ದಾವಣಗೆರೆ: ಗುರುವಾರ ಸಹ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಗುಣಮುಖರಾದ ಐವರನ್ನು ಡಿಸ್ಚಾರ್ಜ್ ಮಾಡಲಾಗಿದೆ. 6 ವರ್ಷದ ಬಾಲಕಿ, 15 ವರ್ಷದ ಬಾಲಕ ಹಾಗೂ 68 ವರ್ಷದ ಮಹಿಳೆಗೆ ಸೋಂಕು ವ್ಯಾಪಿಸಿರುವುದು ದೃಢಪಟ್ಟಿದ್ದು, ಈ ಮಧ್ಯೆ ಚಿಕಿತ್ಸೆಯಿಂದ ಗುಣಮುಖರಾದ ಐವರನ್ನು ಡಿಸ್ಚಾರ್ಜ್ ಮಾಡಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಸಂಜೆ ಸರಳ ಕಾರ್ಯಕ್ರಮದ ಮೂಲಕ ಐವರಿಗೆ ಚಪ್ಪಾಳೆ ತಟ್ಟುತ್ತಾ, ಪುಷ್ಪವೃಷ್ಟಿಗೈದು ಅಧಿಕಾರಿಗಳು, ವೈದ್ಯರು, ಆರೋಗ್ಯ ಇಲಾಖೆ ಆಧಿಕಾರಿಗಳು, ಸಿಬ್ಬಂದಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲೆಯಲ್ಲಿ ಮೂರು ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ರೋಗಿ-1483, 1485 ಹಾಗೂ 1488 ಜಾಲಿನಗರಕ್ಕೆ ಸಂಬಂಧಟ್ಟವರು. ಕಂಟೈನ್‌ಮೆಂಟ್ ಝೋನ್‌ನಲ್ಲಿರುವ ಎಪಿಸೆಂಟರ್ ವಾಸಿಯಾದ 15 ವರ್ಷದ ಬಾಲಕ (ರೋಗಿ-1483)ನಿಗೆ ಪಾಸಿಟಿವ್ ದೃಢಪಟ್ಟಿದೆ. 68 ವರ್ಷದ ಮಹಿಳೆ (ರೋಗಿ-1485)ಗೆ ರೋಗಿ-667ರ ದ್ವಿತೀಯ ಸಂಪರ್ಕ ಹಾಗೂ 6 ವರ್ಷದ ಬಾಲಕಿ (ರೋಗಿ-1489)ಗೆ ರೋಗಿ-634ರ ಸಂಪರ್ಕದಿಂದ ಸೋಂಕು ವ್ಯಾಪಿಸಿದೆ ಎಂದರು.
ಕೋವಿಡ್ ಸೋಂಕಿನಿಂದ ಗುಣಮುಖರಾದ ಐವರನ್ನು (ಪಿ-618, 620, 623, 628, 664) ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇವರಲ್ಲಿ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರಾಗಿದ್ದು, ಇದುವರೆಗೆ ಚಿಕಿತ್ಸೆಯಿಂದ ಗುಣಮುಖರಾದ ಒಟ್ಟು 14 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ಸೋಂಕಿತ ಒಟ್ಟು 115 ಮಂದಿಯಲ್ಲಿ ನಾಲ್ವರು ಮೃತಪಟ್ಟಿದ್ದು, 97 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದರು.
ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ, ಅವರಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನ ಚಿಕಿತ್ಸೆ ಮುಗಿದವರದ್ದು ಮೊತ್ತೂಮ್ಮೆ ಸ್ಯಾಂಪಲ್ ಸಂಗ್ರಹಿಸಿ ಕಳುಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸ ಇದೆ ಎಂದರು. ಒಟ್ಟು 1400 ಸ್ಯಾಂಪಲ್ ವರದಿ ಬರಬೇಕಿದೆ. ಇಂದು 601 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಅದರಲ್ಲಿ ಶಿವಮೊಗ್ಗಕ್ಕೆ 200 ಸ್ಯಾಂಪಲ್ ಕಳುಹಿಸಿ ಕೊಡಲಾಗಿದೆ. ಕೆಲವು ಸ್ಯಾಂಪಲ್‌ಗಳನ್ನು ಖಾಸಗಿ ಆನಂದ್ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಉಳಿದ 60 ರಿಂದ 70 ಸ್ಯಾಂಪಲ್‌ಗಳನ್ನು ಸ್ಥಳೀಯ ಲ್ಯಾಬ್‌ಗ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದ ಜೆಜೆಎಂ ಲ್ಯಾಬ್ ತೆರೆಯಲಿದ್ದು, ಅಲ್ಲಿಗೂ ಕಳುಹಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ, ಲಾಕ್‌ಡೌನ್ ಸಡಿಲಿಕೆ ನಂತರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ. ಹಾಗಾಗಿ ಎಲ್ಲರೂ ಬಹಳಷ್ಟು ಜಾಗರೂಕತೆ ವಹಿಸಬೇಕು. ಆದಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಿ, ಸ್ಯಾನಿಟೆ„ಸರ್ ಉಪಯೋಗಿಸುವ ಮೂಲಕ ಕೋವಿಡ್ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು. ದಾವಣಗೆರೆಯಲ್ಲಿ ಈಗಾಗಲೇ ಸಕ್ರಿಯವಾದ 97 ಪ್ರಕರಣಗಳಿವೆ. ವೈದ್ಯರ ಪ್ರಕಾರ ಅವರಲ್ಲಿ 50 ಜನ 14 ದಿನ ಚಿಕಿತ್ಸೆ ಮುಗಿಸಿರುವವರು ಇದ್ದಾರೆ. ಅವರ ಎರಡನೇ ಸುತ್ತಿನ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಯಮಾನುಸಾರ ಅವರನ್ನು ಬಿಡುಗಡೆಗೊಳಿಸಲಾಗುವುದು. ಈ ಮಧ್ಯೆ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಮತಾ ಹೊಸಗೌಡರ್, ಡಿಎಚ್‌ಒ ಡಾ| ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್, ಜಿಲ್ಲಾ ಶಸ್ತ್ರಚಿತ್ಸಕ ಸುಭಾಷಚಂದ್ರ, ತಹಶೀಲ್ದಾರ್ ಗಿರೀಶ್ ಈ ಸಂದರ್ಭದಲ್ಲಿದ್ದರು.