Advertisement

ಸ್ಮಾರ್ಟ್‌ ಸಿಟಿ ಲೇಟ್ ಕೆಲಸಕ್ಕೆ ಸಂಸದರ ಬೇಸರ

03:29 PM Sep 13, 2019 | Team Udayavani |

ದಾವಣಗೆರೆ: ಕೇಂದ್ರ, ರಾಜ್ಯ ಸರ್ಕಾರಗಳ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸ್ಮಾರ್ಟ್‌ಸಿಟಿ ಕೆಲಸ ವಿಳಂಬ ಆಗುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಗರಾಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2015ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಪ್ರಾರಂಭವಾಗಿದ್ದು, 2021ಕ್ಕೆ ಮುಗಿಯಬೇಕು. ಆದರೆ, ದಾವಣಗೆರೆಯಲ್ಲಿ ಕೆಲಸ ಬಹಳ ಲೇಟ್ ಆಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ 1058.9 ಕೋಟಿ ಅನುದಾನದಲ್ಲಿ 74 ಕಾಮಗಾರಿ ಕೈಗೆತ್ತಿಗೊಳ್ಳಲಾಗುತ್ತಿದೆ. ಈವರೆಗೆ ಬಿಡುಗಡೆಯಾಗಿರುವ 396 ಕೋಟಿಯಲ್ಲಿ 114.69 ಕೋಟಿ ಖರ್ಚಾಗಿದೆ. 2020ರ ಜೂನ್‌ ವೇಳೆಗೆ ಶೇ.26 ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಅಸಾದ್‌ ಷರೀಫ್‌ ತಿಳಿಸಿದರು.

ಅನುದಾನ ಇದ್ದರೂ ಖರ್ಚು ಮಾಡದೇ ಇರುವುದಕ್ಕೆ ಕಾರಣ ಏನು. ಮುಂದಿನ ಜೂನ್‌ಗೆ ಶೇ.26 ರಷ್ಟು ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ. ಇನ್ನುಳಿದ ಕೆಲಸ ಆಗುವುದಾದರೂ ಯಾವಾಗ, ಕೆಲಸ ಮಾಡಲು ಇರುವ ತೊಂದರೆ ತಿಳಿಸಿದರೆ ಬಗೆಹರಿಸುತ್ತೇವೆ. ಸ್ಮಾರ್ಟ್‌ಸಿಟಿ ಯೋಜನೆ ಕೆಲಸ ನಡೆಯುತ್ತಿರುವ ಊರುಗಳ ಸಂಸದರು ಸಚಿವರಿಗೆ ಪತ್ರ ಬರೆದಿದ್ದೇವೆ. ಅವರನ್ನು ಭೇಟಿ ಮಾಡಿ, ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರದ ವ್ಯಾಪ್ತಿಯ ಬದಲಾವಣೆ ಕೋರುತ್ತೇವೆ ಎಂದು ಸಿದ್ದೇಶ್ವರ್‌ ಹೇಳಿದರು.

2018 ಮಾ.31 ರಂದು ಮಂಡಿಪೇಟೆ ರಸ್ತೆ ಕೆಲಸದ ಗುದ್ದಲಿ ಪೂಜೆ ಮಾಡಲಾಗಿದೆ. ಆದರೂ, ಈವರೆಗೆ ರಸ್ತೆ ಕೆಲಸ ಮುಗಿಸಿಲ್ಲ. ಫೆಬ್ರವರಿಯಲ್ಲಿ ಖಾಸಗಿ ಬಸ್‌ ನಿಲ್ದಾಣ ಶಿಫ್ಟ್‌ ಕೆಲಸ ಪ್ರಾರಂಭಿಸಲಾಗಿತ್ತಾದರೂ ಈಗಲೂ ಖಾಸಗಿ ಬಸ್‌ ನಿಲ್ದಾಣ ಶಿಫ್ಟ್‌ ಆಗಿಲ್ಲ. ಹಗೇದಿಬ್ಬ. ರಿಂಗ್‌ ರಸ್ತೆ, ಗಾಂಧಿನಗರ, ಅಂಬೇಡ್ಕರ್‌ ಸರ್ಕಲ್ ಸೇರಿ 9 ಕಡೆ ರೀ-ಜಂಕ್ಷನ್‌ ಕೆಲಸ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ದಾವಣಗೆರೆ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ಟೆಂಡರ್‌ ನಿಯಮ, ಜಾಗದ ಸಮಸ್ಯೆ ಇತರೆ ಕಾರಣಕ್ಕೆ ಕೆಲಸ ಆಗುತ್ತಿಲ್ಲ. ಆದರೆ ಬೇರೆ ಕಡೆಗಿಂತಲೂ ಹೆಚ್ಚಿನ ಕೆಲಸ ಆಗಿವೆ ಎಂದು ಅಸಾದ್‌ ಷರೀಫ್‌ ಸಮಜಾಯಿಷಿ ನೀಡಿದರು.

