ದಾವಣಗೆರೆ: ಊಹೆಗೂ ನಿಲುಕದಂತೆ ಸರ್ವ ವ್ಯಾಪಿಯಾಗಿ ದಾಳಿ ಮಾಡುತ್ತಿರುವ ಮಹಾಮಾರಿ ಕೋವಿಡ್ ವೈರಸ್ ತಡೆಗಟ್ಟುವಿಕೆಗೆ ಅತೀ ಮುಖ್ಯವಾಗಿ ಪಾಲಿಸಬೇಕಾದ ಸಾಮಾಜಿಕ ಅಂತರ ಎಂಬುದೀಗ ಅಕ್ಷರಶಃ ಕಾಣೆಯಾಗುತ್ತಿದೆ!
ಕೋವಿಡ್ ವೈರಸ್ ಒಬ್ಬರಿಂದ ಒಬ್ಬರಿಗೆ ವಕ್ಕರಿಸುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಂಡಲ್ಲಿ ವೈರಸ್ ಹರಡುವಿಕೆ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿಯೇ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದು ಸಾರಿ ಸಾರಿ ಹೇಳಲಾಗುತ್ತದೆ. ಆದರೆ, ವಾಸ್ತವವೇ ಬೇರೆ. ಈಚೆಗೆ ಕೆಲವಾರು ಕಡೆ ಹೊರತುಪಡಿಸಿ ಇತರೆಡೆ ಹಗಲು ವೇಳೆಯೇ ಸಾಮಾಜಿಕ ಅಂತರವನ್ನ ದುರ್ಬೀನು ಹಾಕಿಕೊಂಡು ಹುಡುಕುವಂತಾಗಿದೆ. ಅತಿ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಾದ ಬಸ್, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಕೆಲವಾರು ಬ್ಯಾಂಕ್ ಮಾತ್ರವಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರ ಎಂಬುದು ಮರೀಚಿಕೆಯಾಗಿದೆ.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಾ.25 ಜಾರಿಗೆ ತಂದ ಪ್ರಥಮ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ಹಾಲು, ದಿನಸಿ, ಔಷಧಿ ಅಂಗಡಿ ಮಾತ್ರವಲ್ಲ ಮಾರುಕಟ್ಟೆಯಲ್ಲೂ ಅತ್ಯಂತ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತಿತ್ತು. ಪ್ರತಿಯೊಂದು ಅಂಗಡಿಗಳ ಮುಂದೆ ಮಾಲೀಕರು, ನಗರಪಾಲಿಕೆ ಸಿಬ್ಬಂದಿ ಬಾಕ್ಸ್ ಬರೆಸುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒತ್ತು ನೀಡಿದ್ದರು. ಜನರು ಸಹ ಕಡೆ ಒಂದು ಮೀಟರ್ ಅಂತರದಲ್ಲಿ ನಿಂತೇ ಸಾಮಾನು ಖರೀದಿ ಮಾಡುವುದು ಕಂಡು ಬರುತ್ತಿತ್ತು. ಏ.14ರ ವರೆಗೆ ಜಾರಿಯಲ್ಲಿದ್ದ ಲಾಕ್‌ಡೌನ್‌ನ ಪ್ರಥಮ ಹಂತದಲ್ಲಿ ಈ ಚಿತ್ರಣ ಎಲ್ಲೆಡೆ ಸಾಮಾನ್ಯವಾಗಿತ್ತು.
ಲಾಕ್‌ಡೌನ್‌ನ ನಿಯಮಾವಳಿಯಲ್ಲಿ ಸಡಿಲಿಕೆ ಪ್ರಾರಂಭವಾಗುತ್ತಿದ್ದಂತೆ ಸಾಮಾಜಿಕ ಅಂತರ ಕಾಣೆಯಾಗುವುದೂ ಆರಂಭವಾಯಿತು. ಲಾಕ್‌ಡೌನ್‌ನ ನಿಯಮಗಳಲ್ಲಿ ಸಡಿಲಿಕೆ ಮತ್ತು ಆರ್ಥಿಕ ಚಟುವಟಿಕೆಗೆ ಮುಕ್ತ ಅವಕಾಶ ಹೆಚ್ಚಾದ ನಂತರದಲ್ಲಿ ಸಾಮಾಜಿಕ ಅಂತರ ಎನ್ನುವುದೇ ಕಾಣೆಯಾಗುತ್ತಿದೆ. ಲಾಕ್‌ಡೌನ್ 5.0ರಲ್ಲಂತೂ ಎಲ್ಲಿಯೂ ಅಪ್ಪಿತಪ್ಪಿಯೂ ಸಾಮಾಜಿಕ ಅಂತರ ಕಂಡು ಬರುತ್ತಿಲ್ಲ. “ಈಗಂತೂ ರೇಷನ್ ಅಂಗಡಿ, ಹಾಲು ತರಲಿಕ್ಕೆ, ಮಾರುಕಟ್ಟೆಗೆ ಹೋಗುವುದಕ್ಕೂ ಹೆದರಿಕೆ ಆಗುತ್ತಿದೆ. ಮೊದಲೆಲ್ಲ ದೂರ ದೂರ ನಿಂತುಕೊಳ್ಳುತ್ತಿದ್ದರು. ಈಗ ಏನೂ ಇಲ್ಲ. ಒಬ್ಬರಿಗೆ ಒಬ್ಬರು ಜೊತೆಯಾಗಿಯೇ ನಿಂತುಕೊಂಡೇ ಇರುತ್ತಾರೆ. ಹೆಚ್ಚು ಕಮ್ಮಿಯಾದರೆ ಮೈಮೇಲೆ ನುಗ್ಗುತ್ತಾರೆ.
