Advertisement

ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

11:27 AM Dec 12, 2019 | Naveen |

ದಾವಣಗೆರೆ: ನಿಗದಿತ ಸಮಯದೊಳಗೆ ಗುರಿ ಸಾಧಿಸದ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ನಿಗದಿತ ಸಮಯದೊಳಗೆ ಟೆಂಡರ್‌ ಕರೆದು ಕಾಮಗಾರಿ ಕೈಗೊಳ್ಳಬೇಕು. ಮುಖ್ಯವಾಗಿ ರೈತರಿಗೆ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಅಡಕೆ ಬೆಳೆಗೆ ಮಾರಕವಾಗಿರುವ ರೋಗ ತಡೆಗೆ ಕ್ರಮ ಕೈಗೊಳ್ಳಬೇಕು. ಆ ಬಗ್ಗೆ ರೈತರಿಗೆ ಸೂಕ್ತ ಸಲಹೆ ನೀಡಬೇಕೆಂದು ತೋಟಗಾರಿಕಾ ಇಲಾಖೆ ಅಧಿಕಾರಿಗೆ ತಿಳಿಸಿದರು. ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್‌, ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ಬೆಳೆ ವಿಸ್ತರಣೆ ಕಾರ್ಯ ಕೈಗೊಳ್ಳಬೇಕು. ಇದಕ್ಕೆ ರೈತರ ಬೇಡಿಕೆಯೂ ಬಹಳಷ್ಟಿದೆ ಎಂದರು.

ಆಗ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್‌ ಬೊಮ್ಮನ್ನಾರ್‌ ಪ್ರತಿಕ್ರಿಯಿಸಿ, ಸರ್ಕಾರದ ಆದೇಶದನ್ವಯ ನರೇಗಾದಡಿ ಅಡಿಕೆ ಗಿಡಗಳನ್ನು ಹಾಕುವ ಪ್ರದೇಶವು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಒಳಪಡಬೇಕು ಹಾಗೂ ಮಲೆನಾಡಾಗಿರಬೇಕು. ಕೊಳವೆಬಾವಿ ಇರಬಾರದು. ಸಂಪೂರ್ಣ ನೀರಾವರಿ ಆಶ್ರಿತವಾಗಿರಬೇಕು ಎಂದು ನಿಯಮವಿದೆ ಎಂದರು.

ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ ಮಧ್ಯ ಪ್ರವೇಶಿಸಿ, ಚನ್ನಗಿರಿ ಮತ್ತು ಹೊನ್ನಾಳಿ ಅರೆ ಮಲೆನಾಡೆಂದು ಪರಿಗಣಿಸಲಾಗಿದ್ದು, ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸ್ಪಷ್ಟೀಕರಣ ಬಂದ ನಂತರ ಕ್ರಮ ವಹಿಸಲಾಗುವುದು ಎಂದರು. ಕೊಳೆ ರೋಗ ಮತ್ತು ಇಡಿಮುಂಡಿಗೆ ರೋಗಕ್ಕೆ ಕಾರಣ ಏನು? ಈ ಬಗ್ಗೆ ಜಿಲ್ಲೆಯ ರೈತರಿಗೆ ಹೆಚ್ಚಿನ ಮಾಹಿತಿ ಮತ್ತು ಪ್ರಚಾರ ನೀಡಿ, ಅಡಕೆ ಬೆಳೆ ಸಂರಕ್ಷಿಸಲು ಕ್ರಮ ವಹಿಸಿ ಎಂದು ಅಧ್ಯಕ್ಷರು ಹೇಳಿದಾಗ, ತೋಟಗಾರಿಕಾ ಇಲಾಖೆ ಉಪನಿರ್ದೇಶಕರು, ಟ್ರ್ಯಾಕ್ಟರ್‌
ಬಳಸುವುದರಿಂದ ಬೇರಿಗೆ ಆಗುವ ಪೆಟ್ಟು ಮತ್ತು ಕೆರೆ ಮಣ್ಣು ಬಳಕೆ ಇಡಿಮುಂಡಿಗೆ ರೋಗಕ್ಕೆ ಕಾರಣಗಳಾಗಿವೆ. ಎಲೆ, ಅಡಿಕೆ, ಕಾಳುಮೆಣಸಿಗೆ ತಗಲುವ ಕೊಳೆರೋಗ ಮತ್ತು ಇಡಿಮುಂಡಿಗೆ ರೋಗದ ಬಗ್ಗೆ ಪತ್ರಿಕಾ ಪ್ರಕಟಣೆ ಮತ್ತು ತರಬೇತಿ ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಅಡಿಕೆ ಬೆಳೆಗಾರರಿಗೆ ಹೋಬಳಿವಾರು ತರಬೇತಿ ನೀಡಲಾಗುವುದು. ಈ ರೋಗ ನಿಯಂತ್ರಣಕ್ಕೆ ಅವಶ್ಯವಾದ ಔಷ ಧ ಸಲಕರಣೆ ಖರೀದಿಸಿದರೆ 1400 ರಿಂದ 1600 ರೂ. ಗಳವರೆಗೆ ಮೊತ್ತವನ್ನು ಇಲಾಖೆಯಿಂದ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು.

