Advertisement
ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳ ಮುನ್ನವೇ ಬಿಟ್ಟು ಬಿಡದೆ ಕಾಡಿದ ಮಳೆಯ ಕಾಟಕ್ಕೆ ಅನೇಕ ಕಡೆ ಹಬ್ಬದ ಸಂಭ್ರಮವೇ ಕಂಡು ಬರುತ್ತಿಲ್ಲ. ಮಳೆಯ ಕೊರತೆ ಜಲಾಶಯದಲ್ಲಿ ನೀರಿದ್ದರೂ ನಾಲೆಯಲ್ಲಿ ನೀರು ಹರಿಸಲು ಮೀನಮೇಷ ಎಣಿಸಿ ಕೊನೆಗೆ ಬಿಟ್ಟ ನೀರಿನ ಆಶ್ರಯದಲ್ಲಿ ಬೆಳೆದಂತಹ ಭತ್ತ… ಕಳೆದ ಭಾನುವಾರದ ಮಳೆಗೆ ಮಕಾಡೆ ಮಲಗಿದೆ. ಗ್ರಾಮೀಣ ಭಾಷೆಯಲ್ಲಿ ಹೇಳುವಂತೆ ಭತ್ತ ಚಾಪೆ… ಹಾಸಿದೆ. ಇನ್ನೇನು ಭತ್ತ ಕೈಗೆ ಬಂದಿತು ಎನ್ನುವಷ್ಟರಲ್ಲೇ ಕೈಗೂ ಸಿಗದಂತೆ ಭತ್ತ ಹಾಳಾಗಿದೆ.
Related Articles
Advertisement
ಮಳೆಯ ಹೊಡೆತದ ಜತೆಗೆ ಅಕ್ಕಿ, ಬೇಳೆ, ಎಣ್ಣೆ, ಬೆಲ್ಲ, ಸಕ್ಕರೆ, ಹಿಟ್ಟು, ತೆಂಗಿನಕಾಯಿ… ಹೀಗೆ ಪ್ರತಿಯೊಂದು ವಸ್ತುಗಳ ಬೆಲೆ ಎಲ್ಲಾ ಹಬ್ಬಕ್ಕಿಂತಲೂ ದುಬಾರಿ ಆಗಿವೆ. ಒಂದು ಕೆಜಿ ಜೋಳಕ್ಕೆ 50 ರೂ. ಆಸುಪಾಸು ಇದೆ. ಅಕ್ಕಿಗಿಂತಲೂ ಜೋಳದ ರೇಟೇ ಜಾಸ್ತಿ ಇದೆ ಎಂದರೆ ವಸ್ತುಗಳ ಬೆಲೆಯ ಬಗ್ಗೆ ಹೇಳುವಂತೆಯೇ ಇಲ್ಲ. ಆದರೂ, ಇರುವುದರಲ್ಲಿ ಹಬ್ಬ ಮಾಡಬೇಕು.. ಎನ್ನುವುದು ಅನೇಕರ ಮಾತು.
ಸಮಸ್ಯೆಗಳ ನಡುವೆಯೂ ಜನರು ಬೆಳಕಿನ ಹಬ್ಬ ದೀಪಾವಳಿಗೆ ಸಜ್ಜಾಗಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ದಾವಣಗೆರೆಯ ಮಾರುಕಟ್ಟೆ ಗರಿಗೆದರುತ್ತಿದೆ. ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಒಂದು ಕಡೆ ಹೂವು-ಹಣ್ಣು ಇತರೆ ವ್ಯಾಪಾರ ನಡೆಯುತ್ತಿದ್ದರೆ ಇನ್ನೊಂದು ಕಡೆ ಪಟಾಕಿ ಅಂಗಡಿಗಳು ಪ್ರಾರಂಭವಾಗಿವೆ. ಲಕ್ಷ್ಮೀ ಪೂಜೆಗಾಗಿ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣಗಳಲ್ಲಿ ಸಿದ್ಧತೆ ನಡೆಯುತ್ತಿದೆ.
ನ.12ರಂದು ನಡೆಯುವ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೇ ದೀಪಾವಳಿ ಬಂದಿರುವುದು ಆಕಾಂಕ್ಷಿಗಳಿಗೆ ಒಳ್ಳೆಯ ಸುಮುಹೂರ್ತ ಎನ್ನಬಹುದು. ಹಬ್ಬದ ಶುಭ ಕೋರುವ ಜತೆಗೆ ಮತ ಯಾಚನೆಗೂ ಅವಕಾಶ ಇದೆ. ಕೆಲವರು ಮತಗಳ ಖಾತ್ರಿಗಾಗಿ ಹಬ್ಬವನ್ನೆ ಸರಿಯಾಗಿ ಬಳಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಂಡಿರುವುದು ಉಂಟು.
ಮೊದಲ ದಿನ ನರಕ ಚತುದರ್ಶಿ, ಎರಡನೇ ಲಕ್ಷ್ಮಿ ಪೂಜೆ, ಮೂರನೇ ಬಲಿಪಾಡ್ಯಮಿ, ಹಟ್ಟಿ ಲಕ್ಕಮ್ಮ, ಹಿರಿಯರ ಹಬ್ಬ… ಒಟ್ಟಾರೆಯಾಗಿ ದಾವಣಗೆರೆ ಜನರು ಬೆಳಕಿನ ಹಬ್ಬ ದೀಪಾವಳಿಗೆ ಸಜ್ಜಾಗಿದ್ದಾರೆ.