ದಾವಣಗೆರೆ: ಬಹು ದಿನಗಳ ನಂತರ ಕರ್ನಾಟಕ ಹಾಲು ಮಹಾಮಂಡಳಿಯ ಮೂಲಕ ಮೆಕ್ಕೆಜೋಳ ಬೆಳೆಗಾರರ ನಿರೀಕ್ಷೆ ನೆರವೇರುತ್ತಿದೆ! ಖರೀದಿ ಕೇಂದ್ರದ ಮೂಲಕ ಮೆಕ್ಕೆಜೋಳ ಖರೀದಿ ಮಾಡಬೇಕು ಎಂಬ ರೈತರ ಒತ್ತಾಯಕ್ಕೆ ಕಡೆಗೂ ಸ್ಪಂದಿಸಿರುವ ಸರ್ಕಾರ, ಹಾಲು ಮಹಾಮಂಡಳ ಮೂಲಕ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಹಸಿರು ನಿಶಾನೆ ತೋರಿದೆ.
ಮಹಾಮಾರಿ ಕೊರೊನಾ, ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರು ಸೂಕ್ತ ಮಾರುಕಟ್ಟೆ ಇಲ್ಲದೆ ತೊಂದರೆಯಲ್ಲಿರುವುದನ್ನು ಮನ ಗಂಡಿರುವ ಹಾಲು ಮಹಾಮಂಡಳಿ, ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ 1,760 ರೂಪಾಯಿಯಂತೆ ಖರೀದಿಗೆ ಮುಂದಾಗಿರುವುದು ರೈತಾಪಿ ವರ್ಗಕ್ಕೆ ನೆಮ್ಮದಿ ತಂದಿದೆ. ರೈತರಿಂದ ನೇರವಾಗಿ ಖರೀದಿ ಮಾಡುವ ಮೆಕ್ಕೆಜೋಳವನ್ನು ಹಾಲು ಮಹಾಮಂಡಳದ 5 ಪಶು ಆಹಾರ ಘಟಕಗಳಿಗೆ ಹಂಚಿಕೆ ಮಾಡಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿನ ಪಶುಆಹಾರ ಘಟಕಕ್ಕೆ 8 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ಅನುಮತಿ ನೀಡಲಾಗಿದೆ ಜೊತೆಗೆ ತುಮಕೂರು ಜಿಲ್ಲೆಯ ಗುಬ್ಬಿ ಘಟಕಕ್ಕೂ 2 ಸಾವಿರ ಮೆಟ್ರಿಕ್ ಟನ್ ಖರೀದಿ ಮಾಡಲಾಗುತ್ತಿದೆ.
ಶಿಕಾರಿಪುರ ಮತ್ತು ಗುಬ್ಬಿ ಘಟಕಕ್ಕಾಗಿ ಒಟ್ಟಾರೆ 10 ಸಾವಿರ ಮೆಟ್ರಿಕ್ ಟನ್‌ನಷ್ಟು ಮೆಕ್ಕೆಜೋಳ ಖರೀದಿ ಮಾಡಲು ಮುಂದಾಗಿರುವುದರಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. “ಮೆಕ್ಕೆಜೋಳ ಕಣಜ’ ಎಂದೇ ಖ್ಯಾತಿ ಪಡೆದ ಜಿಲ್ಲೆಯಲ್ಲಿ 2019-20 ರ ಮುಂಗಾರು ಹಂಗಾಮಿನಲ್ಲಿ 1,18,652 ಹೆಕ್ಟೇರ್‌ನಲ್ಲಿ 4,542 ಅಂದಾಜು ಇಳುವರಿ (ಕೆಜಿ/ಹೆಕ್ಟೇರ್), ಹಿಂಗಾರಿನಲ್ಲಿ 340 ಹೆಕ್ಟೇರ್‌ನಲ್ಲಿ 3,221 ಅಂದಾಜು ಇಳುವರಿ (ಕೆಜಿ/ಹೆಕ್ಟೇರ್) ಮತ್ತು ಬೇಸಿಗೆ ಹಂಗಾಮಿನಲ್ಲಿ 275 ಹೆಕ್ಟೇರ್‌ನಲ್ಲಿ 3,951 ಅಂದಾಜು ಇಳುವರಿ (ಕೆ.ಜಿ/ ಹೆಕ್ಟೇರ್) ನಿರೀಕ್ಷೆ ಇದೆ. ಈಗಾಗಲೇ ದಾವಣಗೆರೆ ಒಳಗೊಂಡಂತೆ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಕ್ಕೆಜೋಳ ಬರುತ್ತಿದೆ. ಹಾಲು ಮಹಾಮಂಡಳ ಮೆಕ್ಕೆಜೋಳ ನಿಗದಿತ ದರಕ್ಕೆ ಖರೀದಿ ಮಾಡುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭಯ ಇರುವುದಿಲ್ಲ. ಇದು ಸಹ ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲದ ಅಂಶ ಎಂಬುದು ಗಮನಾರ್ಹ.
