ದಾವಣಗೆರೆ: ಕೆಲವು ದಿನಗಳಿಂದ ಕೋವಿಡ್ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದ್ದ ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಮಂಗಳವಾರ ಹೊಸದಾಗಿ 11 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಆರೋಗ್ಯ ಇಲಾಖೆ ಬೆಳಿಗ್ಗೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ಜಿಲ್ಲೆಯಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದ್ದರಿಂದ ಮತ್ತೆ ಒಂದಿಷ್ಟು ಆತಂಕಕ್ಕೊಳಗಾಗಿದ್ದ ನಗರದ ನಾಗರಿಕರಿಗೆ ಸಂಜೆ 15 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು ನೆಮ್ಮದಿ ತಂದಿದೆ. ಪಿ-2218(47 ವರ್ಷದ ಮಹಿಳೆ), ಪಿ-2257(28 ವರ್ಷದ ಮಹಿಳೆ), ಪಿ-2274 (55 ವರ್ಷದ ಮಹಿಳೆ), ಪಿ-2275 (38 ವರ್ಷದ ಪುರುಷ), ಪಿ-2276 (9 ವರ್ಷದ ಬಾಲಕ), ಪಿ-2277 (36 ವರ್ಷದ ಮಹಿಳೆ), ಪಿ-2278 (14 ವರ್ಷದ ಬಾಲಕ), ಪಿ-2279 (63 ವರ್ಷದ ಮಹಿಳೆ), ಪಿ-2280 (39 ವರ್ಷದ ಪುರುಷ), ಪಿ-2281 (9 ವರ್ಷದ ಬಾಲಕ) ಹಾಗೂ ಪಿ-2282 (26 ವರ್ಷದ ಮಹಿಳೆ)ಇವರಿಗೆ ಸೋಂಕು ವ್ಯಾಪಿಸಿದೆ.
ಇವರಲ್ಲಿ ಒಬ್ಬರಿಗೆ ಗುಜರಾತ್‌ನಿಂದ ಹಿಂತಿರುಗಿದ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ, ನಾಲ್ವರಿಗೆ ಪಿ-1378ರ ಸಂಪರ್ಕದಿಂದ ಸೋಂಕು ತಗುಲಿದೆ. ಮತ್ತಿಬ್ಬರಿಗೆ ಪಿ-993ರ ಸಂಪರ್ಕ, ಓರ್ವ ಮಹಿಳೆಗೆ ಪಿ-933 ಹಾಗೂ 63 ವರ್ಷದ ಮಹಿಳೆಗೆ ಪಿ-627ರ ಸಂಪರ್ಕದಿಂದ ಸೋಂಕು ಹರಡಿದೆ. ಇವರೆಲ್ಲಾ ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕು ಪತ್ತೆ ಸಂಬಂಧ ಪರೀಕ್ಷೆಗೆ ಕಂಟೇನ್ಮೆಂಟ್ ಝೋನ್ ಗಳಲ್ಲಿ ಆರೋಗ್ಯ ಇಲಾಖೆ ತಂಡಗಳು ಸಮೀಕ್ಷೆ ನಡೆಸಿ ನಿನ್ನೆ ಒಟ್ಟು 248 ಮಂದಿ ಸ್ವಾಬ್ ಸಂಗ್ರಹಿಸಿದ್ದು, ಸೋಂಕು ಪತ್ತೆಗೆ ಇದುವರೆಗೂ 7212 ಮಂದಿ ಸ್ವಾಬ್ ಸಂಗ್ರಹಿಸಿದಂತಾಗಿದೆ. ಈ ಮಧ್ಯೆ ಲ್ಯಾಬ್ ನಿಂದ 610 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು. ಈ ತನಕ 5897 ಮಂದಿಯ ನೆಗೆಟಿವ್ ರಿಪೋರ್ಟ್ ಬಂದಿದೆ. 136 ಮಂದಿ ಕೊರೊನಾ ಸೋಂಕಿತರಲ್ಲಿ ಈಗ ಒಟ್ಟು 65 ಮಂದಿ ಡಿಸಾcರ್ಜ್ ಆಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಕೋವಿಡ್ ಬಾಧಿತರ ಸಂಖ್ಯೆ 67ಕ್ಕೆ ಇಳಿದಿದೆ.
15 ಮಂದಿ ಡಿಸಾcರ್ಜ್: ಕೊರೊನಾ ಸೋಂಕಿನಿಂದ ಗುಣಮುಖರಾದ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೇರಿ 15 ಜನರನ್ನು ಸಂಜೆ ಡಿಸಾcರ್ಜ್ ಮಾಡಲಾಯಿತು. ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಂಜೆ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್‌ಪಿ ರಾಜೀವ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಬಸಪ್ಪ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಪುಷ್ಪವೃಷ್ಟಿಗೈದು, ಚಪ್ಪಾಳೆ ತಟ್ಟುವ ಮೂಲಕ ಗುಣಮುಖರಾದವರನ್ನು ಬೀಳ್ಕೊಟ್ಟರು.