ದಾವಣಗೆರೆ: ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಗುರುವಾರ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಕಾಂಗ್ರೆಸ್-ಜೆಡಿಎಸ್ ಮುಖಂಡರು, ಕುಟುಂಬ ಸದಸ್ಯರು, ಕಾರ್ಯಕರ್ತರೊಡಗೂಡಿ ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ಕೆಲವೇ ಗಂಟೆಗಳ ಮುನ್ನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಬೆಳಗ್ಗೆ ಹೊನ್ನಾಳಿಯಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ದಾವಣಗೆರೆಗೆ ಆಗಮಿಸಿದರು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಇತರ ಮುಖಂಡರೊಡನೆ ಮಾತುಕತೆ ನಡೆಸಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಪುನಾಃ ದುರ್ಗಾಂಬಿಕಾ ದೇವಸ್ಥಾನಕ್ಕೆ ವಾಪಸ್ಸಾದ ಅವರು ರೋಡ್ ಶೋನಲ್ಲಿ ಭಾಗವಹಿಸಿದರು. ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರೋಡ್ ಶೋಗೆ ಆಗಮಿಸುತ್ತಿದ್ದಂತೆ ಮುಖಂಡರು, ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತು. ತಮ್ಮ ನೆಚ್ಚಿನ ನಾಯಕನಿಗೆ ಜೈಕಾರ ಕೂಗಿದರು.
ರೋಡ್ ಶೋ: ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋಗೆ ಹರಿಹರ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕಿ ಜಲಜಾನಾಯ್ಕ, ಕೆಪಿಸಿಸಿ ಕಾರ್ಯದರ್ಶಿಗಳಾದ ಬಲ್ಕೀಶ್‌ಬಾನು, ಡಿ. ಬಸವರಾಜ್, ಸೈಯದ್ ಸೈಪುಲ್ಲಾ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಎಸ್. ಬಸವರಾಜ್, ಎಚ್.ಬಿ. ಪರಶುರಾಮಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಕಾರ್ಯಾಧ್ಯಕ್ಷ ಟಿ. ಗಣೇಶ್ ದಾಸಕರಿಯಪ್ಪ, ಎಸ್‌ಟಿ ವಿಭಾಗದ ರಾಜ್ಯ ಅಧ್ಯಕ್ಷ ಹೊದಿಗೆರೆ ರಮೇಶ್, ಎಚ್.ಸಿ. ಗುಡ್ಡಪ್ಪ, ಎಚ್.ಬಿ. ಮಂಜಪ್ಪ ಅವರ ಪತ್ನಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಲಕ್ಷ್ಮಿ ಮಂಜಪ್ಪ ಇತರರು ಸಾಥ್ ನೀಡಿದರು.
ಬಿರು ಬಿಸಿಲನ್ನೂ ಲೆಕ್ಕಿಸದೆ ರೋಡ್ ಶೋನಲ್ಲಿ ಪಾಲ್ಗೊಡಿದ್ದ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ, ಎಸ್. ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ, ಎಚ್ .ಬಿ. ಮಂಜಪ್ಪ ಪರ ಘೋಷಣೆ ಕೂಗಿದರು.
ಕಾಂಗ್ರೆಸ್-ಜೆಡಿಎಸ್ ಬಾವುಟಗಳು ಒಟ್ಟಿಗೆ ಹಾರಾಡಿದ್ದು ಮೈತ್ರಿ ಧರ್ಮದ ಸಂಕೇತವಾಗಿತ್ತು. ದುರ್ಗಾಂಬಿಕಾ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ ಖಡಕ್ ಷಾವಲಿ ದರ್ಗಾ, ತಳವಾರ ಕೇರಿ ರಸ್ತೆ, ಹೊಂಡದ ವೃತ್ತ, ಜಾಲಿನಗರ ಮುಖ್ಯ ರಸ್ತೆ, ಶಿವಾಲಿ ಚಿತ್ರಮಂದಿರ ರಸ್ತೆ, ಜಿಲ್ಲಾ ನ್ಯಾಯಾಲಯ ರಸ್ತೆ ಮೂಲಕ ಹಳೆ ಪಿಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ 3-4 ಕಿಲೋ ಮೀಟರ್ ದೂರ ಸಾಗಿ ಬಂದಿತು. ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಹೊದಿಗೆರೆ ರಮೇಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ ಅವರೊಂದಿಗೆ ಎಚ್.ಬಿ. ಮಂಜಪ್ಪ ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ನ ಕೆಲ ಮುಖಂಡರ ಗೈರು ಎದ್ದು ಕಾಣುತ್ತಿತ್ತು.