Advertisement

ದಾವಣಗೆರೆ: ಒಂಬತ್ತು ಜನರಿಗೆ ವಕ್ಕರಿಸಿದ ಮಹಾಮಾರಿ

09:59 PM Jun 22, 2020 | Sriram |

ದಾವಣಗೆರೆ: ಜಿಲ್ಲೆಯಲ್ಲಿ ಹೊಸದಾಗಿ ಸೋಮವಾರ ಒಂಬತ್ತು ಕೋವಿಡ್-19 ಪ್ರಕರಣ ದೃಢಪಟ್ಟಿವೆ.ಒಟ್ಟು 265 ಪ್ರಕರಣಗಳಲ್ಲಿ 220 ಸೋಂಕಿತರು ಬಿಡುಗಡೆಯಾಗಿದ್ದಾರೆ. 7 ಜನರು ಮೃತಪಟ್ಟಿದ್ದಾರೆ. 38 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದರು.

Advertisement

ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಗರ್ಭಿಣಿಯಿಂದ ಎಂಟು ಜನರಿಗೆ ಕೋವಿಡ್-19 ಸೋಂಕು ತಗುಲಿದೆ. ಆಕೆಯ ತವರುಮನೆಯಲ್ಲಿ ಮೂವರು, ಪತಿಯ ಮನೆಯಲ್ಲಿ ಆರು ಜನರಿಗೆ ಸೋಂಕು ದೃಢಪಟ್ಟಿದೆ. ರಾಜನಹಳ್ಳಿ ಮತ್ತು ಹರಿಹರದ ಅಗಸರ ಬೀದಿ ಮನೆಯನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ.

ಆಕೆಯ ಅಜ್ಜಿ ದಾವಣಗೆರೆ ಬಾಷಾ ನಗರ, ಬೀಡಿ ಲೇಔಟ್‌ಗೆ ಬಂದು ಹೋಗುತ್ತಿದ್ದರು ಎಂಬ ಮಾಹಿತಿ ಇದೆ. ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚನ್ನಗಿರಿಯ ಗೌಡ್ರ ಬೀದಿಯ 38 ವರ್ಷದ ಬೆಲ್ಲದ ವ್ಯಾಪಾರಿಗೆ ಸೋಂಕು ತಗುಲಿದೆ. ಆತ ಶಿವಮೊಗ್ಗ ಬೇರೆ ಕಡೆ ಓಡಾಡಿರುವ ಬಗ್ಗೆ ಮಾಹಿತಿ ಇದೆ. ಸೋಂಕಿನ ಮೂಲವನ್ನ ಸರ್ವಲೈನ್‌ ತಂಡ ಪತ್ತೆ ಹಚ್ಚುತ್ತಿದೆ. ಚನ್ನಗಿರಿಯ ಗೌಡ್ರ ಬೀದಿ, ಕುಂಬಾರ ಬೀದಿಯನ್ನ ಕಂಟೈನ್‌ಮೆಂಟ್‌ ಝೋನ್‌ ಮಾಡಲಾಗಿದೆ ಎಂದರು.

ಕೋವಿಡ್-19 ಸೋಂಕಿನ ಲಕ್ಷಣ ಇದ್ದಂತಹವರು ಪ್ರಾರಂಭಿಕ ಹಂತದಲ್ಲೇ ನಮ್ಮಲ್ಲಿಗೆ ಬರುವುದರಿಂದ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿ ಮಾಡುತ್ತೇವೆ. ಜನರನ್ನು ಉಳಿಸುವ ಎಲ್ಲಾ ಕೆಲಸ ಮಾಡುತ್ತೇವೆ. ಕೊನೆಯ ಹಂತದವರೆಗೆ ಕಾಯದೆ ಪ್ರಾರಂಭಿಕ ಹಂತದಲ್ಲೇ ಬರಬೇಕು. ಸಾಮಾಜಿಕ ಅಂತರ, ವೈಯಕ್ತಿಕ ಸ್ವತ್ಛತೆ, ಸ್ಯಾನಿಟೈಸೇಷನ್‌ಗೆ ಸದಾ ಗಮನ ನೀಡಬೇಕು ಎಂದು ಮನವಿ ಮಾಡಿದರು.