Advertisement

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸರಾಸರಿ ವಾಡಿಕೆ ಮಳೆ 674 ಮಿ.ಮೀ ಇದ್ದು ವಾಸ್ತವಿಕವಾಗಿ 847 ಮಿ.ಮೀ ಮಳೆಯಾಗುವ ಮೂಲಕ ಶೇ.26 ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಶೇ.89 ಮತ್ತು ಹಿಂಗಾರಿನಲ್ಲಿ ಶೇ.50.30 ಬಿತ್ತನೆಯಾಗಿದೆ. ಬಿತ್ತನೆ ಬೀಜಗಳ ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಇದೆ ಎಂದರು.

ಆಗ,ಅಧ್ಯಕ್ಷರು, ಜಿಲ್ಲೆಯಲ್ಲಿ ಕೃಷಿ ಹೊಂಡಗಳ ಅವಶ್ಯಕತೆ ಮತ್ತು ಬೇಡಿಕೆಯೂ ಹೆಚ್ಚಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದಾಗ, ಕೃಷಿ ಜಂಟಿ ನಿರ್ದೇಶಕರು, ಕೃಷಿ ಹೊಂಡಕ್ಕೆ ಸದ್ಯಕ್ಕೆ ಅನುದಾನ ಇಲ್ಲ. ಕೃಷಿ ಹೊಂಡ ಮಂಜೂರಾತಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಲಾಗಿದೆ ಎಂದರು.

ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿ ಇಬ್ರಾಹಿಂ ಮಾತನಾಡಿ, ಕೃಷಿ ಕಾರ್ಮಿಕರಿಗೆ ಕನಿಷ್ಟ ವೇತನ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಜಿಲ್ಲೆಯಲ್ಲಿ ಒಟ್ಟು 960 ತಪಾಸಣೆ ನಡೆಸಲಾಗಿದೆ.

ಇದುವರೆಗೆ 81 ಸಾವಿರ ಕಟ್ಟಡ ಕಾರ್ಮಿಕರು ಇಲಾಖೆಯಡಿ ನೋಂದಣಿ ಮಾಡಿಸಿಕೊಂಡು ಕಾರ್ಡ್‌ ಪಡೆದಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನವೆಂಬರ್‌ ಮಾಹೆಯಲ್ಲಿ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಜೂರಾದ ಧನಸಹಾಯದ ಮಾಹಿತಿ ನೀಡಿದರು.

ಅಂಗನವಾಡಿ, ಆಶಾ ಮತ್ತು ಬಿಸಿಯೂಟ ತಯಾರಿಸುವ ಕಾರ್ಯಕರ್ತೆಯರಿಗೆ ಪ್ರಧಾನಮಂತ್ರಿ ಮಾನ್‌ಧನ್‌ ಎಂಬ ಹೊಸ ವಿಮೆ ಯೋಜನೆ ಆರಂಭವಾಗಿದ್ದು, ಈ ಬಗ್ಗೆಯೂ ತಾಲೂಕು ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುವ
ಸಭೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್‌, ಜಿಲ್ಲೆಯಲ್ಲಿ ಅನೇಕ ಅಂಗನವಾಡಿ ಕಟ್ಟಡಗಳ ದುರಸ್ತಿ ಬಗ್ಗೆ ಏನು ಕ್ರಮ ವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್‌ರನ್ನು ಕೇಳಿದಾಗ, ಅವರು, ಪ್ರಸ್ತುತ ಅಂಗನವಾಡಿ ಕಟ್ಟಡ ಕಟ್ಟಲು ಎಸ್‌ಸಿಪಿ/ಟಿಎಸ್‌ಪಿ ಹೊರತಾಗಿ ಬೇರೆ ಅನುದಾನ ಇಲ್ಲ. ನಬಾರ್ಡ್‌ನಿಂದಲೂ ಅನುದಾನ ನಿಲ್ಲಿಸಲಾಗಿದೆ. ನರೇಗಾದಡಿಯಲ್ಲಿಯೂ ಹಲವೆಡೆ ಕಟ್ಟಡ ನಿರ್ಮಾಣ ಆಗುತ್ತಿಲ್ಲ. ಹಾಗಾಗಿ ಸರ್ಕಾರಕ್ಕೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಕೋರಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಪೋಷಣ್‌ ಅಭಿಯಾನ್‌ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಗರ್ಭಿಣಿಯರು, ಮಕ್ಕಳ ಆರೋಗ್ಯದ ಬಗ್ಗೆ ಎಲ್ಲ ರೀತಿಯ ದಾಖಲೆಗಳನ್ನು ಈ ಆ್ಯಪ್‌ನಲ್ಲಿ ಭರ್ತಿ ಮಾಡಿಬೇಕಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ತರಬೇತಿ ನೀಡಲಾಗುವುದು. ಈ ಉದ್ದೇಶಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಣಮಟ್ಟದ ಮೊಬೈಲ್‌ ನೀಡಲು ಟೆಂಡರ್‌ ಪ್ರಕ್ರಿಯೆಯಲ್ಲಿದೆ ಎಂದು ವಿಜಯಕುಮಾರ್‌ ಮಾಹಿತಿ ನೀಡಿದರು.

