ದಾವಣಗೆರೆ: ಲೋಕಾಯುಕ್ತ ಬಲೆಗೆ ಬಿದ್ದಿರುವ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತವರ ಕುಟುಂಬ ಸದಸ್ಯರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗದಿರುವುದು ಬಹುತೇಕ ಖಚಿತ. ಹೀಗಾಗಿ ಬಿಜೆಪಿ ನಾಯಕರು ದಿ| ಜೆ.ಎಚ್.ಪಟೇಲ್ ಅವರ ಕುಟುಂಬ ಸದಸ್ಯರ ಮೇಲೆ ಕಣ್ಣಿಟ್ಟಿದೆ.
ಈಗಾಗಲೇ ಪಕ್ಷದ ಪ್ರಮುಖರೊಬ್ಬರ ಮೂಲಕ ಜೆ.ಎಚ್. ಪಟೇಲ್ ಪುತ್ರರಾದ ಮಾಜಿ ಶಾಸಕ ಮಹಿಮಾ ಪಟೇಲ್ ಹಾಗೂ ತೇಜಸ್ವಿ ಪಟೇಲ್ ಅವರನ್ನು ಸಂಪ ರ್ಕಿಸಿ ಟಿಕೆಟ್ ಭರವಸೆಯೊಂದಿಗೆ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಈ ಇಬ್ಬರೂ ತಮ್ಮ ಸಿದ್ಧಾಂತಕ್ಕೆ ಬಿಜೆಪಿ ಹೊಂದಾಣಿಕೆ ಯಾಗದು ಎಂದು ಹೇಳುವ ಮೂಲಕ ನಯವಾಗಿಯೇ ನಿರಾಕರಿಸಿದ್ದಾರೆ ಎನ್ನಲಾಗಿದೆ. ಮಹಿಮಾ ಪಟೇಲ್ ಪ್ರಸ್ತುತ ಜೆಡಿಯು ಪಕ್ಷದಲ್ಲಿದ್ದು ಈ ಹಿಂದೆಯೂ ಅವರನ್ನು ವಿವಿಧ ರಾಜಕೀಯ ಪಕ್ಷಗಳು ಆಹ್ವಾನಿಸಿವೆ. ಈಗಲೂ ಅವರಿಗೆ ಆಹ್ವಾನ ನೀಡಿವೆ. ಆದರೆ ಅವರು ಯಾವುದೇ ಪಕ್ಷಕ್ಕೆ ಹೋಗಿರಲಿಲ್ಲ. ಟಿಕೆಟ್‌ಗಾಗಿ ಯಾವುದೇ ಪಕ್ಷ ಸೇರಲು ಬಯಸದ ಅವರು ಜನ ಒಪ್ಪಿಗೆ ಸೂಚಿಸುವ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದಾರೆ.
ಕೈ ಆಕಾಂಕ್ಷಿಗೂ ಕರೆ!: ಅದೇ ರೀತಿ ಜೆ.ಎಚ್. ಪಟೇಲ್ ಅವರ ಸಹೋದರನ ಪುತ್ರ ತೇಜಸ್ವಿ ಪಟೇಲ್‌ಗೂ ಬಿಜೆಪಿ ಮುಖಂಡರೊಬ್ಬರು ಕರೆ ಮಾಡಿ ಪಕ್ಷದ ಟಿಕೆಟ್‌ನೊಂದಿಗೆ ಆಹ್ವಾನಿಸಿದ್ದಾರೆ. ಆದರೆ ತೇಜಸ್ವಿ ಪಟೇಲ್ ಒಪ್ಪಿಲ್ಲ. ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಆದರೆ ತೇಜಸ್ವಿ ಪಟೇಲ್ ಪ್ರಸ್ತುತ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು ಚನ್ನಗಿರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಮುಂದಿನ ನಿರ್ಧಾರ ಪ್ರಕಟಿಸುವುದಾಗಿಯೂ ತೇಜಸ್ವಿ ಪಟೇಲ್ ಹೇಳಿದ್ದಾರೆ.
ಈ ಮೊದಲು ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಆಕಾಂಕ್ಷಿಯಾಗಿದ್ದರು. ಈಗ ಇವರಿಗೆ ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ಬಿಜೆಪಿ ಆಕಾಂಕ್ಷಿಗಳಾಗಿ ತುಮೊRàಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ನ್ಯಾಯವಾದಿ ವೈ.ಮಂಜಪ್ಪ ಕಾಕನೂರು ಇದ್ದಾರೆ.
Related Articles
ಸ್ಥಳೀಯರೇ ಏಕೆ?
ಮಾಡಾಳು ವಿರೂಪಾಕ್ಷಪ್ಪ ಲಂಚ ಪ್ರಕರಣದ ಬಳಿಕ ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ತುದಿಗಾಲಲ್ಲಿ ನಿಂತಿವೆ. ಹಾಗಾಗಿಯೇ ಬಿಜೆಪಿ ಸ್ಥಳೀಯ, ಪ್ರಭಾವಿಗಳಿಗೆ ಟಿಕೆಟ್ ನೀಡಲು ಮುಂದಾಗಿದೆ. ಹೀಗಾಗಿ ಬಿಜೆಪಿ ಪಟೇಲ್ ಕುಟುಂಬದವರಿಗೆ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ.
-ಎಚ್.ಕೆ. ನಟರಾಜ