Advertisement

ದಾವಣಗೆರೆ: ಸೂರಿನ ಆಸೆಗೆ ಇದ್ದ ಮನೆ ಕೆಡವಿದರು!

06:06 PM Dec 08, 2022 | Team Udayavani |

ದಾವಣಗೆರೆ: ಶಾಶ್ವತವಾಗಿ ಸೂರು ದೊರೆಯುತ್ತದೆ ಎಂದು ಇದ್ದಂತಹ ಮನೆ ಕೆಡವಿದವರು ಈಗ ಅತ್ತ ಹೊಸ ಮನೆಯೂ ಇಲ್ಲ, ಇತ್ತ ಇದ್ದ ಮನೆ ಸಹ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 20ನೇ ವಾರ್ಡ್‌ನ ಬಸಾಪುರ ಗ್ರಾಮದ 30ಕ್ಕೂ ಹೆಚ್ಚು ಕುಟುಂಬದವರು ಕೊಳಚೆ ನಿರ್ಮೂಲನೆ ಮಂಡಳಿಯಿಂದ ಕಟ್ಟಿಸಿಕೊಡುವ ಮನೆಗಳು ನಿಗದಿತ ಸಮಯಕ್ಕೆ ದೊರೆಯದೆ ಇದ್ದಂತಹ ಮನೆಯೂ ಇಲ್ಲದೆ ಬೀದಿಯಲ್ಲಿ ವಾಸ ಮಾಡುವಂತಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಸಾಪುರ ಗ್ರಾಮದ 30 ಕುಟುಂಬಗಳಿಗೆ ಮನೆ ಮಂಜೂರಾಗಿದ್ದವು.

Advertisement

ಈಗಾಗಲೇ ವಾಸವಾಗಿದ್ದಂತಹ ಮನೆಯ ಜಾಗದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಅಧಿಕಾರಿಗಳು ನೀಡಿದ್ದ ಭರವಸೆಯ ನಂಬಿ ಮನೆಗಳ ಕೆಡವಿ ಹಾಕಿ, ಅಕ್ಕಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡತೊಡಗಿದರು.

ಕೊಳಚೆ ನಿರ್ಮೂಲನಾ ಮಂಡಳಿಯವರು ಹೇಳಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು 65,600 ರೂಪಾಯಿ, ಸಾಮಾನ್ಯ ವರ್ಗದವರು 98,900 ರೂಪಾಯಿಗಳನ್ನು ಮೂರು ಕಂತಿನಲ್ಲಿ ಪಾವತಿ ಮಾಡಬೇಕು. ಅದರಂತೆ ಕೆಲವರು ಡಿಡಿ ಕಟ್ಟಿದ್ದಾರೆ. ನಾಲ್ಕು ತಿಂಗಳು ಕಳೆದರೂ ಅನೇಕ ಮನೆಗಳು ಲಿಂಟಲ್‌ ಹಂತ ಬಿಟ್ಟು ಮೇಲೇರಿಲ್ಲ. ಮನೆ ಕಟ್ಟಿಸಿಕೊಡುವಂತೆ ಕಚೇರಿಯಿಂದ ಕಚೇರಿಗೆ ಫಲಾನುಭವಿಗಳು ಅಲೆದರೂ ಯಾವುದೇ ಪ್ರಯೋಜನ ಆಗಿಲ್ಲ.

ನಮಗೆ ಮತ್ತು ನಮ್ಮ ಮಕ್ಕಳಿಗೆ ಒಂದು ಮನೆ ಆಗುತ್ತದೆ ಎಂಬ ಆಸೆಯಿಂದ ಇದ್ದಂತಹ ಮನೆ ಕೆಡವಿ, ಕಂತು ಕಟ್ಟಲು ಸಾಲ ಮಾಡಿರುವ ಫಲಾನುಭವಿಗಳು ಮನೆ ಪೂರ್ಣಗೊಳ್ಳಲಿ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅವರ ಆಸೆ ಈಡೇರುವ ಯಾವ ಲಕ್ಷಣವೂ ಇಲ್ಲ. ಪ್ರತಿ ಮನೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಸರ್ಕಾರ 7 ಲಕ್ಷ ರೂಪಾಯಿ ಮೊತ್ತ ನಿಗದಿಪಡಿಸಿದೆ. ಗುತ್ತಿಗೆ ಪಡೆದಂತಹವರು ಮತ್ತೆ ಇನ್ನು ಯಾರಿಗೋ ಮನೆ ಕಟ್ಟುವ ಗುತ್ತಿಗೆ ನೀಡಿದ್ದಾರೆ.

