Advertisement

ಸಾಧಿಸುವ ಛಲದೊಂದಿಗೆ ಯಶಸ್ವಿ ಜೀವನ ನಡೆಸಿ: ಗೀತಾ

05:20 PM Mar 14, 2020 | Team Udayavani |

ದಾವಣಗೆರೆ: ಮಹಿಳೆಯರು ತುಳಿತ, ದೌರ್ಜನ್ಯ ಎಲ್ಲವನ್ನೂ ಮೆಟ್ಟಿ ನಿಲುವ ಮೂಲಕ ತಾನು ಸದಾ ಸಬಲೆ ಎಂಬುದನ್ನ ಜಗತ್ತಿಗೆ ತೋರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ತಿಳಿಸಿದ್ದಾರೆ.

Advertisement

ಎಸ್‌.ಬಿ.ಸಿ. ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಅಂತಃಸತ್ವ ಹೆಚ್ಚು. ನಿರ್ದಿಷ್ಟ ಗುರಿ, ಸಾಧಿಸುವ ಛಲ ಇಟ್ಟುಕೊಂಡು ಯಶಸ್ವಿ ಜೀವನ ನಡೆಸಬೇಕು ಎಂದರು.

ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿ ತುಳಿತ ಇದ್ದೇ ಇರುತ್ತದೆ. ಅದು ಯಾವುದಕ್ಕೂ ಅಂಜದೆ, ಕುಗ್ಗದೆ ಧೈರ್ಯದಿಂದ ಎಲ್ಲವನ್ನೂ ಮೆಟ್ಟಿ ನಿಲ್ಲಬೇಕು. ಮಹಿಳೆಯರು ಯಾರ ಸಹಾಯವೂ ಇಲ್ಲದೆ ಜೀವನ ಸಾಗಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗಾಗಿ ಮಹಿಳೆ ಸ್ವಯಂ ಪರಿಪೂರ್ಣಳು ಎಂದು ಬಣ್ಣಿಸಿದರು.

ಮಹಿಳೆಯರು ಜೀವನದಲ್ಲಿ ಏನನ್ನಾದರೂ ಸಾಧಿಸುವ ಗುರಿ ಮತ್ತು ಛಲ ಹೊಂದಿರಬೇಕು. ಅಕ್ಕಮಹಾದೇವಿ ಅಂತಹ ಸಾಧನೆಯ ಗುರಿ ಮತ್ತು ಛಲದಿಂದಲೇ ಜೀವನದಲ್ಲಿ ಹೋರಾಟ ಮಾಡಿ ನಮಗೆ ದಾರಿದೀಪವಾಗಿ ಇದ್ದಾರೆ. ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು. ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್‌ ಬಳಕೆ ಅನಿವಾರ್ಯ. ಆದರೆ, ಯಾವುದೂ ಸಹ ಅತಿ ಆಗಬಾರದು. ಮೊಬೈಲ್‌ ನಿಮಗೆ ಗುಲಾಮರಾಗಬೇಕೇ ಹೊರತು ವಿದ್ಯಾರ್ಥಿನಿಯರೇ ಮೊಬೈಲ್‌ಗೆ ಗುಲಾಮರಾಗಬಾರದು. ವಾಟ್ಸಪ್‌, ಫೇಸ್‌ ಬುಕ್‌ ದಾಸರಾಗಬಾರದು. ತಂದೆ-ತಾಯಿ, ಶಿಕ್ಷಕರು ಹೇಳಿದ್ದನ್ನು ಕೇಳುವುದು ಮಾತ್ರವಲ್ಲ ಪಾಲನೆ ಮಾಡಬೇಕು. ವಿದ್ಯಾರ್ಥಿನಿಯರೇ ತಮಗೊಂದು ಚೌಕಟ್ಟು ಹಾಕಿಕೊಂಡು ಅದನ್ನು ಮೀರಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್‌. ನಾಗಶ್ರೀ ಮಾತನಾಡಿ, ವಿದ್ಯಾರ್ಥಿನಿಯರು ಹೆಚ್ಚಿನ ಅಂಕ ಗಳಿಸುವ ಜತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧಕರಾಗಬೇಕು. ಈಚೆಗೆ ಮೊಬೈಲ್‌, ಕಂಪ್ಯೂಟರ್‌ ಬಳಕೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿನಿಯರು ಅಪರಿಚಿತರನ್ನ ಗೆಳೆಯರನ್ನಾಗಿ ಮಾಡಿಕೊಳ್ಳಬಾರದು. ಸದಾ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ಹಿಂದೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಇರಲಿಲ್ಲ. ಈಗ ಎಲ್ಲರೂ ಸಾಕಷ್ಟು ಪ್ರೋತ್ಸಾಹ, ಉತ್ತೇಜನ ನೀಡುವುದನ್ನು ಚೆನ್ನಾಗಿ ಬಳಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಮಹಿಳೆಯರು ಹೆಚ್ಚು ವಿದ್ಯಾವಂತರಾಗುವ ಮೂಲಕ ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಬೇಕು ಎಂದು ತಿಳಿಸಿದರು. ಪ್ರಾಚಾರ್ಯ ಡಾ| ಕೆ.ಷಣ್ಮುಖ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next