Advertisement

ಜಿಲ್ಲೆಯಲ್ಲಿ ಒಟ್ಟು 45 ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ 14 ತೆರವುಮಾಡಲಾಗಿದೆ. ಈಗ ಒಟ್ಟು 31 ಕಂಟೈನ್‌ಮೆಂಟ್‌ ಝೋನ್‌ ಇವೆ. ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಐಎಲ್‌ಐ, ಸಾರಿ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಲ್ನರಬಲ್‌ ಗ್ರೂಪಿನವರ ಸಮೀಕ್ಷೆ ನಡೆಸಲಾಗುತ್ತಿದೆ. 10-15 ದಿನಗಳ ಕಾಲ ವಿಶೇಷ ಆಂದೋಲನ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ಜನ್‌ ಡಾ| ನಾಗರಾಜ್‌, ಸರ್ವಲೈನ್‌ ಅಧಿಕಾರಿ ಡಾ| ಜಿ.ಡಿ. ರಾಘವನ್‌, ಡಾ| ರವಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಹಲವರು ಗುಣಮುಖ
ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಜಾಲಿನಗರದ 18 ವರ್ಷದ ಯುವತಿ, ಒಂದೇ ಕಿಡ್ನಿ ಹೊಂದಿರುವ 65 ವರ್ಷದ ಮಹಿಳೆ (ರೋಗಿ ನಂಬರ್‌ 1061), ಒಂದು ಕಾಲು ಗ್ಯಾಂಗ್ರಿನ್‌ಗೆ ತುತ್ತಾಗಿರುವ 69 ವರ್ಷದ ವೃದ್ಧ (ರೋಗಿ ನಂಬರ್‌ 1378), 8 ಮತ್ತು ಎರಡೂವರೆ ತಿಂಗಳ ಹಸುಗೂಸು, ಸೈಕೋನ್‌ ಸಮಸ್ಯೆ ಹೊಂದಿರುವ 26 ವರ್ಷದ ಮಹಿಳೆ, ಅಧಿಕ ರಕ್ತದೊತ್ತಡ, ನ್ಯುಮೋನಿಯಾದಿಂದ ಬಳಲುತ್ತಿದ್ದ 69 ವರ್ಷದ ಬಾಪೂಜಿ ಆಸ್ಪತ್ರೆ ಹೆಲ್ತ್‌ ವರ್ಕರ್‌ ಇತರರನ್ನು ನಮ್ಮ ವೈದ್ಯಕೀಯ ತಂಡ ಗುಣಮುಖರನ್ನಾಗಿ ಮಾಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದರು.

ಸೋಂಕಿತರ ಹೆರಿಗೆ
ಕೋವಿಡ್-19 ಸೋಂಕಿನ ಲಕ್ಷಣ ಕಂಡು ಬಂದಿರುವ ಒಟ್ಟು 6 ಜನ ಗರ್ಭಿಣಿಯರಲ್ಲಿ ಇಬ್ಬರಿಗೆ ನಾರ್ಮಲ್‌ಮತ್ತೊಬ್ಬರಿಗೆ ಸಿಸರೇನಿಯನ್‌ ಹೆರಿಗೆ ಮಾಡಲಾಗಿದೆ. 5 ದಿನಗಳ ನಂತರ ಕೂಸುಗಳ ಸ್ವಾಬ್‌ ತೆಗೆದು ಪರೀಕ್ಷೆಗೆ ಕಳಿಸಲಾಗುವುದು. ಐವರ ಸೋಂಕಿನ ಖಚಿತತೆಗಾಗಿ ವರದಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next