ಆ ಗುತ್ತಿಗೆ ಪಡೆದಂತಹ ಕೆಲವರು ಬಸಾಪುರದ ಕಡೆ ಮುಖ ಮಾಡುತ್ತಿಲ್ಲ. ಹಾಗಾಗಿ ಮನೆಗಳ ಹಳೆಯ ಅವಶೇಷದಂತೆ ಅರ್ಧಕ್ಕೆ ನಿಂತಿವೆ. ಅಂದ ಚೆಂದದ ಸಣ್ಣ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಆಸೆಯಿಂದ ಕೆಲವು ಫಲಾನುಭವಿಗಳು ಮನೆ ಕಟ್ಟು ವವರು ಕೇಳಿದಂತೆ ಹಣ ನೀಡಿದ್ದಾರೆ. ಏನಿಲ್ಲ ಎಂದರೂ 40 ಸಾವಿರದಷ್ಟು ಹೆಚ್ಚಿನ ಹಣ ನೀಡಿದ್ದರೂ ಕೆಲಸ ಮಾತ್ರ ಆಗುತ್ತಿಲ್ಲ. ಏನಾದರೂ ಕೇಳಿದರೆ ಮನೆ ಕೆಲಸಕ್ಕೆ ಅರ್ಧಕ್ಕೆ ಬಂದ್‌. ಹಾಗಾಗಿ ಹಣ ಕೊಟ್ಟರೂ ಏನೂ ಕೇಳದಂತಹ ಸ್ಥಿತಿ ಫಲಾನುಭವಿಗಳದ್ದಾಗಿದೆ.

Advertisement

ಫಲಾನುಭವಿಯೊಬ್ಬರು ಹೆಚ್ಚುವರಿಯಾಗಿ 3 ಲಕ್ಷದಷ್ಟು ಹಣ ಕೊಟ್ಟಿದ್ದಾರೆ. ಹಣ ತೆಗೆದುಕೊಂಡಿರುವವರು ನಾಪತ್ತೆ. ಇದ್ದ ಹಣ ಕೊಟ್ಟು, ಮನೆಯೂ ಆಗಲಿಲ್ಲ ಎಂಬ ಕೊರಗಿನಲ್ಲೇ ಆತ ಈಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆ ಕುಟುಂಬದವರ ಗೋಳು ಹೇಳತೀರದಾಗಿದೆ.

ಮನೆ ಆಗುತ್ತದೆ ಎಂದು ಹೊನ್ನಮ್ಮ ಎಂಬ 65 ವರ್ಷದ ವಯೋವೃದ್ಧೆಯೊಬ್ಬರು ಇದ್ದ ಮನೆ ಕೆಡವಿ, ಪಕ್ಕದಲ್ಲೇ ಸಣ್ಣ ಮನೆಯೊಂದರಲ್ಲಿ ಬಾಡಿಗೆ ಇದ್ದಾರೆ. ಪತಿ ಇಲ್ಲದ ಹೊನ್ನಮ್ಮ ಮನೆಗಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಮನೆ ಆಗುವ ಲಕ್ಷಣವೇ ಇಲ್ಲದಂತಾಗಿ ಏನು ಮಾಡಬೇಕು ಎಂಬುದು ಗೊತ್ತಾಗದೆ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯನ್ನು ಹೊನ್ನಮ್ಮ ಮಾತ್ರವಲ್ಲ, ಮಲ್ಲಿಕಾರ್ಜುನ್‌, ನಾಗರಾಜ್‌ ಅವರದ್ದೂ ಇದೇ ಗೋಳಿನ ಕಥೆ.

ಗುಣಮಟ್ಟ ಕೇಳಲೇಬೇಡಿ..
ನಿರ್ಮಾಣಗೊಂಡಿರುವ ಮನೆಗಳ ಗುಣಮಟ್ಟದ ಬಗ್ಗೆ ಕೇಳುವಂತೆಯೇ ಇಲ್ಲ. ಮನಸ್ಸಿಗೆ ಬಂದಂತೆ ಸಿಮೆಂಟ್‌, ಮರಳು ಮಿಶ್ರಣ ಮಾಡಿ ಕಟ್ಟಲಾಗಿದೆ. ಏನಾದರೂ ಕೇಳಿದರೆ ಕಷ್ಟ. ಹಾಗಾಗಿ ಯಾರೂ ಏನೂ ಕೇಳಲಾರದ ಸ್ಥಿತಿಯಲ್ಲಿ ಇದ್ದಾರೆ. ಹೇಗಾದರೂ ಆಗಲಿ, ಮನೆ ಪೂರ್ಣಗೊಳ್ಳಲಿ ಎಂದು ಫಲಾನುಭವಿಗಳು ಕಾಯುವಂತಾಗಿದೆ. ಸಂಬಂಧಪಟ್ಟವರು ಮನೆಗಳ ನಿರ್ಮಾಣದ ಬಗ್ಗೆ ಗಮನಹರಿಸಿ, ಶಾಶ್ವತ ಸೂರು ಒದಗಿಸಬೇಕು ಎಂಬುದು ಜಿಲ್ಲಾ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹರೀಶ್‌ ಕೆ.ಎಲ್‌. ಬಸಾಪುರ ಅವರ ಒತ್ತಾಯ.

*ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next