Advertisement

ಹೊಸದಾಗಿ 6 ಮಂದಿಗೆ ವಕ್ಕರಿಸಿದ ಮಹಾಮಾರಿ

11:44 AM Jun 01, 2020 | Naveen |

ದಾವಣಗೆರೆ: ದಾವಣಗೆರೆಯಲ್ಲಿ ಭಾನುವಾರ ಹೊಸದಾಗಿ ಆರು ಜನರಲ್ಲಿ ಮಹಾಮಾರಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. 27 ವರ್ಷದ ಹೆಣ್ಣುಮಗಳು (ರೋಗಿ ನಂಬರ್‌ 3070), 32 ವರ್ಷದ ಗಂಡು (ರೋಗಿ ನಂಬರ್‌ 3071) ಹಾಗೂ 22 ವರ್ಷದ ಯುವಕ ಸೋಂಕಿಗೆ ತುತ್ತಾಗಿದ್ದಾರೆ.

Advertisement

ಮೂವರಿಗೂ ಸೋಂಕು ಕಾಣಿಸಿಕೊಂಡಿರುವ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಮೂವರ ಟ್ರಾವೆಲ್‌ ಹಿಸ್ಟರಿ, ಯಾರ ಸಂಪರ್ಕ ಮತ್ತು ಹೇಗೆ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಸವಾಲಾಗಿದೆ. 14 ವರ್ಷದ ಬಾಲಕಿಗೆ (ರೋಗಿ ನಂಬರ್‌ 3073) ರೋಗಿ ನಂಬರ್‌ 1251 ಸಂಪರ್ಕದಿಂದ ಸೋಂಕು ಕಾಣಿಸಿ ಕೊಂಡಿದೆ. ರೋಗಿ ನಂಬರ್‌ 1852ರ ಸಂಪರ್ಕದಿಂದ 12 ವರ್ಷದ ಬಾಲಕ (ರೋಗಿ ನಂಬರ್‌ 3216) ಹಾಗೂ ರೋಗಿ ನಂಬರ್‌ 1373 ಸಂಪರ್ಕದಿಂದ 31 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೋವಿಡ್‌-19 ಗುಣಮುಖರಾದ 17 ಜನರನ್ನು ಭಾನುವಾರ ಡಿಸ್ಚಾರ್ಜ್‌ ಮಾಡಲಾಗಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ನಂಬರ್‌ 625, 1483, 1488, 1656, 1657, 1658, 1808, 1809, 1852, 1963, 1964, 1992, 2274, 2275, 2277, 2278 ಹಾಗೂ ರೋಗಿ ನಂಬರ್‌ 2281 ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದವರು. ಜಿಲ್ಲಾ ಕೋವಿಡ್‌ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಭಾನುವಾರ ಐವರು ಒಳಗೊಂಡಂತೆ ಇದುವರೆಗೆ 860 ಮಂದಿ ಅವಲೋಕನದಲ್ಲಿದ್ದಾರೆ. ನಾಲ್ವರು ಸೇರಿ ಒಟ್ಟಾರೆ 606 ಮಂದಿ ಹೋಂ, 37 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ. 9 ಜನರು ಒಳಗೊಂಡಂತೆ 582 ಜನರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿದ್ದಾರೆ. ಭಾನುವಾರ 171 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇದುವರೆಗೆ ಕೋವಿಡ್‌ ಸಂಬಂಧಿತ ಪರೀಕ್ಷೆಗೆ ಕಳಿಸಲಾಗಿರುವ 8496 ಗಂಟಲು ದ್ರವ ಮಾದರಿಗಳಲ್ಲಿ 7489 ಮಾದರಿಗಳ ವರದಿ ನೆಗೆಟಿವ್‌ ಬಂದಿದೆ.

ನಿನ್ನೆ 164 ಜನರ ಗಂಟಲು ದ್ರವ ಮಾದರಿ ನೆಗೆಟಿವ್‌ ಎಂಬ ವರದಿ ಬಂದಿದೆ.ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ ಸೋಂಕಿಗೆ ತುತ್ತಾಗಿರುವ 156 ಜನರಲ್ಲಿ ಒಟ್ಟು 121 ಜನರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. 31 ಸಕ್ರಿಯ ಪ್ರಕರಣಗಳಿವೆ.

Advertisement

ಮೂರನೇ ಸ್ಥಾನದಲ್ಲಿದ್ದ ಜಿಲ್ಲೆ ಹತ್ತನೇ ಸ್ಥಾನಕ್ಕೆ
ಕೋವಿಡ್‌ ಪ್ರಕರಣಗಳ ಹೆಚ್ಚಳದಿಂದ ತತ್ತರಿಸಿ ಹೋಗಿದ್ದ ದಾವಣಗೆರೆಯಲ್ಲಿ ಸೋಂಕಿತರ ನೋಡ ನೋಡುತ್ತಿದ್ದಂತೆ ನೂರು ತಲುಪಿತ್ತು. ಕೆಲ ದಿನಗಳಲ್ಲಿ 150ರ ಗಡಿ ದಾಟಿದ್ದು ಜನರಲ್ಲಿ ಭಯ, ಆತಂಕಕ್ಕೆ ಕಾರಣವಾಗಿತ್ತು. ಮೇ 20 ರಂದು ಏಳು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಂಡ ನಂತರದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಪರ್ವವೇ ಪ್ರಾರಂಭವಾಯಿತು. ದಿನದಿಂದ ದಿನಕ್ಕೆ ಡಿಸ್ಚಾರ್ಜ್‌ ಆಗುವರ ಸಂಖ್ಯೆ ಹೆಚ್ಚಾಗತೊಡಗಿತು. 8 ತಿಂಗಳು ಗಂಡು ಮಗು, ಸ್ಟಾಫ್‌ ನರ್ಸ್‌, ಸಂಚಾರಿ ಪೇದೆ, 73 ವರ್ಷದ ವಯೋವೃದ್ದರೊಬ್ಬರು ಒಳಗೊಂಡಂತೆ ಈವರೆಗೆ 121 ಜನರು ಬಿಡುಗಡೆಯಾಗಿರುವುದು ದಾವಣಗೆರೆಯಲ್ಲಿದ್ದ ಆತಂಕವನ್ನು ದೂರ ಮಾಡುತ್ತಿದೆ. ಸೋಂಕಿತ ಪ್ರಕರಣಗಳ ಪತ್ತೆ ಆಗುವ ಜೊತೆಗೆ ಡಿಸ್ಚಾರ್ಜ್‌ ಪ್ರಮಾಣವೂ ಹೆಚ್ಚುತ್ತಿದೆ. ಕೆಲವೇ ದಿನಗಳ ಅಂತರದಲ್ಲಿ ಹೇಗೆ ಸೋಂಕಿತರ ಪ್ರಮಾಣ ನೂರರ ಗಡಿ ದಾಟಿತ್ತೋ ಅದೇ ತೆರನಾಗಿ ಗುಣಮುಖರ ಸಂಖ್ಯೆಯೂ ಶತಕದ ಗಡಿ ದಾಟಿದೆ. ಇನ್ನು 31 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ ಸೋಂಕಿತರ ಪ್ರಮಾಣದಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆ ಭಾನುವಾರ 10ನೇ ಸ್ಥಾನಕ್ಕೆ ಬಂದಿರುವುದು ಸಮಾಧಾನದ ವಿಚಾರ.

Advertisement

Udayavani is now on Telegram. Click here to join our channel and stay updated with the latest news.

Next