Advertisement

ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ

01:10 PM Dec 05, 2019 | Naveen |

ದಾವಣಗೆರೆ: ದಾವಣಗೆರೆಯಲ್ಲಿರುವ ಒಂದೇ ಕುಟುಂಬದ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

Advertisement

ಬುಧವಾರ, ದಾವಣಗೆರೆ ದಕ್ಷಿಣ ವಿಧಾನಸಭಾ ಬಿಜೆಪಿ ಘಟಕ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ಕ್ಷೇತ್ರದ ನೂತನ ಅಧ್ಯಕ್ಷರ ಪದಗ್ರಹಣ, ಮಹಾನಗರ ಪಾಲಿಕೆ ನೂತನ ಸದಸ್ಯರು-ಪರಾಜಿತ ಅಭ್ಯರ್ಥಿಗಳಿಗೆ ಸನ್ಮಾನ ಹಾಗೂ ಮತದಾರರು-ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ 8ರಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದೇವೆ. ಮುಂದೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಇಲ್ಲಿನ ಒಂದೇ ಕುಟುಂಬದ ರಾಜಕಾರಣ ಕೊನೆಗೊಳಿಸಬೇಕಿದೆ ಎಂದರು.

ರಾಷ್ಟ್ರ, ರಾಜ್ಯದಂತೆ ಬಿಜೆಪಿ ದಾವಣಗೆರೆ ಮಹಾನಗರಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಹಿಂದಿನ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ, ಭ್ರಷ್ಟಾಚಾರ ನಡೆದಿದ್ದು, ಅವುಗಳ ತನಿಖೆ ಆಗಬೇಕಿದೆ. ಅಲ್ಲದೆ, ದಾವಣಗೆರೆಯಲ್ಲಿ ಸಾರ್ವಜನಿಕ ಆಸ್ತಿಯನ್ನು ನುಂಗುವ ಕೆಲಸ ಒಂದು ಕುಟುಂಬದಿಂದ ನಡೆಯುತ್ತಿದೆ. ಆ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಪಕ್ಷದ ಎಲ್ಲರೂ ವಿಶ್ವಾಸದಿಂದ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.

ಗೆದ್ದವರು ಜನಸಾಮಾನ್ಯರ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಕಾರ್ಯಕರ್ತರನ್ನು ಎಂದೂ ಕೂಡ ನಿರ್ಲಕ್ಷಿಸಬಾರದು. ಅವರ ಶ್ರಮದಿಂದಲೇ ನಾವು ಜನಪ್ರತಿನಿಧಿಗಳಾಗಿದ್ದೇವೆ. ಪ್ರಧಾನ ಮಂತ್ರಿಯೂ ಸಹ ಕಾರ್ಯಕರ್ತರಿಂದಲೇ ಸ್ಥಾನ ಪಡೆದಿರುವುದು. ಹಾಗಾಗಿ ಮತದಾರರಿಗೆ ಕಾರ್ಯಕರ್ತರು ಚುನಾವಣೆ ವೇಳೆ ನೀಡಿರುವ ಭರವಸೆಯಲ್ಲಿ ಶೇ.80ರಷ್ಟಾದರೂ ಈಡೇರಿಸಲು ಸದಸ್ಯರು ಶ್ರಮಿಸಬೇಕು. ಜತೆಗೆ ಸೋತವರು ನಿರಾಸೆಗೊಳ್ಳದೆ ವಾರ್ಡ್‌ನಲ್ಲಿ ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಂಘಟನೆ-ಹೋರಾಟದಿಂದ ಪಕ್ಷ ಸದೃಢಗೊಳಿಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿದೆ. ನೆಹರೂ ಅವರಿಂದ ಹಿಡಿದು ರಾಹುಲ್‌ ಗಾಂಧಿಯವರೆಗೂ ಆ ಕುಟುಂಬದವರೇ ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಇದೆ. ಮೂರು ವರ್ಷಕ್ಕೊಮ್ಮೆ ಮಂಡಲದಿಂದ ಹಿಡಿದು ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಬಿಜೆಪಿಯಲ್ಲಿ ಸಾಮರ್ಥ್ಯ ಇರುವವರಿಗೆ ಸ್ಥಾನ ಸಿಗುವುದು ನಿಶ್ಚಿತ. ಎಲ್ಲರಿಗೂ ಸ್ಥಾನಮಾನ ಸಿಗದಿರಬಹುದು. ಆದರೆ, ಅವಕಾಶವಂಚಿತರಿಗೆ ಮುಂದೆ ಅದು ದೊರೆಯಲಿದೆ ಎಂದು ತಿಳಿಸಿದರು.