ನೆರೆಯಿಂದ ಹಾಳಾದ ರಸ್ತೆಗಳು ಮತ್ತು ಶಾಲಾ ಕೊಠಡಿಗಳ ದುರಸ್ತಿಗೆ ಪಿಆರ್‌ಇಡಿ, ಪಿಡಬ್ಲ್ಯೂಡಿ ಮತ್ತು ಶಾಲೆಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪಿಡಬ್ಲ್ಯೂಡಿ ಸಹಾಯಕ
ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ತಿಳಿಸಿದರು.

ವಯಸ್ಕರ ಶಿಕ್ಷಣಾ ಧಿಕಾರಿ ತಿಪ್ಪೇಶಪ್ಪ, ಈ ಬಾರಿ ಹೊನ್ನಾಳಿ ತಾಲ್ಲೂಕಿನ ತಿಮ್ಲಾಪುರ, ಮುಕ್ತೇನಹಳ್ಳಿ, ಅರಕೆರೆ, ಕಮ್ಮಾರಗಟ್ಟೆ, ಮಾಸಡಿ ಗ್ರಾ.ಪಂ. ವ್ಯಾಪ್ತಿಯ 21 ಗ್ರಾಮಗಳಲ್ಲಿ ವಯಸ್ಕರ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಭೆ ಮಾಹಿತಿ ನೀಡಿದರು.

ಆಗ, ಅಧ್ಯಕ್ಷೆ ಯಶೋಧಮ್ಮ ಹಾಗೂ ಸಾಮಾಜಿಕ ಸ್ಥಾಯಿ ಅಧ್ಯಕ್ಷ ಲೋಕೇಶ್‌, ವಯಸ್ಕರ ಶಿಕ್ಷಣ ನಡೆಯುತ್ತಿರುವುದು ಗಮನಕ್ಕೆ ಬಂದಿಲ್ಲ. ಶಿಕ್ಷಣ ನಡೆಯುವ ಸ್ಥಳಗಳ ಪಟ್ಟಿ ನೀಡಿ, ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದರು.

ಅಕ್ಷರ ದಾಸೋಹದಡಿ ಸರಬರಾಜಾಗುವ ಕೆಎಂಎಫ್‌ ಹಾಲಿನ ಪುಡಿಯ ಗುಣಮಟ್ಟ, ಅವಧಿ  ಇತ್ಯಾದಿಗಳನ್ನು ಪರಿವೀಕ್ಷಿಸಲು ಪ್ರತಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಜವಾಬ್ದಾರಿ ನೀಡಬೇಕು. ಒಟ್ಟು ಮಕ್ಕಳ ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆಯಲ್ಲಿನ ವ್ಯತ್ಯಾಸ ನೋಡಿಕೊಂಡು ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಪಡೆದು ಮುಂದಿನ ಕ್ರಮವನ್ನು ಡಿಡಿಪಿಐ ವಹಿಸಬೇಕೆಂದು ಅಧ್ಯಕ್ಷರು, ಸಿಇಓ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ಕೆಆರ್‌ಐಡಿಎಲ್‌, ನೀರಾವರಿ ಇಲಾಖೆ, ರೇಷ್ಮೆ, ಕೈಮಗ್ಗ,
ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪಶಪಾಲನಾ ಇಲಾಖೆ, ಸಹಕಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಪ್ರಗತಿ ಪರಿಶೀಲಿಸಿ ಆದಷ್ಟು ಶೀಘ್ರದಲ್ಲಿ ನಿಗದಿತ ಗುರಿ ಸಾಧಿಸುವಂತೆ ಅಧ್ಯಕ್ಷರು ಸೂಚಿಸಿದರು.

ಸಭೆಯಲ್ಲಿ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಜಿ.ಪಂ.ಉಪಕಾರ್ಯದರ್ಶಿ ಬಿ.ಆನಂದ್‌, ಮುಖ್ಯ ಯೋಜನಾ ಧಿಕಾರಿ ಎನ್‌.ಲೋಕೇಶ್‌, ಮುಖ್ಯ ಲೆಕ್ಕಾಧಿಕಾರಿ ಮಧು.ಡಿ.ಆರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next