Advertisement

ಪಾಸಿಟಿವ್‌ ಪ್ರಕರಣ ಹೆಚ್ಚಳದಿಂದ ಆಘಾತ

11:07 AM May 06, 2020 | Naveen |

ದಾವಣಗೆರೆ: ಕೋವಿಡ್ ಸೋಂಕು ಸಮರ್ಪಕ ನಿಯಂತ್ರಣದಿಂದಾಗಿ ಗ್ರೀನ್‌ ಝೋನ್‌ ಸೇರ್ಪಡೆ ಘೋಷಣೆ ಬೆನ್ನಲ್ಲೆ ದಾವಣಗೆರೆ ಜಿಲ್ಲೆ ಅಪಾರ ಸಂಖ್ಯೆಯ ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು ನೋವಿನ ವಿಚಾರ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್‌ ವಿಷಾದಿಸಿದ್ದಾರೆ.

Advertisement

ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ತಾವು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊರೊನಾ ಸೋಂಕಿನ ಒಂದೂ ಪ್ರಕರಣ ವರದಿಯಾಗಿರಲಿಲ್ಲ. ಆಗ ಜಿಲ್ಲೆಯನ್ನು ಗ್ರೀನ್‌ ಝೋನ್‌ಗೆ ಸೇರಿಸಲು ಜನಪ್ರತಿನಿಧಿಗಳು ಮನವಿ ಮಾಡಿದ್ದರು. ಆದರೆ ಕೇವಲ ನಾಲ್ಕು ದಿನಗಳಲ್ಲೇ ಇಷ್ಟೊಂದು ಸಂಖ್ಯೆಯ ಪಾಸಿಟಿವ್‌ ಪ್ರಕರಣ ವರದಿಯಾಗಿ ರೆಡ್‌ ಝೋನ್‌ ಆಗಲಿರುವುದು ನಿಜಕ್ಕೂ ಆಘಾತ ತಂದಿದೆ ಎಂದರು.

ಮೊದಲು ಜಿಲ್ಲೆಯಲ್ಲಿ ಕೇವಲ ಎರಡು ಪ್ರಕರಣ ಪತ್ತೆಯಾಗಿ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. 32 ದಿನಗಳಲ್ಲಿ ಒಂದೇ ಒಂದೂ ಪ್ರಕರಣ ಪತ್ತೆಯಾಗಿರಲಿಲ್ಲ. ಒಂದೇ ದಿನ 21 ಪ್ರಕರಣ ವರದಿಯಾಗಿದ್ದು ಅಘಾತಕಾರಿ ಸಂಗತಿ. ಸದ್ಯ 28 ಕೋವಿಡ್ ಸೋಂಕು ಪ್ರಕರಣ ಸಕ್ರಿಯವಾಗಿವೆ. ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಡಿಸ್‌ಚಾರ್ಜ್‌ ಆಗಿದ್ದಾರೆ. ಸಂಜೆ ವೇಳೆ ಮತ್ತಷ್ಟು ಪಾಸಿಟಿವ್‌ ಪ್ರಕರಣ ವರದಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯೇ ನಾನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಗರದಲ್ಲಿ ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಎಲ್ಲ ರೀತಿಯ ಚಟುವಟಿಕೆ ಸ್ಥಗಿತಗೊಳಿಸಬೇಕೆಂದು ಆದೇಶಿಸಿದ್ದೇನೆ. ಪಾಸಿಟಿವ್‌ ಪತ್ತೆಯಾಗಿರುವ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗುವುದು. ಆ ಪ್ರದೇಶದಲ್ಲಿ ಜನರು ಯಾವುದೇ ಕಾರಣಕ್ಕೂ ಹೊರಬಾರದು. ಅನಗತ್ಯವಾಗಿ ಸಂಚರಿಸಬಾರದು. ಯಾರೂ ಸಹ ಸುಳ್ಳು ಸುದ್ದಿಗೆ ಕಿವಿಗೊಡಬಾರದು. ಮಕ್ಕಳು ಮತ್ತು ವೃದ್ದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮನೆಯಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಬಂದಾಗ ಸಹಕರಿಸಬೇಕು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚಿಸುವ ಆದೇಶವನ್ನು ಸಾರ್ವಜನಿಕರು ಪಾಲಿಸಲೇಬೇಕು. ಮಹಾಮಾರಿ ಕೋವಿಡ್ ನಿಯಂತ್ರಿಸಲು ನಾಗರಿಕರು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ವೈರಸ್‌ ಪರೀಕ್ಷಾ ಲ್ಯಾಬ್‌ ಆರಂಭ ಸ್ವಲ್ಪ ತಡವಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ದಾವಣಗೆರೆ, ಹಾವೇರಿ, ಬಳ್ಳಾರಿ ಜಿಲ್ಲೆಗಳ ಸೇರಿಸಿ ಲ್ಯಾಬ್‌ ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈಗ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲೇ ಎಸ್‌ಡಿಆರ್‌ ಎಫ್‌ ಅನುದಾನದಲ್ಲೇ ಪ್ರತ್ಯೇಕ ಲ್ಯಾಬ್‌ ತೆರೆಯಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಜಿಲ್ಲೆಗೆ ಪ್ರತ್ಯೇಕವಾದ ಕೋವಿಡ್ ಲಾಬ್‌ ಸ್ಥಾಪಿಸುವುದರಿಂದ ಅನುಕೂಲವಾಗಲಿದೆ. 74 ಲಕ್ಷ ರೂ. ವೆಚ್ಚದಲ್ಲಿ ಲ್ಯಾಬ್‌ ಯೋಜನೆ ತಯಾರಿಸಿದ್ದು, ಅನುಮೋದನೆಗಾಗಿ ಆಯುಕ್ತರಿಗೆ ಕಡತ ಕಳುಹಿಸಿಕೊಡಲಾಗಿದೆ. ಅನುಮತಿ ಸಿಕ್ಕ ತಕ್ಷಣ 2-3 ದಿನಗಳಲ್ಲಿ ಲ್ಯಾಬ್‌ಗ ಸಂಬಂಧಪಟ್ಟ ಪರಿಕರ ಅಳವಡಿಸಲಾಗುವುದು. ಜಿಲ್ಲೆಗೆ ಒಂದು ಶಾಶ್ವತ ಲ್ಯಾಬ್‌ ಸೇವೆ ದೊರೆಯಲಿದೆ ಎಂದರು.

ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲೂ 2-3 ದಿನಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ಆರಂಭಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಎನ್‌ಎಬಿಎಲ್‌ ಅನುಮೋದನೆ ದೊರೆಯಲಿದೆ. ಕೋವಿಡ್ ಸೋಂಕು ಪ್ರಕರಣ ನಿಯಂತ್ರಣದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ದಾವಣಗೆರೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಗ್ರಾಮೀಣ ಪ್ರದೇಶದಿಂದ ಯಾರೂ ಸಹ ದಾವಣಗೆರೆ ಪ್ರವೇಶಿಸಬಾರದು, ಹಾಗೆಯೇ ನಗರದಿಂದಲೂ ಸಹ ಯಾರೂ ಹೊರ ಹೋಗಬಾರದು. ಪ್ರಸ್ತುತ ನಗರದಲ್ಲಿ ಕೋವಿಡ್‌ ಸಂಬಂಧ 63 ಸಾವಿರ ಜನರನ್ನು ಸಮೀಕ್ಷೆ ನಡೆಸಲಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ 110 ಬೆಡ್‌ ವ್ಯವಸ್ಥೆ ಇದೆ. ಹೆಚ್ಚಿನ ಪ್ರಕರಣಗಳು ಕಂಡು ಬಂದಲ್ಲಿ ಬಾಪೂಜಿ ಮತ್ತು ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಗಳಲ್ಲಿ ಸಹ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. 800ಕ್ಕೂ ಹೆಚ್ಚು ಜನರನ್ನು ಕ್ವಾರಂಟೆ„ನ್‌ ಮಾಡಲಾಗಿದೆ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ, ಎಸ್‌.ವಿ. ರಾಮಚಂದ್ರ, ಜಿಪಂ ಅಧ್ಯಕ್ಷೆ ಯಶೋದಮ್ಮ, ಮೇಯರ್‌ ಬಿ.ಜಿ. ಅಜಯಕುಮಾರ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ, ಪತ್ರಿಕಾಗೋಷ್ಠಿಯಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next