ಒಬ್ಬ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 20 ಕ್ವಿಂಟಲ್ ಮೀರದಂತೆ ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ 50 ಕ್ವಿಂಟಲ್ ಮೆಕ್ಕೆಜೋಳ ಮಾರಾಟ ಮಾಡಬಹುದು. ಮೂರು ಹಂತದಲ್ಲಿ ಮೆಕ್ಕೆಜೋಳದ ಖರೀದಿ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ರೈತರು ಸಂಬಂಧಿತ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗೆ 1 ಕೆಜಿ ಮೆಕ್ಕೆಜೋಳ ನೀಡಿ ನೋಂದಣಿ ಮಾಡಿಸಬೇಕು. ಕಡ್ಡಾಯವಾಗಿ ಫ್ರೂಟ್ ತಂತ್ರಾಂಶ ಬಳಸಿಯೇ ನೋಂದಣಿ ಮಾಡಬೇಕು. ರೈತರು ನೀಡಿದಂತಹ ಮೆಕ್ಕೆಜೋಳ ಮಾದರಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಂಬಂಧಿತ ರೈತರಿಗೆ ದಿನ ಮತ್ತು ಸಮಯ ನಿಗದಿಪಡಿಸಲಾಗುತ್ತದೆ. ಆ ನಂತರವೇ ರೈತರು ಮೆಕ್ಕೆಜೋಳ ಕೊಂಡೊಯ್ಯಬೇಕು. ಖರೀದಿಸಿದ ಮೆಕ್ಕೆಜೋಳವನ್ನು ಪಶುಗಳ ಆಹಾರಕ್ಕೆ ಬಳಕೆ ಮಾಡುವುದರಿಂದ ಇಷ್ಟೆಲ್ಲಾ ನಿಯಮ ಪಾಲನೆ ಮಾಡಲಾಗುತ್ತಿದೆ. ಮೆಕ್ಕೆಜೋಳ ಮಾರಾಟಕ್ಕೆ ಬರುವಂತಹ ರೈತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಕೋವಿಡ್-19 ನಿಯಂತ್ರಣ ಕ್ರಮ ಅನುಸರಿಸಬೇಕು ಎಂದು ಸೂಚಿಸಲಾಗಿದೆ.
ಮಾರಾಟ ಅಷ್ಟೊಂದು ಸುಲಭವಲ್ಲ
ಕರ್ನಾಟಕ ಹಾಲು ಮಹಾಮಂಡಳದಿಂದ ರೈತರಿಂದ ನೇರವಾಗಿಯೇ ಮೆಕ್ಕೆಜೋಳ ಖರೀದಿ ಮಾಡುವುದು ರೈತರಿಗೆ ಅನುಕೂಲ ಆಗಲಿದೆ. ಆದರೆ ಕೆಲವು ನಿಯಮಗಳ ಪಾಲನೆ ಅಷ್ಟೊಂದು ಸುಲಭವೂ ಅಲ್ಲ ಎನ್ನುವ ಮಾತಿದೆ. ಮೆಕ್ಕೆಜೋಳದ ಮಾದರಿ ನೀಡಬೇಕು. ಓಕೆ ಎಂದಾಕ್ಷಣ ತಕ್ಷಣಕ್ಕೆ ತಮ್ಮ ವ್ಯಾಪ್ತಿಯ ಪಶು ಆಹಾರ ಘಟಕಕ್ಕೆ ರೈತರು ತಮ್ಮದೇ ಖರ್ಚಿನಲ್ಲಿ ಸಾಗಾಣಿಕೆ ಮಾಡಬೇಕು. ಶಿಕಾರಿಪುರ ಸಮೀಪದ ಶಿರಾಳಕೊಪ್ಪ ರಸ್ತೆಯ ಸಂಡ ಗ್ರಾಮದಲ್ಲಿನ ಪಶು ಆಹಾರ ಘಟಕಕ್ಕೆ ಒಂದೇ ದಿನದಲ್ಲಿ ಸಾಗಾಣಿಕೆ ಮಾಡಲಿಕ್ಕೆ ಆಗುವುದಿಲ್ಲ.ಹಾಗಾಗಿ ಸಮೀಪದ ದೊಡ್ಡಬಾತಿಗೆ ಸಾಗಿಸಲು ಅನುಮತಿ ನೀಡಬೇಕು ಎಂದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಖರೀದಿ ಪ್ರಾರಂಭ
ಕರ್ನಾಟಕ ಹಾಲು ಮಹಾಮಂಡಳಿ ಮೂಲಕ ಮೆಕ್ಕೆಜೋಳ ಖರೀದಿ ಮಾಡಲಾಗುತ್ತಿದೆ. ರೈತರು ತಮ್ಮ ಸಮೀಪದ ಹಾಲು ಉತ್ಪಾದಕರ ಸಂಘದಲ್ಲಿ ಮೆಕ್ಕೆಜೋಳ ಮಾದರಿ
ನೀಡಬೇಕು. ಗುಣಮಟ್ಟ ಪರಿಶೀಲನೆ ನಡೆಸಿದ ನಂತರವೇ ಖರೀದಿ ಮಾಡಲಾಗುವುದು ಎಂದು ಹಾಲು ಮಹಾಮಂಡಳಿ ಅಧಿಕಾರಿ ತಿಳಿಸಿದ್ದಾರೆ.
ರಾ. ರವಿಬಾಬು