Advertisement

ಇತ್ತೀಚೆಗೆ ಹೋರಾಟಗಳು ಕಡಿಮೆಯಾಗಿವೆ. ಹೋರಾಟ, ಪ್ರತಿಭಟನೆಯಿಂದಲೇ ಅಧಿಕಾರ ಸಿಗುವುದು. ಹಾಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹೋರಾಡಿ. ಎಲ್ಲಾ ಭಿನ್ನಾಭಿಪ್ರಾಯ ಬದಿಗೊತ್ತಿ, ಸಾಮರಸ್ಯದಿಂದ ಪಕ್ಷ ಸಂಘಟನೆ ಬಗ್ಗೆ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಸೋತವರು ನಿರಾಶರಾಗಬೇಡಿ. ನಾನು ನಾಲ್ಕು ಬಾರಿ ಸೋತಿದ್ದೇನೆ. ಕೇರಳದಲ್ಲಿ ನಮ್ಮ ಪಕ್ಷದವರೊಬ್ಬರು 9 ಬಾರಿ ಸೋತಿದ್ದರು. 10ನೇ ಬಾರಿ ಗೆದ್ದಿದ್ದರು. ಹಾಗಾಗಿ ನನಗೂ ಇನ್ನು 5 ಅವಕಾಶಗಳಿವೆ. ನಿಮಗೂ ಮುಂದೆ ಅವಕಾಶ ಇದೆ. 1990ರಲ್ಲಿ ಶಂಕರನಾರಾಯಣ ಅವರೊಬ್ಬರೇ ನಗರಸಭೆಯ ಸದಸ್ಯರಾಗಿದ್ದರು. ಆಗ ನಡೆದಿದ್ದ ಅಡ್ವಾಣಿ ರಥಯಾತ್ರೆಯ ಸಂದರ್ಭದಲ್ಲಿ 8 ಮಂದಿ ಗುಂಡೇಟಿಗೆ ಬಲಿಯಾಗಿದ್ದರು. 74 ಮಂದಿ ಗುಂಡೇಟು ತಿಂದಿದ್ದರು. ಅದರಲ್ಲಿ ನಾನೂ ಒಬ್ಬ. ಅಂಥಹ ಹೋರಾಟದಿಂದ ಬಂದವನು ನಾನು ಎಂದು ಅವರು ತಿಳಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಚುನಾವಣಾಧಿಕಾರಿ ದತ್ತಾತ್ರಿ, ಸಹ ಚುನಾವಣಾಧಿಕಾರಿ ಎನ್‌.ಇ.ಜೀವನಮೂರ್ತಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ ಭಟ್‌, ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸಂಗವಗೌಡ್ರು, ಪಕ್ಷದ ಮುಖಂಡರಾದ ಹೇಮಂತಕುಮಾರ್‌, ಎಚ್‌.
ಎನ್‌.ಶಿವಕುಮಾರ್‌, ಧಜನಂಯ ಕಡ್ಲೆಬಾಳು, ಸತೀಶ್‌ ಕೊಳೇನಹಳ್ಳಿ, ವೈ.ಮಲ್ಲೇಶ್‌, ಮಂಜುನಾಥ್‌, ಇತರರು ವೇದಿಕೆಯಲ್ಲಿದ್ದರು.

ಪಾಲಿಕೆ ಚುನಾವಣೆಯಲ್ಲಿ ಗೆದ್ದವರು ಹಾಗೂ ಪರಾಜಿತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತರಕಾರಿ ಶಿವು ಸ್ವಾಗತಿಸಿದರು. ರಮೇಶ್‌ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next