ದಾವಣಗೆರೆ: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ಹಾಡ ಹಗಲೇ ಕೊಚ್ಚಿ ಕೊಲೆಗೈದ ಘಟನೆ ಬುಧವಾರ ದಾವಣಗೆರೆ ಜಿಲ್ಲೆಯ ಚೀಲೂರು-ಗೋವಿನಕೋವಿ ಬಳಿ ನಡೆದಿದೆ.
ಮೂಲತಃ ಹರಿಹರ ತಾಲೂಕಿನ ಭಾನುವಳ್ಳಿಯ ಅಂಜನಿ(30), ಮಧು(28) ಕೊಲೆಯಾದವರು.ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ಅಂಜನಿ ಮತ್ತು ಮಧು ಕೆಲವೇ ದಿನಗಳ ಹಿಂದೆಯಷ್ಟೇ ಜಾಮೀನು ಮೇಲೆ ಹೊರ ಬಂದಿದ್ದರು.
ಚೀಲೂರು-ಗೋವಿನಕೋವಿ ಬಳಿ ಅಂಜನಿ, ಮಧು ಇನ್ನೊಬ್ಬನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸ್ಕಾರ್ಪಿಯೋ ದಲ್ಲಿ ಬಂದ ಇನ್ನೊಂದು ರೌಡಿಗಳ ಗುಂಪು ಬೈಕ್ ಅಡ್ಡಗಟ್ಟಿ ಏಕಾಏಕಿ ಮಾರಕಾಸ್ತ್ರಗಳಿಂದ ಮಧು, ಅಂಜನಿ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅಂಜನಿ, ಮಧು ಸಾವನ್ನಪ್ಪಿದರೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ದುಷ್ಕರ್ಮಿಗಳು ಸ್ಕಾರ್ಪಿಯೋ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನ್ಯಾಮತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.