ಲಂಡನ್/ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಮಟ್ಟ ಹಾಕುವ ವಿಚಾರದಲ್ಲಿ ಭಾರತ ಇದೇ ಮೊದಲ ಬಾರಿಗೆ ಭಾರೀ ಜಯ ಸಾಧಿಸಿದೆ. ಬ್ರಿಟನ್ ಸರಕಾರ ದಾವೂದ್‌ಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ದಾವೂದ್ ಬಗ್ಗೆ ಪ್ರಸ್ತಾವಿಸಿದ್ದರು. ಜತೆಗೆ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ನ ಆಸ್ತಿ ಕುರಿತಂತೆ ದಾಖಲೆಗಳನ್ನೂ ನೀಡಿ ಬಂದಿದ್ದರು. ಈ ದಾಖಲೆಗಳ ಆಧಾರದಲ್ಲೇ ಅಲ್ಲಿನ ಸರಕಾರ ಭೂಗತಪಾತಕಿಯ ಆಸ್ತಿ ವಶಪಡಿಸಿಕೊಂಡಿದೆ.
ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಲಂಡನ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಾರ್‌ವಿಕ್‌ಶೈರ್‌ನಲ್ಲಿರುವ ಬರೋಬ್ಬರಿ 42,000 ಕೋಟಿ ರೂ. ಮೌಲ್ಯದ ಆಸ್ತಿಗಳಿಗೆ ಬೀಗ ಜಡಿದಿದೆ. ಒಂದು ಮಾಹಿತಿಯ ಪ್ರಕಾರ ದಾವೂದ್ ಬಳಿ ಇರುವ ಆಸ್ತಿಗಳ ಮೌಲ್ಯದ ಲೆಕ್ಕಾಚಾರದಂತೆ ವಿಶ್ವದ ಎರಡನೇ ಅತೀ ಶ್ರೀಮಂತ ಕ್ರಿಮಿನಲ್ ಎಂದು ಹೇಳಲಾಗುತ್ತಿದೆ. ಡ್ರಗ್ ಮಾಫಿಯಾ ಸುತ್ತ ಬೆಳೆದ ಮಾದಕ ದೊರೆ ಕುಖ್ಯಾತಿಯ ಕೊಲಂಬಿಯಾದ ಪಾಬ್ಲೊ ಎಸ್ಕಾಬರ್ ವಿಶ್ವದ ಅತೀ ಶ್ರೀಮಂತ ಕ್ರಿಮಿನಲ್ ಆಗಿದ್ದಾನೆ.
1993ರ ಮುಂಬಯಿ ಸ್ಫೋಟ ಪ್ರಕರಣದ ರೂವಾರಿ ದಾವೂದ್ ಅಂದಾಜು 6.7 ಶತ ಕೋಟಿ ಡಾಲರ್‌ಗಳಷ್ಟು ಅಕ್ರಮ ಆಸ್ತಿ ಹೊಂದಿ ದ್ದಾನೆ ಎಂದು ಜಾರಿ ನಿರ್ದೇಶನಾಲಯ ನೀಡಿದ ವರದಿಯನ್ನಾಧರಿಸಿ ಕೇಂದ್ರ ಸರಕಾರ 2015ರಲ್ಲಿ ಬ್ರಿಟನ್ ಸರಕಾರಕ್ಕೆ ಮಾಹಿತಿ ನೀಡಿತ್ತು. ತತ್‌ಕ್ಷಣವೇ ಆಸ್ತಿ ಜಪ್ತಿ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಈ ಮನವಿ ಯನ್ನು ಆಧರಿಸಿಯೇ ಬ್ರಿಟನ್ ಸರಕಾರ ಹಠಾತ್ತಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಬ್ರಿಟನ್ ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿರುವ ಮಾಹಿತಿಯಂತೆ ದಾವೂದ್ ಯಾವುದೇ ಪರವಾನಿಗೆ ಇಲ್ಲದೆ ಇಷ್ಟೊಂದು ಆಸ್ತಿ ಮಾಡಿದ್ದರು ಎನ್ನಲಾಗಿದೆ.
ಇಲ್ಲಿನ ಪ್ರತಿಷ್ಠಿತ ಟ್ಯಾಬ್ಲಾಯ್ಡ “ಬರ್ಮಿಂಗ್‌ಹ್ಯಾಂ ಮೇಲ್’ ವರದಿಯಂತೆ ವಾರ್‌ವಿಕ್ ಶೈರ್‌ನಲ್ಲಿರುವ ಐಶಾರಾಮಿ ಹೊಟೇಲ್ ಹಾಗೂ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಮನೆ ಸಹಿತ ಒಟ್ಟು 42,000 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯದ ದಾಖಲೆಗಳಂತೆ ದಾವೂದ್ ಪಾಕಿಸ್ಥಾನದಲ್ಲಿ ಅಧಿಕೃತವಾಗಿ ಮೂರು ಕಡೆ, ಅನಧಿಕೃತವಾಗಿ 21 ಕಡೆಗಳಲ್ಲಿ ಆಸ್ತಿ ಹೊಂದಿದ್ದಾನೆ.
“ಚೀಲದಲ್ಲಿರುವ ಬೆಕ್ಕು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’
ಯುಕೆ ಸರಕಾರ ದಾವೂದ್ ಆಸ್ತಿ ಜಪ್ತಿ ಮಾಡಿಕೊಂಡಿರುವ ಬಗ್ಗೆ ತಿರುವನಂತಪುರದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜ| ವಿ.ಕೆ. ಸಿಂಗ್, “ದಾವೂದ್ ಕುರಿತಾಗಿ ನಾನು ಏನನ್ನೂ ಮಾತ ನಾಡುವುದಿಲ್ಲ. ಆದರೆ ಕೆಲವೊಂದು ಸಂಗತಿಗಳು ನಡೆಯುತ್ತಿವೆ. ಅಂದಹಾಗೆ “ಬ್ಯಾಗ್‌ನಲ್ಲಿ ಸಿಕ್ಕಿಕೊಂಡಿರುವ ಬೆಕ್ಕು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಕಸ್ಕರ್ ದಾವೂದ್ ಇಬ್ರಾಹಿಂ ಬಗ್ಗೆ ಮಾತನಾಡಿರುವ ಅವರು, “ದಾವೂದ್ ಇಬ್ರಾಹಿಂ ಸೋದರ ಕರಾಚಿಯ ರಕ್ಷಣಾ ವಸತಿ ಪ್ರಾಧಿಕಾರದ 30ನೇ ಸ್ಟ್ರೀಟ್, ಮನೆ ನಂ. 37ರಲ್ಲಿ ಹಾಗೂ ಕರಾಚಿಯ ನೂರಾಬಾದ್ ಮತ್ತು ವೈಟ್‌ಹೌಸ್ ನಿವಾದಲ್ಲಿ ವಾಸವಿರುವುದು ದಾಖಲೆಗಳಿಂದ ಗೊತ್ತಾಗಿದೆ’ ಎಂದಿದ್ದಾರೆ.