Advertisement

ದಾವೂದ್‌ ಹೆಸರಲ್ಲಿ ಬೆದರಿಸಿದ ನಿವೃತ್ತ ಯೋಧ ಸೆರೆ

06:34 AM Feb 03, 2019 | Team Udayavani |

ಬೆಂಗಳೂರು: ದೇಶದ ಮೋಸ್ಟ್‌ ವಾಟೆಂಡ್‌ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರರು ಎಂದು ಹೇಳಿಕೊಂಡು ಹೋಟೆಲ್‌ ಉದ್ಯಮಿಯೊಬ್ಬರಿಗೆ ವಾಟ್ಸ್‌ಆ್ಯಪ್‌ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ ನಿವೃತ್ತ ಯೋಧನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಎಲೆಕ್ಟ್ರಾನಿಕ್‌ ಸಿಟಿಯ ಬೇಗೂರು ನಿವಾಸಿ ಏಕಾಂಬರಂ (49) ಬಂಧಿತ ಆರೋಪಿ. ಆರೋಪಿ ಜ.27ರಂದು ವಿವೇಕನಗರದ ನಿವಾಸಿ, ಎಎಸ್‌ಸಿ ಸೆಂಟರ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದ ಅಶ್ವಿ‌ನಿ ಅಗರ್‌ವಾಲ್‌ ಎಂಬುವರಿಗೆ ದಾವೂಬ್‌ ಇಬ್ರಾಹಿಂ ಸಹಚರರು ಎಂದು ಹೇಳಿಕೊಂಡು ಬೆದರಿಕೆ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ಹೇಳಿದರು.

ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಆರೋಪಿ ಕೆಲ ವರ್ಷಗಳ ಹಿಂದಷ್ಟೇ ನಿವೃತ್ತನಾಗಿದ್ದ. ಜೇವನೋಪಾಯಕ್ಕಾಗಿ ಪೇಟಿಂಗ್‌ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಾ, ಕುಟುಂಬದ ಜತೆ ಎಲೆಕ್ಟ್ರಾನಿಕ್‌ ಸಿಟಿಯ ಬೇಗೂರಿನಲ್ಲಿ ವಾಸವಾಗಿದ್ದ. ಈ ಮಧ್ಯೆ ಕೆಲ ಉದ್ಯಮಗಳಿಗೆ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಏಕಾಂಬರಂ, ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದ. ಈ ಹಿನ್ನೆಲೆಯಲ್ಲಿ ಸುಲಭವಾಗಿ ಹಣ ಗಳಿಸಬೇಕೆಂದು ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದರು.

ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆರೋಪಿ ಏಕಾಂಬರಂ, ಎಎಸ್‌ಸಿ ಸೆಂಟರ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದ ಅಶ್ವಿ‌ನಿ ಅಗರ್‌ವಾಲ್‌ರನ್ನು ಪರಿಚಯಿಸಿಕೊಂಡಿದ್ದಾನೆ. ಈ ವೇಳೆಯೇ ಅಶ್ವಿ‌ನಿ ಅಗರ್‌ವಾಲ್‌ ಅವರ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ.

ಈ ಹಿನ್ನೆಲೆಯಲ್ಲಿ ದಾವೂದ್‌ ಇಬ್ರಾಹಿಂ ಸಹಚರ ಎಂದು ಹೇಳಿಕೊಂಡು ಬೆದರಿಕೆ ಸಂದೇಶ ಕಳುಹಿಸಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಒಂದು ವೇಳೆ ಹಣ ಕೊಡಲು ನಿರಾಕರಿಸಿದರೆ ನಿಮ್ಮ ಸಹೋದರ ಪವನ್‌ನನ್ನು ಹತ್ಯೆ ಮಾಡುತ್ತೇವೆ. ಬಳಿಕ ನಿಮ್ಮ ಕುಟುಂಬದ ಸದಸ್ಯರನ್ನು ಕೊಲ್ಲುತ್ತೇವೆ ಎಂದು ಸಂದೇಶ ಕಳುಹಿಸಿದ್ದ. ಈ ಸಂಬಂಧ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಆರೋಪಿ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದು, ತನಗೆ ಪರಿಚಯ ಇರುವ ಬೇಸಿಕ್‌ ಮೊಬೈಲ್‌ ಉಪಯೋಗಿಸುವ ವ್ಯಕ್ತಿಗಳ ಸಿಮ್‌ಕಾರ್ಡ್‌ಗಳನ್ನು ಕೆಲ ಹೊತ್ತು ಬಳಸುವುದಾಗಿ ಪಡೆದುಕೊಳ್ಳುತ್ತಿದ್ದ. ಬಳಿಕ ಆ ಸಿಮ್‌ಗಳನ್ನು ತನ್ನ ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಹಾಕಿಕೊಂಡು, ಆ ನಂಬರ್‌ ನೋಂದಣಿ ಮಾಡುವ ಮೂಲಕ ವಾಟ್ಸ್‌ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಸಂದೇಶ ರವಾನಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ದೂರುದಾರರ ಸಂಬಂಧಿಕರ ಸೋಗಿನಲ್ಲಿ ಬಂಧನ: ತನಿಖೆ ಚುರುಕುಗೊಳಿಸಿದ ಪೊಲೀಸರು ದೂರುದಾರ ಅಶ್ವಿ‌ನಿ ಅಗರ್‌ವಾಲ್‌ ಮೂಲಕ ಆರೋಪಿಗೆ ಕರೆ ಮಾಡಿಸಿ, ಒಂದು ಕೋಟಿ ಬದಲು 50 ಲಕ್ಷ ರೂ. ಕೊಡುವುದಾಗಿ ಹೇಳಿಸಿದ್ದಾರೆ. ಇದನ್ನು ನಂಬಿದ ಆರೋಪಿ, ಹಣದ ಸಮೇತ ಮಡಿವಾಳಕ್ಕೆ ಬರಲು ಸೂಚಿಸಿದ್ದ. “ಆದರೆ, ಸ್ಥಳಕ್ಕೆ ನಾನು ಬರಲು ಸಾಧ್ಯವಿಲ್ಲ.

ನನ್ನ ಸಂಬಂಧಿಗಳಿಬ್ಬರು ಬರುತ್ತಾರೆ ಎಂದು ಅಶ್ವಿ‌ನಿ ಅಗರ್‌ವಾಲ್‌ ಮೂಲಕ ಪೊಲೀಸರು ಹೇಳಿಸಿದ್ದರು. ಇದಕ್ಕೆ ಆರೋಪಿ ಒಪ್ಪಿಕೊಂಡಿದ್ದ. ನಂತರ, ಆರೋಪಿಗೆ ನಂಬಿಕೆ ಬರುವ ರೀತಿಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿ ಸೂಟ್‌ಕೇಸ್‌ ಹಿಡಿದು ಆತ ಹೇಳಿದ ಸ್ಥಳಕ್ಕೆ ಹೋಗಿದ್ದಾರೆ. ಹಣದಾಸೆಗೆ ಸೂಟ್‌ಕೇಸ್‌ ಪಡೆಯಲು ಬಂದ ಆರೋಪಿಯನ್ನು ಸುತ್ತವರಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next