ಬೆಂಗಳೂರು: ಮುಂಬರುವ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಆಗಮಿಸಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ನಿಗದಿಯಾಗಿರುಂತೆ ನವೆಂಬರ್ 2ರಿಂದ 4ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ವಿಶ್ವದ ಮುಂಚೂಣಿಯಲ್ಲಿರುವ ಅನೇಕ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ. ಅಂದಾಜು 5 ಲಕ್ಷ ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾನು ವಿಶ್ವದ ಪ್ರಮುಖ ಉದ್ಯಮಿಗಳನ್ನು ಭೇಟಿಯಾಗಿ ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಸಿದ್ದೇವೆ. ಇದೊಂದು ಯಶಸ್ವಿ ಪ್ರವಾಸ ಎಂದರು.
Related Articles
ಇದನ್ನೂ ಓದಿ:ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂಚೂಣಿಯಲ್ಲಿರುವ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಇಲ್ಲಿನ ಆಹ್ಲಾದಕರ ವಾತಾವರಣ, ಉದ್ಯಮಿಗಳ ಪರವಾಗಿರುವ ಸರ್ಕಾರ, ಕೈಗಾರಿಕಾ ಸ್ನೇಹಿ ನೀತಿಗಳು, ಉದ್ಯಮಿಗಳಿಗೆ ಬೇಕಾಗಿರುವ ರಸ್ತೆ, ನೀರು, ವಿದ್ಯುತ್ ಸೇರಿದಂತೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳು ರಾಜ್ಯದಲ್ಲಿ ಸಿಗುವುದರಿಂದ ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದರು.
ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯಾದರೆ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾಗಲಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ. ಜೊತೆಗೆ ನಿರುದ್ಯೋಗವು ನಿವಾರಣೆಯಾಗಲಿದೆ ಎಂದು ನಿರಾಣಿ ಅಭಿಪ್ರಾಯಪಟ್ಟರು.
ನಾಲ್ಕು ದಿನ ನಾವು ವಿವಿಧ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿದ್ದೇವೆ. ಬಂಡವಾಳ ಹೂಡಿಕೆ ಮಾಡುವಂತೆ ನಾವು ಮುಂದಿಟ್ಟ ಪ್ರಸ್ತಾವನೆಗೆ ಅನೇಕ ಉದ್ಯಮಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅಂದಾಜು ಒಂದು ಲಕ್ಷ ಕೋಟಿ ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಲಿದೆ. ಬಂಡವಾಳ ಹೂಡಿಕೆಯಾಗುವುದರಿಂದ ರಾಜ್ಯದ ಜಿಡಿಪಿ ದರವು ಏರಿಕೆಯಾಗಲಿದೆ ಎಂದರು.