Advertisement

ತಂತ್ರಜ್ಞರಿಗೆ ಕಾಡುತ್ತಿದೆ ವೈಫಲ್ಯದ ಭಯ

03:02 PM Sep 01, 2019 | Naveen |

ದಾವಣಗೆರೆ: ದೇಶದ ತಂತ್ರಜ್ಞರಿಗೆ ವೈಫ‌ಲ್ಯದ ಬಗ್ಗೆ ಭಯ ಇದೆ. ವಿಫ‌ಲರಾದರೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಜಿಕೆ ಇದೆ. ಇಂಥ ಮನೋಭಾವ ದೇಶದ ಆವಿಷ್ಕಾರಗಳಿಗೆ ಇರುವ ಅಡಚಣೆಗಳಾಗಿವೆ ಎಂದು ನವದೆಹಲಿಯ ಡಿಆರ್‌ಡಿಒ ಸಂಸ್ಥೆ ಜೀವ ವಿಜ್ಞಾನ ವಿಭಾಗದ ಮಹಾ ನಿರ್ದೇಶಕ ಡಾ| ಎ.ಕೆ.ಸಿಂಗ್‌ ವಿಷಾದಿಸಿದ್ದಾರೆ.

Advertisement

ನಗರದ ಜಿಎಂಐಟಿ ಕಾಲೇಜಿನಲ್ಲಿ ಶನಿವಾರ 15ನೇ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಶತಮಾನ ಭಾರತದ್ದಾಗಿದೆ. ಭಾರತೀಯರಲ್ಲಿ ಉತ್ತಮ ಸಾಮರ್ಥ್ಯ, ಚೈತನ್ಯವಿದೆ. ಇದರ ಜತೆಗೆ ನಮ್ಮ ಹಿರಿಯರಿಂದ ಬಂದಿರುವ ಮೌಲ್ಯಗಳಿವೆ. ಇಷ್ಟೆಲ್ಲ ಇರುವಾಗ ಜಾಗತಿಕ ಆರ್ಥಿಕತೆಯಲ್ಲಿ ನಮ್ಮ ಸ್ಥಾನ ಪಡೆದುಕೊಳ್ಳಲು ಶ್ರಮಿಸೋಣ ಎಂದರು.

ನಮ್ಮಿಂದ ಆಗದು ಎಂಬ ಮನಃಸ್ಥಿತಿಯನ್ನು ಬದಲಿಸಿಕೊಂಡರೆ ಅತ್ಯುತ್ತಮ ಆವಿಷ್ಕಾರಗಳನ್ನು ಮಾಡಲು ಸಾಧ್ಯ. ದೇಶದ ಪ್ರಗತಿಗೆ ಆವಿಷ್ಕಾರಗಳು ಬಹಳ ಮುಖ್ಯ. ಸತತ ಪ್ರಯತ್ನದ ಫ‌ಲವಾಗಿ ಸಿಂಗಾಪುರ, ಫಿನ್‌ಲೆಂಡ್‌, ದಕ್ಷಿಣ ಕೊರಿಯ, ಇಸ್ರೇಲ್ನಂಥ ದೇಶಗಳು ಆವಿಷ್ಕಾರದ ಚಾಂಪಿಯನ್‌ಗಳೆನಿಸಿವೆ.

ಈ ದೇಶಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಾಗಿವೆ. ಬಂಡವಾಳ ಹೂಡಿಕೆ ಅಧಿಕವಾಗಿದೆ. ಉದ್ಯಮಶೀಲತೆಯು ಬೆಳೆದಿದೆ ಎಂದು ತಿಳಿಸಿದರು.

ನಿರಂತರ ಕಲಿಕೆ ಇಂದಿನ ಅಗತ್ಯವಾಗಿದೆ. ನಿಮ್ಮ ಕೌಶಲ ಮತ್ತು ಕಾರ್ಯಕ್ಷಮತೆ ಸುಧಾರಿಸಿಕೊಳ್ಳಿ. ನಾಯಕತ್ವದ ಗುಣ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

Advertisement

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪದವಿ ಪೂರೈಸಿದ ಬಳಿಕ ಉದ್ಯೋಗ ಪಡೆಯುವುದಷ್ಟೇ ಮುಖ್ಯವಾಗಬಾರದು. ಬದುಕಿನಲ್ಲಿ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂಜಿನಿಯರುಗಳು ದೇಶ ಕಟ್ಟುವ ಕೆಲಸ ಮಾಡುತ್ತಾರೆ. ದೇಶಸೇವೆಯ ಮನೋಭಾವದಿಂದ ದುಡಿಯಬೇಕು. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಬೇಕು. ಒಳ್ಳೆಯ ನಡತೆಯಿಂದ ಎತ್ತರಕ್ಕೆ ಏರಬೇಕು ಎಂದು ಹೇಳಿದರು.

ಶ್ರೀಶೈಲ ಎಜ್ಯುಕೇಶನಲ್ ಟ್ರಸ್ಟ್‌ನ ಚೇರ್ಮನ್‌ ಜಿ.ಎಂ. ಪ್ರಸನ್ನ ಕುಮಾರ್‌, ಆಡಳಿತ ಮಂಡಳಿ ಸದಸ್ಯ ಡಾ| ಕೆ. ದಿವ್ಯಾನಂದ, ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ಪ್ರಾಂಶುಪಾಲ ಡಾ.ವೈ. ವಿಜಯಕುಮಾರ್‌, ನಿಕಟಪೂರ್ವ ಪ್ರಾಂಶುಪಾಲ ಡಾ.ಪಿ. ಪ್ರಕಾಶ್‌, ಉಪ ಪ್ರಾಂಶುಪಾಲ ಡಾ.ಬಿ.ಆರ್‌. ಶ್ರೀಧರ್‌, ಎಂಬಿಎ ಪ್ರೋಗ್ರಾಂ ನಿರ್ದೇಶಕ ಪ್ರೊ.ಬಿ. ಬಕ್ಕಪ್ಪ, ಶೈಕ್ಷಣಿಕ ಡೀನ್‌ ಡಾ.ಬಿ.ಎಸ್‌. ಸುನೀಲಕುಮಾರ್‌, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಚ್. ಗುರುಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next