ಸೋಮಾರಿ ಅಧಿಕಾರಿಗಳು ಇರುತ್ತಾರೆ. ಕನಿಷ್ಟ ಪಕ್ಷ ಶೇ. 25 ರಷ್ಟು ಕೆಲಸವನ್ನಾದರೂ ಮಾಡಲಿ ಎಂದು ಟಾರ್ಗೆಟ್ ನೀಡಿರುತ್ತಾರೆ. ನೀನು ದಾವಣಗೆರೆಯಲ್ಲಿ ಇದಿಯೋ, ಎಲ್ಲಿ ಇದಿಯೋ, ದಾವಣಗೆರೆಯದು ಮಾತ್ರ ಮಾತನಾಡು, ಬೇರೆಯದ್ದನ್ನು ಹೋಲಿಕೆ ಮಾಡಿ, ಕಥೆ ಹೇಳಬೇಡ. ಕೆಲಸ ಮಾಡು ಎಂದು ಸಿದ್ದೇಶ್ವರ್‌ ಸೂಚಿಸಿದರು.

ನೀನು ಸ್ಮಾರ್ಟ್‌ಸಿಟಿ ಯೋಜನೆ ಎಂಡಿನಾ? ಇಲ್ಲಾ ಕಂಟ್ರ್ಯಾಕ್ಟರ್ರಾ? ಗುತ್ತಿಗೆದಾರರನ್ನು ಸಮರ್ಥಿಸಿಕೊಂಡು ಮಾತನಾಡುತ್ತೀಯಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಪ್ರಶ್ನಿಸಿದರು.

ಮುಂದಿನ ವಾರದಲ್ಲಿ ಖಾಸಗಿ ಬಸ್‌ ನಿಲ್ದಾಣ ಸ್ಥಳಾಂತರ ಮಾಡಲಾಗುವುದು. ಮಂಡಕ್ಕಿ ಭಟ್ಟಿಯಲ್ಲಿ ಸುಧಾರಿತ ಗ್ಯಾಸಿಫೈಯರ್‌ ಅಳವಡಿಕೆಗೆ ಒಪ್ಪುತ್ತಿಲ್ಲ. ಮಂಡಕ್ಕಿ ಭಟ್ಟಿ ಪ್ರದೇಶದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 318 ಕೋಟಿಯಲ್ಲಿ ಸಾರಿಗೆ ಬಸ್‌ ನಿಲ್ದಾಣಕ್ಕೆ 130 ಕೋಟಿ, ರಿಂಗ್‌ ರಸ್ತೆಗೆ 65, ರಾಜಕಾಲುವೆಗೆ 25 ಕೋಟಿ ಬಳಕೆ ಮಾಡಲು ನಿರ್ಧರಿಸಲಾಗಿದೆ. ಕರಿಲಕ್ಕೇನಹಳ್ಳಿ, ಅರಸಾಪುರ ಭಾಗಕ್ಕರ ಮಂಡಕ್ಕಿಭಟ್ಟಿ ಸ್ಥಳಾಂತರ ಮಾಡುವ ಯೋಜನೆ ಇದೆ ಎಂದು ಅಸಾದ್‌ ಷರೀಫ್‌, ನಗರಪಾಲಿಕೆ ಆಯುಕ್ತ ಮಂಜುನಾಥ್‌ ಬಳ್ಳಾರಿ ತಿಳಿಸಿದರು. ಮಂಡಕ್ಕಿ ಭಟ್ಟಿಗಳ ಶಿಫ್ಟ್‌ ಮಾಡಬೇಕು ಎಂದು ಸಿದ್ದೇಶ್ವರ್‌ ಸೂಚಿಸಿದರು.

