ದಾವಣಗೆರೆ: ಈ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಜನ ಬಲ ಮತ್ತು ದುಡ್ಡಿನ ಬಲದ ನಡುವಿನ ಚುನಾವಣೆಯಲ್ಲಿ ಕಾರ್ಯಕರ್ತರು, ಜನಬಲದ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಬುಧವಾರ ಸಂಜೆ ಎಂಸಿಸಿ ಬಿ ಬ್ಲಾಕ್ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ತಳ ಹಂತದಿಂದ ಕೆಲಸ ಮಾಡಿಕೊಂಡು ಬಂದಿರುವ ಎಚ್ .ಬಿ. ಮಂಜಪ್ಪ ಅವರಂತಹ ಒಳ್ಳೆಯ ಅಭ್ಯರ್ಥಿಯನ್ನೇ ಹೈಕಮಾಂಡ್ ಕೊಟ್ಟಿದೆ. ಜೆಡಿಎಸ್, ಸಿಪಿಐ ಪಕ್ಷದ ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್‌ನ ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಎಲ್ಲರೂ ಒಗ್ಗೂಡಿ ಮಂಜಪ್ಪ ಅವರನ್ನು ಗೆಲ್ಲಿಸುತ್ತೇವೆ ಎಂದರು.
ಎಚ್.ಬಿ. ಮಂಜಪ್ಪ ಹೊನ್ನಾಳಿ ಪಪಂ, ತಾಪಂ, ಸದಸ್ಯರಾಗಿ, ಅಧ್ಯಕ್ಷರಾಗಿದ್ದಾರೆ. ಜಿಪಂ ಸದಸ್ಯರಾಗಿ, ಅಧ್ಯಕ್ಷರೂ ಆಗಿದ್ದಾರೆ. ಈಗ ಲೋಕಸಭಾ ಸದಸ್ಯರಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಕ್ಷೇತ್ರದ ಪ್ರತಿ ಬೂತ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಚುನಾವಣೆಗೆ ಎಲ್ಲಾ ರೀತಿಯಲ್ಲಿ ಸಜ್ಜಾಗಿದ್ದಾರೆ. ಬೇರೆ ಪಕ್ಷ(ಬಿಜೆಪಿ)ದವರಂತೆ ಮನೆಗೆ ಹೋಗಿ ಕಾರ್ಯಕರ್ತರನ್ನು ಎಬ್ಬಿಸುವ ಪರಿಸ್ಥಿತಿ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ತಿಂಡಿ ತಿಂದು ಸಜ್ಜಾಗಿಯೇ ಇರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇವತ್ತು ಅಭ್ಯರ್ಥಿ ಫೈನಲ್ ಆಗಿದೆ. ಸಂಜೆಯಿಂದಲೇ ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಏನೇನೋ ಬೇಕೋ ಅದೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತೇವೆ. ಜೆಡಿಎಸ್ ನವರೊಂದಿಗೂ ಮಾತನಾಡುತ್ತೇವೆ. ಸಿಪಿಐನವರು, ರೈತ ಸಂಘದವರು ಬೆಂಬಲ ನೀಡುತ್ತಾರೆ. ಗುರುವಾರ ನಾಮಪತ್ರ ಸಲ್ಲಿಸಿದ ನಂತರ ಜೆಡಿಎಸ್‌ನವರು-ನಾವು ಜಂಟಿ ಸುದ್ದಿಗೋಷ್ಠಿ ಯನ್ನೂ ನಡೆಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಭ್ಯರ್ಥಿ ಎಚ್.ಬಿ. ಮಂಜಪ್ಪ, ಶಾಸಕ ಎಸ್. ರಾಮಪ್ಪ, ಪರಿಷತ್ ಸದಸ್ಯ ಕೊಂಡಜ್ಜಿ ಮೋಹನ್, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ವಡ್ನಾಳ್ ರಾಜಣ್ಣ, ಎಚ್.ಪಿ. ರಾಜೇಶ್, ಜಿಪಂ ಸದಸ್ಯ ಕೆ.ಎಸ್. ಬಸವರಾಜ್, ಮಹಾನಗರ ಪಾಲಿಕೆ ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಗೌಡ್ರ ರಾಜಶೇಖರಪ್ಪ, ಸೈಯದ್ ಸೈಪುಲ್ಲಾ, ಎಲ್.ಬಿ. ಭೈರೇಶ್, ಬಿ.ಎಚ್. ವೀರಭದ್ರಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.