Advertisement

ಸಮವಸ್ತ್ರ -ಸುರಕ್ಷಾ ಪರಿಕರ ಬಳಕೆ ಕಡ್ಡಾಯ

12:20 PM Jan 11, 2020 | Naveen |

ದಾವಣಗೆರೆ: ಪೌರಕಾರ್ಮಿಕರು ಸಮವಸ್ತ್ರ ಮತ್ತು ಸುರಕ್ಷಾ ಪರಿಕರಗಳನ್ನು ಬಳಸದೇ ಕೆಲಸ ಮಾಡುವುದು ಕಂಡು ಬಂದರೆ ಅಂತಹವರನ್ನು ಸ್ಥಳದಲ್ಲೇ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.

Advertisement

ಶುಕ್ರವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಅಧಿ ನಿಯಮ-2019ರ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನೀಡಲಾಗಿರುವ ಸುರಕ್ಷತಾ ಪರಿಕರಗಳಾದ ಗಂಬೂಟ್ಸ್‌, ಹ್ಯಾಂಡ್‌ಗ್ಲೌಸ್‌ ಗಳನ್ನು ಕಡ್ಡಾಯವಾಗಿ ಬಳಸಬೇಕು. ಅವರ ಆರೋಗ್ಯ ಹಿತದೃಷ್ಟಿಯಿಂದ ಅವುಗಳನ್ನು ಉಪಯೋಗಿಸಬೇಕು. ಪರಿಕರಗಳನ್ನು ಬಳಸದೇ ಸ್ವಚ್ಛತೆ ಕೆಲಸ ಮಾಡುತ್ತಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಗೊಳಿಸಲಾಗುವುದು. ಇದಕ್ಕೆ ಯಾರೂ ವಿರೋಧ ಮಾಡುವಂತಿಲ್ಲ ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ ಸಮೀಕ್ಷೆ ನಡೆಯುತ್ತಿದ್ದು, ಒಟ್ಟು ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ಗಳ ಪಟ್ಟಿಯನ್ನು ಜ.16ರೊಳಗೆ ತಮ್ಮ ಕಚೇರಿಗೆ ತಲುಪಿಸಬೇಕೆಂದು ತಾಲೂಕು ಸ್ಥಳೀಯ ಸಂಸ್ಥೆಗಳ ಅಧಿ ಕಾರಿಗಳಿಗೆ ಅವರು ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್‌ ಮಾತನಾಡಿ, ಈವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 156 ಕುಟುಂಬಗಳಿಗೆ ಸ್ವಯಂ ಘೋಷಣೆಯೊಂದಿಗೆ ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ ಗುರುತಿನ ಚೀಟಿ ನೀಡಲಾಗಿದೆ. ಪಾಲಿಕೆಯಿಂದ ಮ್ಯಾನ್ಯುವೆಲ್‌ ಘೋವೆಂಜರ್ ವಿಶೇಷ ಮರು ಸಮೀಕ್ಷೆ ಕೈಗೊಳ್ಳಲಾಗಿದೆ. ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ ಸ್ವ-ಉದ್ಯೋಗಕ್ಕಾಗಿ ಪಾಲಿಕೆ 25 ಲಕ್ಷ ರೂ. ಮೀಸಲಿಟ್ಟಿದೆ. ಸಮೀಕ್ಷೆಯಂತೆ ನಗರದಲ್ಲಿ ಯಾವುದೇ ಇನ್‌ಸ್ಯಾನಿಟರಿ ಲೆಟ್ರಿನ್‌ಗಳು (ತೆರೆದ ಮಲ ಗುಂಡಿ) ಇಲ್ಲ ಎಂದು ತಿಳಿಸಿದರು.

ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ ಸಮಿತಿ ಸದಸ್ಯ ವಾಸುದೇವ ಮಾತನಾಡಿ, ಪಾಲಿಕೆ ನೀಡಿರುವ ಗುರುತಿನ ಚೀಟಿಯಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಈಗ ಗುರುತಿಸಿರುವ 150
ಕುಟುಂಬದಲ್ಲಿ ಕನಿಷ್ಠ ಒಬ್ಬರಿಗಾದರೂ ಪಾಲಿಕೆಯಲ್ಲಿ ಟೆಂಡರ್‌ ಆಧಾರದ ಮೇಲೆ ಕೆಲಸ ಕೊಡಿಸಬೇಕು. ಟೆಂಡರುದಾರರ ಟೆಂಡರ್‌ ಅವಧಿ ಈಗಾಗಲೇ ಮುಗಿದಿದ್ದು, ಮುಂದಿನ ಟೆಂಡರ್‌ ಕರೆಯಬೇಕು ಎಂದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಈಗಾಗಲೇ ಟೆಂಡರ್‌ ಅವಧಿ ಮುಗಿದಿದ್ದರೆ. ಹೊಸ ಟೆಂಡರ್‌ ಕರೆಯಬೇಕು ಮತ್ತು ಮಧ್ಯದಲ್ಲಿ ಯಾರಾದರೂ ಟೆಂಡರ್‌ ವಾಪಸ್‌ ತೆಗೆದುಕೊಂಡರೆ ಅಂತಹ ಟೆಂಡರ್‌ದಾರರನ್ನು ಬ್ಲಾಕ್‌ ಲಿಸ್ಟ್‌ ಮಾಡುವಂತೆ ಸೂಚಿಸಿದರು.
ಡಿಸ್ಟಿಕ್‌ ವಿಜೆಲೆನ್ಸ್‌ ಕಮಿಟಿ ಸದಸ್ಯ ಬಾಬಣ್ಣ ಮಾತನಾಡಿ, ಎನ್‌ಎಸ್‌ಕೆಎಫ್‌ಡಿಸಿ ಅರ್ಜಿಗಳನ್ನು ದೆಹಲಿಗೆ ಕಳುಹಿಸಿಕೊಡುವ ಕೊನೆಯ ದಿನಾಂಕ ತಿಳಿಸಬೇಕು. ಆಯ-ವ್ಯಯ ತಯಾರಿಸುವ ಸಂದರ್ಭದಲ್ಲಿ ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ಸ್ ಗಾಗಿ ಅನುದಾನ ಮೀಸಲಿಡಬೇಕಲ್ಲದೆ, ನಿಟ್ಟುವಳ್ಳಿಯ ಎ.ಕೆ. ಕಾಲೋನಿಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಿರುವುದರಿಂದ ಹೆಲ್ತ್‌ ಕ್ಯಾಂಪ್‌ ಆಯೋಜಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನ್ಯುವೆಲ್‌ ಸ್ಕ್ಯಾವೆಂಜರ್ ಸಮೀಕ್ಷೆ ನಡೆಸಬೇಕು ಎಂದರು.

Advertisement

ಆಗ, ಜಿಲ್ಲಾ ಧಿಕಾರಿಗಳು, ಜ.26 ರೊಳಗೆ ನಿಟ್ಟುವಳ್ಳಿಯ ಎ.ಕೆ. ಕಾಲೋನಿಯಲ್ಲಿ ಹೆಲ್ತ್‌ ಕ್ಯಾಂಪ್‌ ಆಯೋಜಿಸಿ, ಆ ಭಾಗದ ಜನರ ಆರೊಗ್ಯ ತಪಾಸಣೆ ನಡೆಸುವಂತೆ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿಗೆ ಸೂಚಿಸಿದರು. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವತಿಯಿಂದ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸಲು ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಉಪ ಆಯುಕ್ತ ಗದುಗೇಶ್‌ ಸಿರ್ಸಿ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾ ಧಿಕಾರಿ ಡಾ| ರಾಘವೇಂದ್ರ ಸ್ವಾಮಿ, ಸಪಾಯಿ ಕಾರ್ಮಚಾರಿ ಸಂಘದ ರಾಜ್ಯ ಸಮಿತಿಯ ಸಂಚಾಲಕ ಬಾಬುಲಾಲ್‌, ತಾಪಂ
ಕಾರ್ಯನಿರ್ವಹಣಾಧಿಕಾರಿ ದಾರುಕೇಶ್‌, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ದಾವಣಗೆರೆ ಸಫಾಯಿ ಕಾರ್ಮಚಾರಿ ಸಮಿತಿಯ ನೀಲಗಿರಿಯಪ್ಪ, ಮಂಜಮ್ಮ, ಗಂಗಮ್ಮ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next