Advertisement

ದಾವೋಸ್‌ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯುವುದು ಬೇಡ

12:27 AM May 26, 2022 | Team Udayavani |

ಇತ್ತೀಚೆಗಷ್ಟೇ ಹೊರಬಿದ್ದ ವರದಿಯೊಂದರ ಪ್ರಕಾರ, ವಿದೇಶಿ ಬಂಡವಾಳ ಹೂಡಿಕೆ ವಿಚಾರದಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ಮುಂದಿದೆ ಎಂಬ ಸುದ್ದಿ ರಾಜ್ಯದ ಜನರಿಗೆ ಖುಷಿ ನೀಡಿತ್ತು. ಇದಕ್ಕೆ ಕಾರಣಗಳೂ ಹಲವಾರು. ಐಟಿ ಕ್ಷೇತ್ರ ಬೆಳವಣಿಗೆಯಾದ ಕಾಲದಲ್ಲೇ ಕರ್ನಾಟಕ, ಹೂಡಿಕೆದಾರರ ಸ್ವರ್ಗವೆನಿಸಿತ್ತು. ಇಲ್ಲಿನ ಈಸಿ ಆಫ್ ಡೂಯಿಂಗ್‌ನಂಥ ನೀತಿಗಳು ಇದಕ್ಕೆ ಸಹಕಾರ ಕೊಟ್ಟಿದ್ದವು.

Advertisement

ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ದಾವೋಸ್‌ ಆರ್ಥಿಕ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಸಚಿವರಾದ ಮುರುಗೇಶ್‌ ನಿರಾಣಿ ಮತ್ತು ಡಾ| ಸಿ.ಎನ್‌.ಅಶ್ವತ್ಥನಾರಾಯಣ್‌ ಸಾಥ್‌ ನೀಡಿದ್ದಾರೆ. ಈ ಭೇಟಿಯ ವೇಳೆ ಸಿಎಂ, ಜಗತ್ತಿನ ದೊಡ್ಡ ದೊಡ್ಡ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗೆ ಚರ್ಚೆ ಮಾಡಿದ್ದಾರೆ.

ಮಂಗಳವಾರವಷ್ಟೇ ಸಿಎಂ ಬೊಮ್ಮಾಯಿ ಅವರು, ಗ್ರೀನ್‌ ಎನರ್ಜಿ ಕಂಪೆನಿ ರೆನ್ಯೂ ಪವರ್‌ ಪ್ರೈವೇಟ್‌ ಲಿಮಿಟೆಡ್‌ ಜತೆಗೆ 50 ಸಾವಿರ ಕೋಟಿ ರೂ.ಗಳ ಹೂಡಿಕೆಗಾಗಿ ಸಹಿ ಹಾಕಿದ್ದಾರೆ. ಇದು ಏಳು ವರ್ಷಗಳ ಕಾಲ, ಬ್ಯಾಟರಿ ಸ್ಟೋರೇಜ್‌, ನವೀಕರಿಸಬಹುದಾದ ಇಂಧನ, ಗ್ರೀನ್‌ ಹೈಡ್ರೋಜಿನ್‌ ಘಟಕಗಳ ಸ್ಥಾಪನೆ ಮಾಡಿ ಅಭಿವೃದ್ಧಿಗೊಳಿಸಲಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸರಕಾರ ಮಾಡಿಕೊಂಡು ದೊಡ್ಡ ಒಪ್ಪಂದವಿದು. ಜತೆಗೆ ಲುಲು ಕಂಪೆನಿ ಜತೆಗೆ ದ್ವಿತೀಯ ಸ್ತರದ ನಗರಗಳಲ್ಲಿ ಸೂಪರ್‌ ಮಾರ್ಕೆಟ್‌ಗಳನ್ನು ಆರಂಭಿಸಲು 2 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ ಸಿಮನ್ಸ್‌ ಕಂಪೆನಿ ಜತೆಗೂ ಬ್ಯಾಟರಿ ತಂತ್ರಜ್ಞಾನದ ಕುರಿತಂತೆ ಸಿಎಂ ಒಪ್ಪಂದ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಬಹಳಷ್ಟು ಒಪ್ಪಂದಗಳು ಗ್ರೀನ್‌ ಎನರ್ಜಿ ಸಂಬಂಧವೇ ಆಗಿವೆ. ಇದರ ಜತೆಗೆ ಸಿಎಂ ಖ್ಯಾತ ಉದ್ಯಮಿಗಳಾದ ಗೌತಮ್‌ ಅದಾನಿ, ಲಕ್ಷ್ಮೀ ಮಿತ್ತಲ್‌ ಸೇರಿ ಹಲವಾರು ಮಂದಿ ಜತೆಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿನ ಹೂಡಿಕೆ ಪೂರಕ ವಾತಾವರಣದ ಬಗ್ಗೆ ಬಿಡಿಸಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತಂತೆಯೂ ಒಪ್ಪಂದಗಳು ಏರ್ಪಡಬಹುದಾಗಿದೆ.