ಕೋವಿಡ್ ಐತಿ ಅನ್ನೋ ಭಯವೇ ಇಲ್ಲದಂಗೆ ಜನರು ಮಾಡುತ್ತಾರೆ. ಸಣ್ಣ ಮಕ್ಕಳನ್ನಂತೂ ಅಂಗಡಿ, ಹಾಲು ತರಿಸೋಕೆ ಕಳಿಸೋದು ಕಷ್ಟವಾಗಿದೆ’ ಎನ್ನುವ ವಿನೋಬ ನಗರದ ಸಾವಿತ್ರಮ್ಮ ಎನ್ನುವರ ಮಾತು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ ಎಂಬುದರ ಪ್ರತೀಕ. “ಬ್ಯಾಂಕ್‌ಗಳಲ್ಲಿ ಎಲ್ಲರನ್ನೂ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಕೆಲ ಜನರು ಮಾತ್ರ ಒಳಗೆ ಹೋಗಿ, ತಮ್ಮ ಕೆಲಸ ಮುಗಿಸಿಕೊಂಡು ಹೊರಗೆ ಬರುವರೆಗೂ ಇತರರು ಕಾಯಲೇಬೇಕು. ಆದರೂ ಜನರು ನಾಮುಂದು, ತಾಮುಂದು ಎಂದೇ ನುಗ್ಗುತ್ತಾರೆ. ಅವರ ಆರೋಗ್ಯದ ಬಗ್ಗೆ ಅವರಿಗೇ ಭಯ ಇಲ್ಲ ಎಂದಾದಾಗ ನಾವು ಹೇಳುವುದರಲ್ಲಿ ಆರ್ಥವೇ ಇಲ್ಲ ಎನ್ನುವಂತಾಗಿದೆ. ನಾವೂ ಹೇಳಿ ಹೇಳಿ ಸಾಕಾಗಿ ಹೋಗಿ ಈಗ ಸುಮ್ಮನಾಗಿದ್ದೇವೆ’ ಎಂದು ಬ್ಯಾಂಕೊಂದರ ಸೆಕ್ಯುರಿಟಿ ಗಾರ್ಡ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
“ಕೆಲ ಸರ್ಕಾರಿ ಕಚೇರಿಯಲ್ಲೂ ಸಾಮಾಜಿಕ ಅಂತರ ಇಲ್ಲದೆ ಉದ್ದನೆಯ ಸರತಿ ಸಾಲಲ್ಲಿ ಜನರು ನಿಂತುಕೊಂಡಿರುವುದು ಸಾಮಾನ್ಯ ಎನ್ನುವಂತಾಗಿದೆ. ಜನರು ಸಹ ಎಷ್ಟೇ ಹೇಳಿದರೂ ಕೇಳುವುದನ್ನೇ ಮರೆತಿರುವಂತೆ ವರ್ತಿಸುತ್ತಾರೆ. ಹಂಗಾಗಿ ಎಲ್ಲ ಜನರು ಒಳಕ್ಕೆ ಹೋದ ಮೇಲೆ ನಾವು ಹೋಗುತ್ತೇವೆ’ ಎಂದು ಕೆಲಸಕ್ಕೆಂದು ಸರ್ಕಾರಿ ಕಚೇರಿಗೆ ಬಂದಿದ್ದ ನಾಗರಿಕರೊಬ್ಬರು ಹೇಳಿದರು.
ಕೋವಿಡ್ ವೈರಸ್ ತಡೆಗಟ್ಟಲು ಅನುಸರಿಸಲೇಬೇಕಾದ ಸಾಮಾಜಿಕ ಅಂತರ ಅಕ್ಷರಶಃ ಕಾಣೆಯಾಗುತ್ತಿರುವುದು ಮತ್ತಷ್ಟು ಅವಘಡಕ್ಕೆ ಅವಕಾಶ ಮಾಡಿಕೊಡುವಂತಾಗುತ್ತಿದೆ ಎಂಬ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ.
ರಾ. ರವಿಬಾಬು