಂದು ಹೇಳುತ್ತಾರೆ ಪದಕಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next