ದಾವಣಗೆರೆ: ಖಾಸಗಿ ಪ್ರಯೋಗಾಲಯದ ವರದಿಯಂತೆ ಕೋವಿಡ್-19 ಪಾಸಿಟಿವ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಆರು ಜನರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 18 ರಂದು ರೋಗಿ ನಂಬರ್ 7804, 7805, 8066,8067, 8068, 8069 ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಪ್ರಯೋಗಾಲಯದ ವರದಿ ಪಾಸಿಟಿವ್ ಎಂಬುದಾಗಿ ಬಂದಿತ್ತು. ಸೋಂಕಿತರು ಕಂಟೇನ್ಮೆಂಟ್ ಝೋನ್‌ನವರು ಅಲ್ಲ. ಯಾವುದೇ ಸೋಂಕಿತರ ಸಂಪರ್ಕಕ್ಕೂ ಬಂದಿಲ್ಲ. ಆದರೂ ಪಾಸಿಟಿವ್ ಬಂದಿರುವ ಮೂಲ ಯಾವುದು ಎಂದು ಪತ್ತೆ ಹಚ್ಚಿದರೂ ಯಾವುದೇ ಮೂಲ ಗಮನಕ್ಕೆ ಬರಲಿಲ್ಲ. ಕೆಲವು ಅಂಶಗಳ ಅನುಮಾನದ ಆಧಾರದಲ್ಲಿ ಎಲ್ಲರ ಗಂಟಲು ಮಾದರಿಯನ್ನು ಮತ್ತೊಂದು ಖಾಸಗಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಲ್ಲಿ ನೆಗೆಟಿವ್ ಎಂದು ವರದಿ ಬಂದಿತ್ತು. ಒಂದು ಖಾಸಗಿ ಪ್ರಯೋಗಾಲಯದ ವರದಿ ಪಾಸಿಟಿವ್, ಇನ್ನೊಂದು ಪ್ರಯೋಗಾಲಯದ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಯಿತು. ಸರ್ಕಾರದ ಸೂಚನೆ ಅನ್ವಯ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಮತ್ತೆ ನೆಗೆಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನೂ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಆರು ಜನರಲ್ಲಿ ಇಬ್ಬರು ಐಎಲ್‌ಐ ಹಿನ್ನೆಲೆ ಮತ್ತು 4 ಜನರು ಗರ್ಭಿಣಿಯರು ಇದ್ದಾರೆ. ಮೂವರ ಹೆರಿಗೆ ಸಹ ಆಗಿದೆ. ದೊಡ್ಡಬಾತಿ, ಶ್ಯಾಗಲೆ, ಬಸವನಹಳ್ಳಿ, ಮಾದನಬಾವಿ ಗ್ರಾಮಗಳನ್ನು ಡಿನೋಟಿಫೈ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕೆಲವೊಮ್ಮೆ ಈ ರೀತಿಯಲ್ಲಿ ವರದಿ ಬರುವ ಸಾಧ್ಯತೆ ಇರುತ್ತದೆ. ಕಿಟ್‌ನಲ್ಲಿನ ದೋಷ ಇತರೆ ಅಂಶಗಳಿಂದ ವರದಿಯಲ್ಲಿ ವ್ಯತ್ಯಯ ಆಗಬಹುದು. ಖಾಸಗಿ ಪ್ರಯೋಗಾಲಯಕ್ಕೆ ವಿವರಣೆ ಕೋರಿ ಜಿಲ್ಲಾಡಳಿತ ಪತ್ರ ಬರೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಮಂಗಳವಾರ 2 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 6 ಜನರು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ದಾವಣಗೆರೆ ಹೊರ ವಲಯದ ಆವರಗೆರೆ ಗ್ರಾಮದ 34 ವರ್ಷದ ವ್ಯಕ್ತಿ (ರೋಗಿ ನಂಬರ್ 9420) ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆಯ ಮಹಾರಾಜಪೇಟೆಯ 68 ವರ್ಷದ ವೃದ್ಧ ( ರೋಗಿ ಸಂಖ್ಯೆ-9421) ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಸೋಂಕು ದೃಢಪಟ್ಟಿದೆ. 12 ಜನ ಪ್ರಾಥಮಿಕ ಸಂಪರ್ಕಿತರ ಸ್ವಾಬ್ ಸಂಗ್ರಹ ಮಾಡಲಾಗಿದೆ ಎಂದರು. ಕೋವಿಡ್ ಗೆ ಸಂಬಂಧಿಸಿದಂತೆ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 5,122 ಕೋವಿಡ್ ಬೆಡ್ ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಯಾರೂ ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ. ಸಾಮಾಜಿಕ ಅಂತರ, ವೈಯಕ್ತಿಕ ಎಚ್ಚರಿಕೆಯಿಂದ ಇರಬೇಕು. ದುರ್ಬಲ ವರ್ಗದವರು, ಸ್ಲಂ, ಕೆಪಿಎಂಇ ಕಾಯ್ದೆಯಡಿ ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಗಳಲ್ಲಿ ಔಷಧಿಗಳನ್ನು ತೆಗೆದುಕೊಂಡವರ ಸ್ಯಾಂಪಲ್‌ಗಳು ಸೇರಿದಂತೆ ಒಟ್ಟು 1075 ಜನರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಗಂಟಲು ದ್ರವ ಮಾದರಿ ಸಂಗ್ರಹವನ್ನು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ರಾಘವೇಂದ್ರಸ್ವಾಮಿ, ಡಾ| ಜಿ.ಡಿ. ರಾಘವನ್, ಡಾ| ನಾಗರಾಜ್, ಡಾ| ಮೀನಾಕ್ಷಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಕೋವಿಡ್ -19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಫ್ರಂಟ್‌ಲೈನ್ ವರ್ಕರ್‌ಗಳಾದ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸರು ಸೇರಿದಂತೆ ಕೋವಿಡ್ ವಾರಿಯರ್ಸ್ ತಮಗೆ ಸೋಂಕು ತಗುಲೀತೆಂದು ಭಯ ಪಟ್ಟು ಆತಂಕಕ್ಕೀಡಾಗಿ ಅವಘಡಕ್ಕೆ ಒಳಗಾಗಬಾರದು. ಎಂತೆಂತಹ ಗಂಭೀರ ಆರೋಗ್ಯ ಸಮಸ್ಯೆವುಳ್ಳ ಕೋವಿಡ್ ಸೋಂಕಿತರನ್ನು ಗುಣಪಡಿಸಿ ಆಸ್ಪತೆಯಿಂದ ಬಿಡುಗಡೆಗೊಳಿಸಲಾಗಿದೆ. ಆದ್ದರಿಂದ ಯಾರೂ ಭಯಪಡುವ ಅವಶ್ಯಕತೆ ಇಲ್ಲ.
ಮಹಾಂತೇಶ್ ಬೀಳಗಿ,
ಜಿಲ್ಲಾಧಿಕಾರಿ