ಜಲಸಿರಿ ಯೋಜನೆಯಡಿ 60.63 ಕಿಲೋ ಮೀಟರ್‌ ಪೈಪ್‌ಲೈನ್‌ನಲ್ಲಿ ಈವರೆಗೆ 23 ಕಿಲೋ ಮೀಟರ್‌ ಹಾಕಲಾಗಿದೆ. ದಾವಣಗೆರೆ ನಗರದಲ್ಲಿ 1,174 ಕಿಲೋ ಮೀಟರ್‌ ವಿತರಣಾ ಪೈಪ್‌ಲೈನ್‌ನಲ್ಲಿ 396 ಕಿಲೋ ಮೀಟರ್‌ ಹಾಕಲಾಗಿದೆ. 18 ಓವರ್‌ ಹೆಡ್‌ ಟ್ಯಾಂಕ್‌ಗಳಲ್ಲಿ 14 ಕಡೆ ಕೆಲಸ ಪ್ರಾರಂಭವಾಗಿದೆ. 2 ಕಡೆ ಬುನಾದಿ ಆಗಿದೆ. ಕುಂದುವಾಡ, ಆವರಗೆರೆಯಲ್ಲಿ ಸ್ಥಳದ ಸಮಸ್ಯೆ ಇದೆ ಎಂದು ಕೆಯುಡಿಎಫ್‌ಸಿ ಇಇ ರವಿ ತಿಳಿಸಿದರು.

ಓವರ್‌ ಹೆಡ್‌ ಟ್ಯಾಂಕ್‌ ಕಟ್ಟಲಿಕ್ಕೆ ಎಷ್ಟು ದಿನ ಬೇಕು. ಕಾಸಲ್ ಶ್ರೀನಿವಾಸಶೆಟ್ಟಿ ಪಾರ್ಕ್‌ನಲ್ಲಿ ಈಗಲೋ, ಆಗಲೋ ಎನ್ನುವಂತಿರುವ ಓವರ್‌ ಹೆಡ್‌ ಟ್ಯಾಂಕ್‌ ಬೀಳಿಸಿಲ್ಲ. ಜನ ಸತ್ತ ಮೇಲೆ ಬೀಳಿಸ್ತೀರಾ, ಏನಾದರೂ ಆದರೆ ಜೀವ ತಂದುಕೊಡುತ್ತೀರಾ ಎಂದು ಸಂಸದ ಸಿದ್ದೇಶ್ವರ್‌ ಖಾರವಾಗಿ ಪ್ರಶ್ನಿಸಿದರು. 2020ರ ಮಾರ್ಚ್‌ಗೆ 14 ಓವರ್‌ ಹೆಡ್‌ ಟ್ಯಾಂಕ್‌ ಕೆಲಸ ಮುಗಿಸಲಾಗುವುದು. ಯರಗುಂಟೆ, ಬಸಾಪುರ ಗ್ರಾಮಗಳ ಎಲ್ಲಾ ಮನೆಗಳಿಗೆ 24×7 ಮಾದರಿ ಶುದ್ಧ ನೀರು ಪೂರೈಕೆ ಮಾಡಲಾಗುವುದು. 2-3 ತಿಂಗಳಲ್ಲಿ ಹಂತ ಹಂತವಾಗಿ ನೀರು ಕೊಡುತ್ತಾ ಎಲ್ಲಾ 50 ವಲಯಗಳ ಮನೆಗಳಿಗೆ ನೀರು ಕೊಡಲಾಗುವುದು ಎಂದು ಇಂಜಿನಿಯರ್‌ ತಿಳಿಸಿದರು. ಮುಂದಿನ ಜೂನ್‌ಗೆ ರಾಜನಹಳ್ಳಿ ಬಳಿ ತುಂಗಭದ್ರಾ ನದಿ ಬ್ಯಾರೇಜ್‌ ಕೆಲಸ ಮುಗಿಸುವಂತೆ ಸಿದ್ದೇಶ್ವರ್‌ ಸೂಚಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಆಯುಕ್ತ ಮಂಜುನಾಥ್‌ ಬಳ್ಳಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next