Advertisement

ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ

11:55 AM Apr 11, 2019 | Naveen |

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ಒಳಗೊಂಡಂತೆ ರಾಜ್ಯದ 20
ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಎಸ್‌.ಕೆ.ಪಿ. ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ
ಸಮುದಾಯ ಭವನದಲ್ಲಿ ದಾವಣಗೆರೆ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ವಿಧಾನ ಸಭಾ ಚುನಾವಣೆಯಂತೆ ಅಲ್ಲ. ಕಾಲಾವಕಾಶವೂ ಕಡಿಮೆ ಇರುವುದು, ಕೊನೆ ಕ್ಷಣದಲ್ಲಿ ಎಚ್‌.ಬಿ. ಮಂಜಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಹಾಗಾಗಿ ಅವರ ಮೇಲೆ ಹೆಚ್ಚಿನ ಒತ್ತಡ ಹಾಕದೆ ನಾವೇ ಮಂಜಪ್ಪ ಎಂದು ಎಲ್ಲ ಕಾರ್ಯಕರ್ತರು ಮನೆ ಮನೆಗೆ
ತೆರಳಿ, ರಾಹುಲ್‌ ಗಾಂಧಿ ಅಧಿಕಾರಕ್ಕೆ ಬಂದ ಮೇಲೆ ಮಾಡುವ ಕೆಲಸಗಳ
ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಮಂಜಪ್ಪ ಅವರನ್ನು
ಗೆಲ್ಲಿಸಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಸಾಮಾಜಿಕ ನ್ಯಾಯ, ಎಲ್ಲರಿಗೂ ಸಮಾನತೆ ದೊರೆಯಬೇಕು
ಎನ್ನುವ ಪಕ್ಷ. ರಾಹುಲ್‌ ಗಾಂಧಿ ಪ್ರಧಾನಿ ಆಗುವುದು ನಿಶ್ಚಿತ. ರಾಹುಲ್‌ಗಾಂಧಿ
ಅಧಿಕಾರಕ್ಕೆ ಬಂದ ಮೇಲೆ ದೇಶದ ಶೇ.20 ರಷ್ಟು ಕಡು ಬಡತನದ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ಆದಾಯ ನೀಡುವ ಐತಿಹಾಸಿಕ ಕ್ರಾಂತಿಕಾರಕ ತೀರ್ಮಾನ ಜಾರಿಯ ಭರವಸೆ ನೀಡಿದ್ದಾರೆ.
ಅವರು ಹೇಳಿದ್ದನ್ನು ಮಾಡುವಂತಹವರು.

ನರೇಂದ್ರ ಮೋದಿ ಅವರಂತೆ ಬರೀ ಸುಳ್ಳು ಹೇಳುವರು ಅಲ್ಲ ಎಂದರು.
ನರೇಂದ್ರ ಮೋದಿ ಅವರು ಎಲ್ಲೇ ಪ್ರಚಾರ ಮಾಡಲಿ ತಮ್ಮ ಸರ್ಕಾರದ
ಸಾಧನೆಯ ಬಗ್ಗೆ ಹೇಳಿಕೊಳ್ಳುವುದೇ ಇಲ್ಲ. ಐದು ವರ್ಷದಲ್ಲಿ ಏನಾದರೂ
ಮಾಡಿದ್ದಾರೆ ತಾನೆ ಹೇಳಿಕೊಳ್ಳಲಿಕ್ಕೆ ಇರುವುದು. ಒಬ್ಬರಿಗೊಬ್ಬರು ಒಬ್ಬರು
ಒಂದಾಗಿ ದೇಶದ ರಕ್ಷಣೆ ಕೆಲಸವನ್ನ ಬದ್ದತೆಯಿಂದ ಮಾಡಬೇಕು. ಎಚ್‌
.ಬಿ. ಮಂಜಪ್ಪ ಅವರನ್ನ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ
ಮಾಡಿದರು.