ಈಗ ಸಿಎಂ ಅವರ ದಾವೋಸ್‌ ಪ್ರವಾಸ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಕೊರೊನೋತ್ತರ ಸನ್ನಿವೇಶದಲ್ಲಿ ಹೂಡಿಕೆ ಸೆಳೆಯುವುದೇ ಕಷ್ಟಕರ. ಜಗತ್ತಿನ ಬಹುತೇಕ ಆರ್ಥಿಕತೆಗಳು, ಹಿಂಜರಿಕೆಯಿಂದ ನರಳುತ್ತಿವೆ. ಇಂಥ ಹೊತ್ತಲ್ಲಿ, ದೊಡ್ಡ ಪ್ರಮಾಣದ ಹೂಡಿಕೆ ಬರುವುದು ಆಶಾವಾದವೆಂದೇ ಹೇಳಬಹುದು.

ಆದರೆ ಆಗಿರುವ ಒಪ್ಪಂದಗಳು ಯಾವುದೇ ಕಾರಣಕ್ಕೂ ಕಾಗದದ ಮೇಲೆಯೇ ಉಳಿಯಬಾರದು. ಸದ್ಯ ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಉದ್ಯಮಿಗಳ ವಲಯದಲ್ಲಿ ಅಸಮಾಧಾನವಿದೆ. ಸಾವಿರಾರು ಕೋಟಿ ತೆರಿಗೆ ಕಟ್ಟುತ್ತಿದ್ದರೂ ಸರಿಯಾದ ಮೂಲಸೌಕರ್ಯವನ್ನೇ ನೀಡುತ್ತಿಲ್ಲ ಎಂಬ ಮಾತುಗಳು ಅವರ ಅತೃಪ್ತಿಯನ್ನು ತೋರಿಸುತ್ತಿವೆ. ಬೆಂಗಳೂರಂಥ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಗರಕ್ಕೆ ಇಂಥ ಕೆಟ್ಟ ಹೆಸರು ಸಲ್ಲದು.

Advertisement

ಈ ವಿಚಾರದಲ್ಲಿ ರಾಜ್ಯ ಸರಕಾರ ಕಠಿನ ನಿಲುವನ್ನು ತೆಗೆದುಕೊಳ್ಳಲೇಬೇಕು. ಬೆಂಗಳೂರು ಸೇರಿದಂತೆ ಎಲ್ಲೆಲ್ಲೆ ಹೂಡಿಕೆಗೆ ಆಸ್ಪದವಿದೆಯೋ ಅಲ್ಲಿ, ಉತ್ತಮ ಮೌಲಸೌಕರ್ಯ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು. ಆಗಷ್ಟೇ ಉತ್ತಮ ಹೂಡಿಕೆ ಬರಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next