Advertisement

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ
ಅವರು ದಿನಕ್ಕೊಂದು ಸುಳ್ಳು ಹೇಳುತ್ತಾ ಇದ್ದಾರೆ. ವೈರತ್ವದಿಂದ ಐಟಿ, ಸಿಬಿಐ
ದಾಳಿ ನಡೆಸುತ್ತಿದ್ದಾರೆ. ಏನು ಸಿಗಲಿ, ಬಿಡಲಿ ಕೆಟ್ಟ ಅಭಿಪ್ರಾಯ ಬರುವಂತೆ
ಕರ್ನಾಟಕ, ಆಂಧ್ರ, ಮಧ್ಯಪ್ರದೇಶಗಳಲ್ಲಿ ಐಟಿ ದಾಳಿಯಂತಹ ಹೊಲಸು ಕೆಲಸ ಮಾಡಿಸುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರನ್ನು
ಕಣಕ್ಕಿಳಿಸಲಾಗಿದೆ. ಒಬ್ಬೊಬ್ಬರು ಒಂದು ಸಾವಿರದಷ್ಟು ಮತಗಳನ್ನ ಹಾಕಿಸಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ 1 ಲಕ್ಷ ಮತಗಳ ಲೀಡ್‌ ಕೊಡಿಸುವ ಜೊತೆಗೆ ಮಂಜಪ್ಪ ಅವರನ್ನ ಗೆಲ್ಲಿಸುತ್ತೇವೆ. ಮಂಜಪ್ಪ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌. ಕೆ. ರಾಮಚಂದ್ರಪ್ಪ ಮಾತನಾಡಿ,
ಕೋಮುವಾದಿ, ಮನುವಾದಿಗಳು, ಸುಳ್ಳು ಸೋಲಬೇಕು. ಸತ್ಯ ಗೆದ್ದು ಪ್ರಜಾಪ್ರಭುತ್ವ ಉಳಿಯಬೇಕು ಎಂಬ ಕಾರಣಕ್ಕೆ ಸಿಪಿಐ ಬೇಷರತ್‌ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಕಳೆದ 26
ವರ್ಷದ ಹಿಂದೆ ದಾವಣಗೆರೆ ಲೋಕಸಭಾ ಕ್ಷೇತ್ರ ಹಾಲುಮತದವರ ಕೈಯಲ್ಲಿ
ಇತ್ತು. 2019 ರ ಚುನಾವಣೆಯಲ್ಲಿ ಆ ಇತಿಹಾಸ ಮರುಕಳಿಸಲಿದೆ. ದೋಸೆ
ತಿರುವಿ ಹಾಕಿದಂತೆ… ಈ ಬಾರಿ ಕ್ಷೇತ್ರದ ಫಲಿತಾಂಶದಲ್ಲಿ ಬದಲಾವಣೆ ಮಾಡಲು ಜನರು ನಿರ್ಧರಿಸಿದ್ದಾರೆ. ಕಾಂಗ್ರೆಸ್‌- ಜೆಡಿಎಸ್‌ ಮತ್ತು ಸಿಪಿಐ ಮತಗಳು ಒಟ್ಟುಗೂಡಿಸಿದರೆ ಮಂಜಪ್ಪ ಗೆಲುವು ನಿಶ್ಚಿತ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ
ಬಲ್ಕೀ ಶ್‌ ಬಾನು, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಸೈಯದ್‌ ಸೈಪುಲ್ಲಾ, ಬಿ.ಎಚ್‌. ವೀರಭದ್ರಪ್ಪ, ಡಾ| ಸಿ.ಆರ್‌. ನಸೀರ್‌ ಅಹಮ್ಮದ್‌, ಸಾಧಿಕ್‌ ಪೈಲ್ವಾನ್‌, ಕೆಂಗೋ ಹನುಮಂತಪ್ಪ, ಶಾಮನೂರು ಟಿ. ಬಸವರಾಜ್‌, ಎಸ್‌. ಮಲ್ಲಿಕಾರ್ಜುನ್‌, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಟಿ. ಗಣೇಶ್‌
ದಾಸಕರಿಯಪ್ಪ, ಅನೀಸ್‌ ಪಾಷಾ, ಜಸ್ಟಿನ್‌ ಜಯಕುಮಾರ್‌ ಇತರರು ಇದ್ದರು.
ಮಹಾನಗರ ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ ಪ್ರಾಸ್ತಾವಿಕ ಮಾತುಗಳಾಡಿದರು. ಅಯೂಬ್‌ ಪೈಲ್ವಾನ್‌ ಸ್ವಾಗತಿಸಿದರು.

ಸುಳ್ಳಿನ ನಿಸ್ಸೀಮರು
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.
ಬಿಜೆಪಿಯವರಂತೆ ಸುಳ್ಳು ಹೇಳುವವರು ಈ ದೇಶದಲ್ಲಿ
ಯಾರೂ ಸಿಗುವುದೇ ಇಲ್ಲ. ಜನರಿಗೆ ಎಷ್ಟು ಚೆನ್ನಾಗಿ ಮೋಸ
ಮಾಡಬೇಕೋ ಅಷ್ಟು ಚೆನ್ನಾಗಿ ಮೋಸ ಮಾಡುತ್ತಿದ್ದಾರೆ. ಬಿಜೆಪಿ ಬರೀ ಸುಳ್ಳು ಭರವಸೆ ನೀಡಿದೆ. ವ್ಯಾಪಾರಸ್ಥರನ್ನು ಜಿಎಸ್‌ಟಿ ಮೂಲಕ ಸುಲಿಗೆ
ಮಾಡಲಾಗುತ್ತಿದೆ. ಜಿಎಸ್‌ಟಿಯನ್ನ ಕಡಿಮೆ ಮಾಡಲಿಕ್ಕೆ ಮೋದಿ
ಒಪ್ಪಲಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ದೂರಿದರು.

ಒಳ್ಳೆಯ ಹೃದಯ ಬೇಕಲ್ಲವೇ
ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ವಿದೇಶಿಗಳಲ್ಲಿನ ಕಪ್ಪು ಹಣ ತಂದು ಪ್ರತಿ ಕುಟುಂಬದ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವುದಾಗಿ
ಹೇಳಿದ್ದರು. ಅದು ಎಲ್ಲವೂ ಸುಳ್ಳು. ಬರೀ 56 ಇಂಚು ಇದ್ದರೆ ಸಾಲದು
ಅದರಲ್ಲಿ ಒಳ್ಳೆಯ ಹೃದಯ ಇರಬೇಕಲ್ಲವೇ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next